ಸೌಲಭ್ಯಕ್ಕಾಗಿ ಸಂಘಟಿತ ಹೋರಾಟ ನಡೆಸಿ
Team Udayavani, May 19, 2019, 3:00 AM IST
ಹುಣಸೂರು: ದೇಶದಲ್ಲಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹುನ್ನಾರ ನಡೆಯುತ್ತಿದ್ದು, ಸರ್ವರಿಗೂ ಸಮಪಾಲು ಧ್ಯೇಯದಡಿ ನಮಗೆ ದಕ್ಕಬೇಕಾದ ಅವಕಾಶಗಳನ್ನು ಉಳಿಸಿಕೊಳ್ಳಲು ದಲಿತ ಸಮುದಾಯವು ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಮನವಿ ಮಾಡಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶವನ್ನು ಕಟ್ಟಿದ ಜನರ ಪ್ರತಿಫಲವನ್ನು ಈ ಹಿಂದಿನಿಂದಲೂ ಲಪಟಾಯಿಸುತ್ತಾ ಬಂದಿರುವ ಮಂದಿ ಇದೀಗ ಸಂವಿಧಾನದ ಆಶಯಗಳು ಈಡೇರದಂತೆ ತಡೆಯೊಡ್ಡಲು ಹುನ್ನಾರ ನಡೆಸುತ್ತಿದ್ದಾರೆ.
ಅಧಿಕಾರಿ ವರ್ಗ ಭೂ ಮಾಲೀಕರ ಪರ ನಿಂತು ಶೋಷಿತರನ್ನು ತಾತ್ಸಾರದಿಂದ ನಡೆದುಕೊಳ್ಳುತ್ತಿದೆ. ಕಾರ್ಯಕರ್ತರು ರಾಜಕಾರಣಿಗಳನ್ನು ಓಲೈಸುವ ಸ್ಥಿತಿ ನಿರ್ಮಾಣವಾಗಿದೆ. ಸ್ವಾರ್ಥಪರ, ಭ್ರಷ್ಟತೆಯಲ್ಲಿಯೇ ಮುಳುಗಿರುವ ರಾಜಕಾರಣ, ಜನ ಹಿತಾಸಕ್ತಿ ಮರೆತು ಸ್ವಾರ್ಥ, ಸ್ವಜನ ಪಕ್ಷಪಾತ ಮೈಗೂಡಿಸಿಕೊಂಡಿರುವುದರಿಂದ ಉದ್ಯೋಗ ಸೃಷ್ಟಿಯಾಗದೇ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ನರೇಗಾ ಯೋಜನೆಯ ಕೂಲಿ ಕಾರ್ಮಿಕರಾಗಿದ್ದಾರೆ.
ಡಾಕ್ಟರ್, ಎಂಜಿನಿಯರ್ ಓದಿದವರು ಪಕೋಡ ಮಾರುವ ಸ್ಥಿತಿಗೆ ಬಂದಿದ್ದಾರೆ. ಸಂವಿಧಾನದ ಶಕ್ತಿ ಕುಂದಿಸುವ, ಸಂವಿಧಾನವನ್ನೇ ಬುಡಮೇಲು ಮಾಡುವ, ಹಿಂದುಳಿದ ವರ್ಗಗಳನ್ನು ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಸಂಘಟನೆಯನ್ನು ಬಲಪಡಿಸಿ ಇಂತಹ ತಾರತಮ್ಯಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾದ ರತ್ನಪುರಿಪುಟ್ಟಸ್ವಾಮಿ, ಹೆಗ್ಗನೂರು ನಿಂಗರಾಜು, ತಾಲ್ಲೂಕು ಸಂಚಾಲಕರಾದ ಡೇವಿಡ್, ಮುತ್ತುರಾಯನಹೊಸಹಳ್ಳಿ ಶಿವರಾಜ್, ಪ್ರಸ್ತುತ ಸಂದರ್ಭದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಶೋಕ ಕಟ್ಟೆಮಳಲವಾಡಿ, ಮಹದೇವ ಬೀರನಹಳ್ಳಿ, ಜಯಣ್ಣ ಖಜಾಂಚಿ, ಮಹಿಳಾ ಒಕ್ಕೂಟದ ಸಂಚಾಲಕರಾದ ಉದ್ದೂರು ಶಾಂತಿ, ಚಂದ್ರಪ್ರಭಾ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.