ಜನಪ್ರತಿನಿಧಿಗಳು ಹೇಳಿದ್ದನ್ನು ಕೇಳಲೇಬೇಕು
Team Udayavani, Feb 17, 2019, 7:35 AM IST
ಮೈಸೂರು: ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ 2017-18ನೇ ಸಾಲಿನಲ್ಲಿ ಬರ ಪರಿಹಾರದ ತುರ್ತು ಕಾಮಗಾರಿ ಹೆಸರಲ್ಲಿ 10.73 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಅವರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.
ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಸಭೆಯ ಆರಂಭದಿಂದಲೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ, ಜಿಲ್ಲಾಮಟ್ಟದ ಅಧಿಕಾರಿಗಳ ಬಗ್ಗೆ ಎದ್ದು ನಿಂತು, ಮೇಜು ಕುಟ್ಟಿ, ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಆದರೂ ಜಿಪಂ ಸಿಇಒ ಕೆ.ಜ್ಯೋತಿ ಅವರು, ಆಗಾಗ್ಗೆ ಅಚ್ಯುತಾನಂದ ಅವರ ಆಕ್ಷೇಪಗಳಿಗೆ ಸಮಜಾಯಿಷಿ ಕೊಟ್ಟು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ವಿವರವಾದ ಉತ್ತರ ಕೊಡಿಸುವ ಪ್ರಯತ್ನ ಮಾಡುತ್ತಿದ್ದರೂ 10.73 ಕೋಟಿ ರೂ. ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ರಕ್ಷಣೆ ಮಾಡಲು ಯತ್ನಿಸುತ್ತಿದ್ದೀರಿ ಎಂಬ ಹೇಳಿಕೆಯಿಂದ ಸಹನೆ ಕಳೆದುಕೊಂಡ ಸಿಇಒ,
ನಾನಿಲ್ಲಿ ಯಾರ ರಕ್ಷಣೆಗೂ ಕುಳಿತಿಲ್ಲ. ಎಲ್ಲವನ್ನೂ ವಿವರಿಸಲು ನಾನು ಸಿದ್ಧವಿದ್ದೇನೆ. ಆದರೆ, ನೀವು ಕೇಳಿಸಿಕೊಳ್ಳುವ ತಾಳ್ಮೆ ತೋರುತ್ತಿಲ್ಲ. ಪದೇ ಪದೆ ನನಗೆ ಅವಮಾನ ಮಾಡುತ್ತೀದ್ದೀರಿ, ನೀವು ಹೇಳಿದ್ದನ್ನೆಲ್ಲಾ ಕೇಳಲು ಸಾಧ್ಯವಿಲ್ಲ ಎಂದು ಏರಿದ ಧ್ವನಿಯಲ್ಲೇ ತಿರುಗೇಟು ನೀಡಿದರು.
ಕೂಡಲೇ ಸಭಾಂಗಣದಲ್ಲಿ ಕುಳಿತಿದ್ದ ಅಧಿಕಾರಿಗಳು ಎದ್ದು ಸಿಇಒ ಬೆಂಬಲಕ್ಕೆ ನಿಂತರು. ಇದರಿಂದ ಆಕ್ರೋಶಗೊಂಡ ಅಚ್ಯುತಾನಂದ ಯಾರಿಗೂ ಅವಮಾನ ಮಾಡಲು ನಾನು ಇಲ್ಲಿ ಬಂದಿಲ್ಲ. ಅವ್ಯವಹಾರ ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವುದರಿಂದ ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಆ ಬಗ್ಗೆ ನಾನು ಪ್ರಶ್ನೆ ಮಾಡುತ್ತಿದ್ದೇನೆ, ನನಗೆ ಉತ್ತರ ಸಿಗುವುದಿಲ್ಲ ಎನ್ನುವುದಾದರೆ ನಾನೇಕೆ ಸಭೆಯಲ್ಲಿ ಕೂರಬೇಕು ಎಂದು ಸಭಾತ್ಯಾಗಕ್ಕೆ ಮುಂದಾದರು. ಮಧ್ಯಪ್ರವೇಶಿಸಿದ ಅಧ್ಯಕ್ಷ ಸಾ.ರಾ.ನಂದೀಶ್, ಅಚ್ಯುತಾನಂದ ಅವರನ್ನು ಸಮಾಧಾನಪಡಿಸಿ ಕೂರಿಸಿ, ನಾನು ಅವ್ಯವಹಾರದ ಆಪಾದನೆ ಹೊರಿಸಿದ್ದೇನೆ.
ನನ್ನ ಆಪಾದನೆ ಸರಿಯೋ ತಪ್ಪೋ ಎಂಬುದು ತನಿಖೆ ಆಗಿ ತಪ್ಪಿಸ್ಥರ ವಿರುದ್ಧ ಕ್ರಮ ಆಗಲಿ, ಪೇಪರ್‌ನಲ್ಲಿ ಬಂದ ಮಾತ್ರಕ್ಕೆ ಯಾರು ಜೈಲಿಗೆ ಹಾಕಲ್ಲ. ಕತ್ತರಿಸಿ-ಉತ್ತರಿಸಿ ಜೈಲಿಗೆ ಹೋದವರೆ ತಲೆ ಎತ್ತಿಕೊಂಡು ಹೊರಗೆ ಬರ್ತಾರೆ ಎಂದು ಸಮಾಧಾನಪಡಿಸಿ ಕೂರಿಸಿದರು.
ಹೇಳಕಾಗಲ್ಲ!: ಸಭೆಯ ಆರಂಭದಲ್ಲಿ ಕೃಷಿ ಇಲಾಖೆಯ ಪ್ರಗತಿ ವರದಿ ನೀಡುತ್ತಿದ್ದ ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ ಅವರು ಬರ ಘೋಷಣೆಯಾಗಿರುವ ಪಿರಿಯಾಪಟ್ಟಣ, ಕೆ.ಆರ್.ನಗರ ತಾಲೂಕುಗಳಲ್ಲಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ವಿವರಿಸುತ್ತಿದ್ದಾಗ, ಜಂಟಿ ಸಮೀಕ್ಷೆಗೆ ಜಿಪಂ ಸದಸ್ಯರನ್ನೇಕೆ ಕರೆಯುವುದಿಲ್ಲ ಎಂದು ಅಚ್ಯುತಾನಂದ ಪ್ರಶ್ನಿಸಿದರು.
ಚುನಾಯಿತ ಪ್ರತಿನಿಧಿಗಳನ್ನು ಕರೆಯಬೇಕು ಎಂದು ನಿಯಮಾವಳಿಯಲ್ಲಿ ಇಲ್ಲ. ಹಾಗಾಗಿ ಕರೆದಿಲ್ಲ. ಗ್ರಾಮಲೆಕ್ಕಿಗರು ಮತ್ತು ಸಹಾಯಕ ಕೃಷಿ ನಿರ್ದೇಶಕರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ಕೊಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಗ್ರಾಮಲೆಕ್ಕಿಗರು ಮತ್ತು ಸಹಾಯಕ ಕೃಷಿ ನಿರ್ದೇಶಕರು ಸಮೀಕ್ಷೆ ಮಾಡುವುದಾದರೆ ಜನಪ್ರತಿನಿಧಿಗಳಿರುವುದೇತಕ್ಕೆ ಎಂದು ಅಚ್ಯುತಾನಂದ ಹರಿಹಾಯ್ದರು. ಈ ಹಂತದಲ್ಲಿ ಸಿಇಒ ನಿಯಮಾವಳಿ ತಿಳಿಸಲು ಮುಂದಾದಾಗ ಅಚ್ಯುತಾನಂದ ಅವರ ವಿರುದ್ಧವೂ ಹರಿಹಾಯ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಸಿಇಒ, ನಾನು ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ನಿಯಮಾವಳಿಯನ್ನು ಹೇಳಲೇ ಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಇದರಿಂದ ಕೆರಳಿದ ಅಚ್ಯುತಾನಂದ, ನಮ್ಮ ಗಮನಕ್ಕೆ ತರುವುದಿಲ್ಲ ಎನ್ನುವುದಾದರೆ ಕೃಷಿ ಇಲಾಖೆಯವರನ್ನೇಕೆ ಜಿಪಂ ಸಭೆಗೆ ಕರೆಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ಇವರು ಹೇಳಿದ್ದನ್ನು ಕೇಳಿಕೊಂಡು ಹೋಗುವುದಕ್ಕೆ ನಾವು ಬರಲ್ಲ. ಅದಕ್ಕೇ 10 ಕೋಟಿ ಅವ್ಯವಹಾರ ನಡೆದಿದೆ ಎಂದು ಪ್ರಶ್ನಿಸಿದರು.
ದಯವಿಟ್ಟು ಅರ್ಥಮಾಡಿಕೊಂಡು ಮಾತನಾಡಿ, ತಪ್ಪು ಮಾಹಿತಿ ಪಡೆದು ಏನೇನೋ ಅರ್ಥ ಮಾಡಿಕೊಳ್ಳಬೇಡಿ ಎಂದು ಸಿಇಒ ಹೇಳಿದರು. ಆದರೆ, ಕೇಳಿಸಿಕೊಳ್ಳಲು ಸಿದ್ಧರಿಲ್ಲದ ಅಚ್ಯುತಾನಂದ, ನಾನು ಎಲೆಕ್ಟೆಡ್ ಬಾಡಿ, ನಾನು ಹೇಳಿದ್ದನ್ನು ಕೇಳಲೇ ಬೇಕು ಎಂದರು,
ಅದಕ್ಕೆ ತಿರುಗೇಟು ನೀಡಿದ ಜಂಟಿ ಕೃಷಿ ನಿರ್ದೇಶಕರು, ಸರ್ಕಾರದ ಮಾರ್ಗಸೂಚಿಯಂತೆ ನಾವು ಕೆಲಸ ಮಾಡುತ್ತೇವೆ. ಕೆಡಿಪಿ ಸಭೆಗೆ ಸರ್ಕಾರಿ ಕಾರ್ಯಕ್ರಮಗಳ ಪ್ರಗತಿ ವರದಿ ಕೊಡಬೇಕಾದ್ದು ನನ್ನ ಕರ್ತವ್ಯ ಆ ಕೆಲಸ ಮಾಡುತ್ತಿದ್ದೇನೆ. ನೀವು ಕೇಳ್ತೀರಿ ಅಂತಾ ನಮ್ಮ ಕಚೇರಿಯಲ್ಲಿ ನಡೆಯುವುದನ್ನೆಲ್ಲಾ ಹೇಳವುದಕ್ಕಾಗಲ್ಲ ಎಂದು ಹೇಳಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕಡೆಗೆ ಸಿಇಒ ಕೆಡಿಪಿ ನಿಯಮಾವಳಿಯಂತೆ ಪ್ರಗತಿ ಪರಿಶೀಲನಾ ಸಭೆ ಮಾಡಿ, ಹೊಸ ನಿಯಮಾವಳಿ ಮಾಡಬೇಕಾದರೆ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಸಲಹೆ ನೀಡಿದರು.
ನಂತರ ಬೇರೆ ಬೇರೆ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಅಂತಿಮವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೈಗೊಳ್ಳಲಾಗಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಾ.ರಾ.ನಂದೀಶ್ ಮಾಡಿದ್ದ ಆರೋಪಕ್ಕೆ ಸ್ಪಷ್ಟನೆ ಕೊಡಲು ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಯತ್ನಿಸಿದರೂ ತಮ್ಮ ಆರೋಪ ಸಾಬೀತುಪಡಿಸಲು ಸಿದ್ಧನಿದ್ದೇನೆ,
ನಡೆಯಿರಿ ಈಗಲೇ ಸಭೆ ಮೊಟಕುಗೊಳಿಸಿ ಸ್ಥಳ ಪರಿಶೀಲನೆಗೆ ಹೋಗೋಣ ಎಂದಾಗ ಮಧ್ಯಪ್ರವೇಶಿಸಿದ ಸಿಇಒ, ಸಭೆಯನ್ನು ಬೇಕಾಬಿಟ್ಟಿ ನಡೆಸಬೇಡಿ, ನೀವು ಹೇಳುತ್ತಿರುವ ಪ್ರಕರಣದಲ್ಲಿ ಒಂದು ಪೈಸೆಯೂ ಬಿಲ್ ಆಗಿಲ್ಲ. ಬಿಲ್ ಪಾವತಿಯೇ ಆಗದಿರುವಾಗ ಅವ್ಯವಹಾರ ನಡೆದಿದೆ ಎಂದು ಹೇಗೆ ಹೇಳುತ್ತೀರಾ?
ಇದು ನನ್ನ ರೆಪ್ಯುಟೇಷನ್ ಪ್ರಶ್ನೆ ಕೂಡ, ಇದನ್ನು ಸವಾಲಾಗಿ ತೆಗೆದುಕೊಳ್ಳುತ್ತೇನೆ. ಜನರಲ್ ಆಗಿ ಪರಿಶೀಲನೆ ಮಾಡಲಾಗಲ್ಲ. ಇದಕ್ಕಾಗಿ ತಂಡ ಮಾಡಿ ಪರಿಶೀಲನೆಗೆ ದಿನಾಂಕ ನಿಗದಿಮಾಡಿ, ಬಿಲ್ ಪಾವತಿ ತಡೆಹಿಡಿಯುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.