ಮೈಸೂರು ನಗರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ
Team Udayavani, Jun 9, 2018, 2:47 PM IST
ಮೈಸೂರು: ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ವೇದಿಕೆಯಾಗಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೈಸೂರು ನಗರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ, ಶಾಂತಿಯುತ ಮತದಾನ ನಡೆಯಿತು.
ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ 5 ಸಾಮಾನ್ಯ, 4 ಸೂಕ್ಷ್ಮ ಹಾಗೂ 3 ಅತಿಸೂಕ್ಷ್ಮ ಸೇರಿದಂತೆ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ನಿಗದಿಯಂತೆ ಬೆಳಗ್ಗೆ 7 ಗಂಟೆಯಿಂದಲೇ ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆ ಆರಂಭಗೊಂಡಿತು.
ಆದರೆ ಬೆಳಗ್ಗಿನಿಂದಲೇ ಸುರಿಯುತ್ತಿದ್ದ ತುಂತುರು ಮಳೆಯಿಂದಾಗಿ ಹೆಚ್ಚಿನ ಮತದಾರರು ಆರಂಭದ ಹಲವು ಗಂಟೆಗಳವರೆಗೂ ಮತಗಟ್ಟೆಗಳತ್ತ ಮುಖ ಮಾಡಲಿಲ್ಲ. ಹೀಗಾಗಿ ಮತದಾನ ಆರಂಭಗೊಂಡ ಹಲವು ಹೊತ್ತಿನವರೆಗೂ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದಗತಿಯಿಂದ ಸಾಗಿದ ಪರಿಣಾಮ ಹಲವು ಮತಗಟ್ಟೆಗಳಲ್ಲಿ ಬೆರಳೆಣಿಕೆಯಷ್ಟು ಮತದಾರರು ಮಾತ್ರವೇ ಕಂಡು ಬಂದರು.
12ರ ವೇಳೆಗೆ ಚುರುಕು: ನಗರದಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಸುರಿದ ಮಳೆ ಮತದಾರರ ಉತ್ಸಾಹಕ್ಕೆ ಅಡ್ಡಿಪಡಿಸಿತು. ಬೇಗನೇ ಮತ ಚಲಾಯಿಸಿ ಕೆಲಸ ಕಾರ್ಯಗಳಿಗೆ ಹೋಗುವ ಲೆಕ್ಕಾಚಾರದಲ್ಲಿದ್ದ ಮತದಾರರು ತಮ್ಮ ಹಕ್ಕು ಚಲಾಯಿಸಲು ಸ್ವಲ್ಪಮಟ್ಟಿಗೆ ತಡವಾಯಿತು.
ಆದರೆ ಮಳೆಯಿಂದ ನಿಧಾನ ಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನ 12ರ ಹೊತ್ತಿಗೆ ಬಿರುಸುಗೊಂಡಿತು. ಅತ್ಯುತ್ಸಾಹದಿಂದ ಮತಗಟ್ಟೆಗಳತ್ತ ಮುಖ ಮಾಡಿದ ಶಿಕ್ಷಕರು ಸರದಿಯಲ್ಲಿ ನಿಂತು ಉತ್ಸಾಹದಿಂದ ಮತ ಚಲಾವಣೆ ಮಾಡಿದರು. ಇದರಿಂದಾಗಿ ನಗರದ ಎಲ್ಲಾ ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಚುನಾವಣಾ ಅಖಾಡ ಸ್ವಲ್ಪಮಟ್ಟಿಗೆ ಕಾವು ಪಡೆಯಿತು.
ಕೊನೆ ಕ್ಷಣದ ಕಸರತ್ತು: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಈಗಾಗಲೇ ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ನಡೆಸಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಶುಕ್ರವಾರವೂ ಮತದಾರರ ಮನವೊಲಿಕೆಗೆ ಕಸರತ್ತು ನಡೆಸಿದರು.
ನಗರದಲ್ಲಿ ತೆರೆಯಲಾಗಿದ್ದ ಮತಗಟ್ಟೆಗಳ ಮುಂದೆ ಬೀಡುಬಿಟ್ಟಿದ್ದ ಮೂರು ಪಕ್ಷಗಳ ಮುಖಂಡರು, ಬೆಂಬಲಿಗರು ಮತಗಟ್ಟೆಗೆ ಆಗಮಿಸುತ್ತಿದ್ದ ಮತದಾರರಿಗೆ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಪ್ರಮುಖವಾಗಿ ಬಿಜೆಪಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ
ಸೇರಿದಂತೆ ಇನ್ನಿತರರು ನಗರದ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿರುವ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಮೀಪ ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರವಾಗಿ ಮತಯಾಚನೆ ನಡೆಸಿದರು. ಇವರೊಂದಿಗೆ ಕಣದಲ್ಲಿರುವ ಮೂರು ಪಕ್ಷದ ಅಭ್ಯರ್ಥಿಗಳಾದ ನಿರಂಜನಮೂರ್ತಿ, ಮರಿತಿಬ್ಬೇಗೌಡ ಹಾಗೂ ಎಂ.ಲಕ್ಷ್ಮಣ್ ಕೂಡ ಮತಗಟ್ಟೆಗಳಿಗೆ ಭೇಟಿ ನೀಡಿ, ಅಂತಿಮ ಹಂತದ ಕಸರತ್ತು ನಡೆಸಿದರು.
ಪೊಲೀಸ್ ಬಂದೋಬಸ್ತ್: ಚುಣಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಈ ನಡುವೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ನಗರದ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.