ಪೋಷಕರೇ, ಮಕ್ಕಳು ಕೆರೆಕಟ್ಟೆಯತ್ತ ತೆರಳದಂತೆ ನಿಗಾವಹಿಸಿ
Team Udayavani, Feb 23, 2020, 3:00 AM IST
ಎಚ್.ಡಿ.ಕೋಟೆ: ಶಿವರಾತ್ರಿ ಪ್ರಯುಕ್ತ ಶುಕ್ರವಾರ ರಜೆ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ಹೋಗಿ ದುರ್ಮರಣ ಹೊಂದಿದ ನಾಲ್ವರು ಬಾಲಕರ ಅಂತ್ಯಕ್ರಿಯೆ ಶನಿವಾರ ಪೋಷಕರ ಮುಗಿಲು ಮುಟ್ಟುವ ಆಕ್ರಂದನಗಳ ನಡುವೆ ನೆರವೇರಿತು. ಈ ಪೈಕಿ ಓರ್ವ ಬಾಲಕ ಹುಟ್ಟುಹಬ್ಬ ದಿನದಂದೇ ಚಿತೆಗೇರಿದ್ದು ಮನಕುಲುಕುಂತಿತ್ತು.
ಶಾಸಕ ಅನಿಲ್ ಚಿಕ್ಕಮಾದು ಹಾಗೂ ತಹಶೀಲ್ದಾರ್ ಆರ್. ಮಂಜುನಾಥ್ ಗ್ರಾಮಕ್ಕೆ ಭೇಟಿ ನೀಡಿ ಬಾಲಕರ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ, ಈ ಹೃದಯವಿದ್ರಾವಕ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ , “ವಿದ್ಯಾರ್ಥಿಗಳು ನೀರಿನ ಕಡೆ ಹೋಗದಂತೆ ಪೋಷಕರು ಎಚ್ಚರವಹಿಸಬೇಕು. ಬೇಸಿಗೆ ರಜೆ ಸಮೀಪಿಸುತ್ತಿದ್ದು, ಕೆರೆ ಕಟ್ಟೆಗಳತ್ತ ತೆರಳದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ತಾಲೂಕಿನ ಗೆಂಡೆಗೌಡರ ಶೆಡ್ಡು ಗ್ರಾಮದ ಒಂದೇ ಕುಟುಂಬದ ಯಶವಂತ್ (17), ರೋಹಿತ್ (15) ಹಾಗೂ ಜಿ.ಜಿ.ಕಲೋನಿಯ ಕಿರಣ (15), ಇದೇ ಗ್ರಾಮದ ಕೆಂಡಗಣ್ಣ (15) ಇಲ್ಲಿನ ಪಡುಕೋಟೆ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟ ದುರ್ದೈವಿಗಳು. ಶುಕ್ರವಾರ ಸಂಜೆ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟ ಬಾಲಕರ ಮೃತದೇಹಗಳನ್ನು ಶುಕ್ರವಾರ ರಾತ್ರಿ ಕೆರೆಯಿಂದ ಹೊರತೆಗೆದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಶನಿವಾರ ಮುಂಜಾನೆ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಯಿತು.
ಸೂತಕದ ಛಾಯೆ: ಗೆಂಡೇಗೌಡರ ಶೆಡ್ಡು ಗ್ರಾಮದ ಯಶವಂತ್ ಮತ್ತು ರೋಹಿತ್ ಒಂದೇ ಕುಟುಂಬದ ಸಹೋದರರಿಬ್ಬರ ಸಾವಿನಿಂದ ಕುಟುಂಬವರ್ಗದವರಷ್ಟೇ ಅಲ್ಲದೇ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಮೃತದೇಹಗಳ ಪಕ್ಕದಲ್ಲಿ ಕುಳಿತು ರೋದಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಮಧ್ಯಾಹ್ನ ಮೃತದೇಹಗಳಿಗೆ ಅಗ್ನಿಸ್ಪರ್ಶ ನೆರವೇರಿಸುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಶಾಸಕರು, ವಿದ್ಯಾರ್ಥಿಗಳಿಂದ ಅಂತಿಮ ದರ್ಶನ: ತಾಲೂಕಿನ ಜಿ.ಜಿ.ಕಾಲೋನಿಯಲ್ಲಿ ವಿದ್ಯಾರ್ಥಿಗಳು ದುರ್ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಅನಿಲ್ ಚಿಕ್ಕಮಾದು ಹಾಗೂ ತಹಶೀಲ್ದಾರ್ ಆರ್.ಮಂಜುನಾಥ್ ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಾಲೆಯ ವಿದ್ಯಾರ್ಥಿಗಳು ಕೂಡ ಗ್ರಾಮಕ್ಕೆ ಆಗಮಿಸಿ ಅಗಲಿದ ಸ್ನೇಹಿತರ ಅಂತಿಮ ದರ್ಶನ ಪಡೆದರು.
ಹುಟ್ಟುಹಬ್ಬದ ದಿನವೇ ಚಿತೆಗೇರಿದ ಬಾಲಕ: ಶನಿವಾರ ಹುಟ್ಟುಹಬ್ಬ ಆಚರಿಸಬೇಕಿದ್ದ ಜಿ.ಜಿ.ಕಾಲೋನಿಯ ಬಾಲಕ ಕೆಂಡಣ್ಣ (15) ಸಾವು ಅವರ ಕುಟುಂಬಕ್ಕೆ ಬರ ಸಿಡಿಲು ಬಡಿದಂತಿತ್ತು. ಜನ್ಮದಿನದಂದೇ ಬಾಲಕ ಅಂತ್ಯಸಂಸ್ಕಾರ ನೆರವೇರಿಸುವಂತಾಗಿದ್ದಕ್ಕೆ ಪೋಷಕರ ಅಕ್ರಂದನ ಮುಗಿಲು ಮುಟ್ಟುವಂತಿತ್ತು. ತಂದೆ ಇಲ್ಲದ ಕೆಂಡಗಣ್ಣ ಒಬ್ಬನೇ ಮಗನಾಗಿದ್ದು, ಇದ್ದ ಒಬ್ಬ ಮಗನನ್ನೂ ಕಳೆದುಕೊಂಡ ತಾಯಿಯ ಅಸಹಾಯಕತೆ ಹೇಳ ತೀರದಾಗಿತ್ತು. ಈ ವೇಳೆ, ನೆರೆದಿದ್ದವರ ಕಣ್ಣಾಲಿಗಳು ನೀರಾಗಿದ್ದವು. ಮೃತಪಟ್ಟ ಮೂವರು ಬಾಲಕರು ಸ್ನೇಹಿತರಾಗಿದ್ದರಿಂದ ಕೆಂಡಣ್ಣ ಅವರ ಜೊತೆ ಈಜಲು ಕೆರೆಗೆ ತೆರಳಿದ್ದನು.
ಉದಯವಾಣಿ ಕಾಳಜಿ: ಶಾಲೆ ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಕೆರೆ ಕಟ್ಟೆಗಳಿಗೆ ಈಜಲು ತೆರಳಿ ಆಕಸ್ಮಿಕವಾಗಿ ದುರ್ಮರಣಕ್ಕೀಡಾಗುತ್ತಿರುವುದು ಕಂಡು ಬರುತ್ತಿದೆ. ಇದೀಗ ಪರೀಕ್ಷಾ ಸಮಯವಾಗಿದ್ದು, ಬೇಸಿಗೆ ರಜೆ ಸಮೀಪಿಸುತ್ತಿದೆ. ಈ ವೇಳೆ, ಮಕ್ಕಳು ಬೇಸಿಗೆ ತಣಿಸಲು ಹಾಗೂ ಈಜಲು ನೀರಿಗಿಳಿಯುವುದು ಸಾಮಾನ್ಯವಾಗಿದೆ. ಈ ಭಾಗದಲ್ಲಿ ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಈ ಪೈಕಿ ಕೆಲ ಕೆರೆಕಟ್ಟೆಗಳು ಕೆಸರು ಹಾಗೂ ಹೂಳಿನಿಂದ ತುಂಬಿವೆ. ಅಲ್ಲದೇ ಅಲ್ಲಲ್ಲಿ ಕೃಷಿ ಹೊಂಡಗಳು ಕೂಡ ಇವೆ.
ಇಲ್ಲಿ ವಿದ್ಯಾರ್ಥಿಗಳು ಈಜಲು ತೆರಳಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೋರಬೇಕಿದೆ. ಕೆರೆಕಟ್ಟೆಗಳತ್ತ ತೆರಳದಂತೆ ಜಾಗೃತಿ ವಹಿಸಬೇಕಾಗಿದೆ. ಮಕ್ಕಳ ಓಡಾಟ, ಚಟುವಟಿಕೆಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕಾಗಿದೆ. ತಾಲೂಕು ಆಡಳಿತ ಕೂಡ ಮುಂಜಾಗ್ರತಾ ಕ್ರಮ ಕೈಗೊಂಡು, ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಹಾಗೂ ಕೃಷಿ ಹೊಂಡಗಳ ಬಳಿ ತಡೆಗೋಡೆ ನಿರ್ಮಿಸುವಂತೆ ಮಾಡಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.