ನಮ್ಮ ಚುನಾವಣ ತಂತ್ರ ಬೇರೆಯೇ ಇದೆ: ಸಿಎಂ ಬೊಮ್ಮಾಯಿ
ಪ್ರಧಾನಿ ಸಲಹೆಯಂತೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ
Team Udayavani, Jan 27, 2023, 10:37 PM IST
ಮೈಸೂರು: ಬೇರೆ ಪಕ್ಷದವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದಾರೆ ಎಂದ ಮಾತ್ರಕ್ಕೆ ನಾವು ಬಿಡುಗಡೆಗೊಳಿಸಬೇಕು ಎಂದೇನಿಲ್ಲ. ನಮ್ಮ ಚುನಾವಣ ತಂತ್ರ ಬೇರೆಯೇ ಇದೆ. ಅವರು ಮಾಡಿದಂತೆಯೇ ಮಾಡ ಬೇಕು ಎನ್ನುವುದೇನಿಲ್ಲ. ನಮ್ಮದು ವಿಭಿನ್ನ ತಂತ್ರಗಾರಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಮತಗಳನ್ನು ಸೆಳೆಯಿರಿ ಎಂದು ಹೇಳಿಲ್ಲ. ಬದಲಿಗೆ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದಿದ್ದಾರೆ. ಶಿಕ್ಷಣದ ಕೊರತೆ ಇರುವ, ಬಡತನ ಇರುವವರನ್ನು ಮೇಲೆತ್ತಬೇಕು ಎಂದಿದ್ದಾರೆ. ದೇಶ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂಬ ಉದ್ದೇಶದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದಿದ್ದಾರೆ ಅಷ್ಟೆ ಎಂದರು.
ಭಾಗ್ಯವೇ ಕಾಂಗ್ರೆಸ್‌ಗೆ ದೌರ್ಭಾಗ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾದಿ ಭಾಗ್ಯ, ಅನ್ನ ಭಾಗ್ಯ ನೀಡುವುದಾಗಿ ಹೇಳಿದ್ದರು. ಆದರೆ ಅವರ ಪಕ್ಷಕ್ಕೆ ಅದೇ ದೌರ್ಭಾಗ್ಯವಾಗಿದೆ. ಅದೇ ಬೇಕು ಎಂದಾದರೆ ಮುಂದುವರಿಸಿಕೊಂಡು ಹೋಗಲಿ. ನಾವೇನು ಸಿದ್ದರಾಮಯ್ಯ ಅವರ ರಾಜಕೀಯ ಸನ್ಯಾಸತ್ವವನ್ನು ಕೇಳಿರಲಿಲ್ಲ. ಮನುಷ್ಯನ ಮನಸ್ಥಿತಿ ಅವರ ರಾಜಕೀಯ ಸ್ಥಿತಿಯ ಅಭಿವ್ಯಕ್ತಿ. ಯಾಕೆಂದರೆ ಫೇಸ್ ಈಸ್ ಇಂಡೆಕ್ಸ್ ಆಫ್ ದಿ ಮೈಂಡ್ ಅಂತಾರೆ ಎಂದು ಲೇವಡಿ ಮಾಡಿದರು.
ಮಂಡ್ಯದಲ್ಲಿ ಆರ್. ಅಶೋಕ್‌ಗೆ ಯಾವುದೇ ವಿರೋಧವಿಲ್ಲ. ಪ್ರತಿಯೊಬ್ಬರೂ ಸ್ವಾಗತಿಸಿದ್ದಾರೆ. ಅದ್ದೂರಿಯಾಗಿ ಮೆರವಣಿಗೆ ಮಾಡಿದ್ದಾರೆ. ಯಾವುದೋ ಪೋಸ್ಟರ್ ಅಂಟಿ ಸಿದ್ದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ಚಿರತೆ ಟಾಸ್ಕ್ ಪೂರ್ಸ್ ನಿರಂತರ
ಆನೆ, ಚಿರತೆ ದಾಳಿಯನ್ನು ನಿಯಂತ್ರಿ ಸುವ ಸಲುವಾಗಿ ಚಿರತೆ ಮತ್ತು ಆನೆ ಸೆರೆ ಹಿಡಿಯಲು ರಚಿಸಲಾದ ಟಾಸ್ಕ್ ಫೋರ್ಸ್ ಗಳು ನಿರಂತರವಾಗಿ ಇರಲಿದೆ. ಒಂದು ಕಾರ್ಯಾಚರಣೆ ಮುಗಿದ ಕೂಡಲೇ ರದ್ದುಪಡಿಸುವುದಿಲ್ಲ. ಮೈಸೂರಿನಲ್ಲಿ ಈಗಾಗಲೇ ಚಿರತೆ ಸೆರೆ ಹಿಡಿಯಲಾಗಿದೆ. ಈಗ ಹಾಸನ ಸಹಿತ ಬೇರೆ ಕಡೆ ಇಂತಹ ಸಮಸ್ಯೆ ಇದೆ. ಆದ್ದರಿಂದ ಟಾಸ್ಕ್ ಫೋರ್ಸ್ ನಿರಂತರವಾಗಿರಲಿದೆ ಎಂದರು.
ಚುನಾವಣೆ ಉದ್ದೇಶದಿಂದ ಮಾತ್ರವಲ್ಲ, ಕಳೆದ ಬಾರಿಯೂ ಜನಪರ ಬಜೆಟ್ ನೀಡಿದ್ದೆವು. ಈಗಲೂ ಜನಪರವಾದ ಬಜೆಟ್ ನೀಡುತ್ತೇವೆ. ಕಳೆದ ಬಾರಿ ಬಜೆಟ್‌ನಲ್ಲಿ ನಾವು ಏನೆಲ್ಲ ಘೋಷಿಸಿದ್ದೆವು, ಏನೆಲ್ಲ ಈಡೇರಿಸಿದ್ದೇವೆ ಎಂಬುದನ್ನು ಬಜೆಟ್ ಮಂಡನೆ ವೇಳೆ ತಿಳಿಸುತ್ತೇವೆ. ಈಗ ಇಡೀ ಕರ್ನಾಟಕ ಬಜೆಟ್ ಕುರಿತು ನಿರೀಕ್ಷಿಸುತ್ತಿದೆ.
-ಬಸವರಾಜ ಬೊಮ್ಮಾಯಿ, ಸಿಎಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.