ಅಧಿಕಾರಿಗಳು ಪ್ರಬುದ್ಧತೆಯಿಂದ ಕಾರ್ಯನಿರ್ವಹಿಸಿ
Team Udayavani, May 30, 2017, 1:00 PM IST
ಪಿರಿಯಾಪಟ್ಟಣ: ಸಾಮಾನ್ಯ ಸಭೆಗೆ ಆಗಮಿಸುವ ಎಲ್ಲಾ ಇಲಾಖೆಯ ಅಧಿಕಾರಿಗಳು ಕಳೆದ ಬಾರಿಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಸಭೆಗೆ ವಿವರ ನೀಡುವಂತೆ ತಾಪಂ ಅಧಕ್ಷೆ ನಿರೂಪರಾಜೇಶ್ ಸೂಚನೆ ನೀಡಿದರು.
ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಮಾತನಾಡಿ, ಎಲ್ಲಾ ಅಧಿಕಾರಿಗಳು ಪ್ರಬುದ್ಧತೆಯಿಂದ ಕಾರ್ಯನಿರ್ವಹಿಸಬೇಕು. ನಿರ್ಣಯ ಕೈಗೊಂಡರಷ್ಟೆ ಸಾಲದು ಆಗು ಹೋಗುಗಳ ಬಗ್ಗೆ ಅಧಿಕಾರಿಗಳು ಸಭೆಗೆ ಮನದಟ್ಟು ಮಾಡುವಂತೆ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶಿವರಾಮೇಗೌಡ ಮಾತನಾಡಿ, ತಾಲೂಕಿನಲ್ಲಿ ಮೇ ಅಂತ್ಯದ ವರೆಗೆ 183 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 350 ಮಿ.ಮೀ. ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ. ತಾಲೂಕಿನ 4 ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗಿದ್ದು, 30 ಸಾವಿರ ಹೆಕ್ಟೇರ್ ಪ್ರದೇಶಗಳ ಪೈಕಿ 29 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ತಂಬಾಕು, ಜೋಳ ಮತ್ತಿತರ ಬೆಳೆಗಳ ನಾಟಿ ನಡೆದಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ 363 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಕಸಬಾ ಕೃಷಿ ಅಧಿಕಾರಿ ಮಹೇಶ್ ರೈತರನ್ನು ಗೋಳುಹುಯ್ದು ಕೊಳ್ಳುತ್ತಿದ್ದು, ಕಚೇರಿಗೆ ಅಲೆಸುತ್ತಾರೆ. ಅಲ್ಲದೆ ಕೃಷಿ ಇಲಾಖೆಯ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದ್ದು, ಕಡಿವಾಣ ಹಾಕುವಂತೆ ಸದಸ್ಯ ಶ್ರೀನಿವಾಸ್ ಆಗ್ರಹಿಸಿದರು.
ಮತ್ತೂಬ್ಬ ಸದಸ್ಯ ಆರ್.ಎಸ್.ಮಹದೇವ ಮಾತನಾಡಿ, ಸೆಸ್ಕ್ ಇಲಾಖೆಯ ಎಲ್ಲಾ ವರದಿಗಳು ಇಂಗ್ಲಿಷ್‌ನಲ್ಲಿ ನೀಡಿದ್ದು, ನಾವೇನು ಇಂಗ್ಲೆಂಡ್‌ನಲ್ಲಿ ಇದ್ದೇವೆಯೇ? ಎಂದು ಪ್ರಶ್ನಿಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ರಾಮು, ಸೆಸ್ಕ್ ಎಇಇ ವಾಜಿರ್ ಖಾನ್‌ರನ್ನು ತರಾಟೆಗೆ ತೆಗೆದುಕೊಂಡು ಎಲ್ಲಾ ಸಭೆಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಇಲ್ಲದಿದ್ದರೆ ನಿರ್ಣಯ ಕೈಗೊಂಡು ಸಭೆಯಿಂದ ಆಚೆಗೆ ಕಳಿಸಲಾಗುವುದು ಎಂದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಘುನಂದನ್ ಮಾತನಾಡಿ, ಲಕ್ಷಿಪುರ, ಸತ್ಯಗಾಲ, ಅಳಲೂರು ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಹೊಸದಾಗಿ ಕೊಳವೆ ಬಾವಿ ಕೊರೆಸಿ ನೀರು ಒದಗಿಸಲಗುತ್ತಿದೆ. 2016-17ನೇ ಸಾಲಿನಲ್ಲಿ ತಾಪಂ ಅನುದಾನ 20 ಲಕ್ಷ ರೂ ಬಿಡುಗಡೆಯಾಗಿದ್ದು, ಸಂಪೂರ್ಣ ಹಣ ಅನುದಾನ ಉಪಯೋಗಿಸಲಾಗಿದೆ ಎಂದು ವಿವರ ನೀಡಿದರು.
ಬಿಇಒ ಕರಿಗೌಡ ಸಭೆಗೆ ವಿವರ ನೀಡಿ ಇದೇ ತಿಂಗಳ 29ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ತಾಲೂಕಿನಲ್ಲಿ 14 ಶಿಕ್ಷಕರ ಹುದ್ದೆ ಖಾಲಿಯಿದೆ. ಸಮವಸ್ತ್ರ, ಶಾಲಾ ಪುಸ್ತಕಗಳು ಹಾಗೂ ಬೈಸಿಕಲ್‌ಗಳ ಈಗಾಗಲೇ ಬಂದಿದ್ದು, ಇವುಗಳನ್ನು ವಿತರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ಎಸ್‌ಎಸ್‌ಎಲ್‌ಸಿಯಲ್ಲಿ ಈ ವರ್ಷ ಶೇ 82 ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲಾಗಿದೆ ಎಂದು ತಿಳಿಸಿದರು.
ಸದಸ್ಯ ಮೋಹನ್‌ರಾಜ್ ಮಾತನಾಡಿ, ಪಟ್ಟಣದ ಪುಷ್ಪಾ$ವಿದ್ಯಾ ಸಂಸ್ಥೆಯಲ್ಲಿ ಸಿಬಿಎಸ್‌ಸಿ ಪಠ್ಯಕ್ರಮವಿಲ್ಲದಿದ್ದರು ಮಕ್ಕಳನ್ನು ಅಧಿಕ ಶುಲ್ಕ ವಸೂಲಿ ಮಾಡಿ ಅಕ್ರಮವಾಗಿ ಪ್ರವೇಶ ಪಡೆಯಲಾಗಿತ್ತಿದೆ. ನೀವು ಅಧಿಕಾರಿಯಾಗಿ ಏನು ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಬಿಇಒ ಕರಿಗೌಡ ಹಾರಿಕೆಯ ಉತ್ತರ ನೀಡಿ ವಿಷಯಾಂತರ ಮಾಡಿದರು.
ಸಭೆಯಲ್ಲಿ ಇದಲ್ಲದೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಶುಪಾಲನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಉಪಾಧ್ಯಕ್ಷೆ ಜಯಮ್ಮ ಜವರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು, ಇಒ ಬಸವರಾಜು, ಸದಸ್ಯರಾದ ಕುಂಜಪ್ಪ ಕಾರ್ನಡ್, ಶ್ರೀನಿವಾಸ್, ಈರಯ್ಯ, ಮಾನು, ರಂಗಸ್ವಾಮಿ, ಮೋಹನ್‌ರಾಜ್, ಮಲ್ಲಿಕಾರ್ಜುನ, ವಿವಿಧ ಇಲಾಖೆಯ ಅಧಿಕಾರಿಗಳಾದ ಎಂಜಿನಿಯರ್ ಪ್ರಭು, ಶಿವರಾಜು, ಚಾಮರಾಜು, ಚಂದ್ರಪ್ಪ, ಡಾ.ನಾಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.