ಈಡೇರಿಸಿದ ಭರವಸೆಗಳ ಪಟ್ಟಿ ಬಿಡುಗಡೆ ಮಾಡಿ
Team Udayavani, Jun 6, 2017, 1:03 PM IST
ಮೈಸೂರು: ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಹಾಗೂ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಭರವಸೆ ಈಡೇರಿಸಿದೆ ಎಂಬ ಪಟ್ಟಿ ಬಿಡುಗಡೆ ಮಾಡಿ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಸವಾಲು ಹಾಕಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದಲ್ಲೆಲ್ಲಾ ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 150ಕ್ಕೂ ಹೆಚ್ಚು ಭರವಸೆ ಈಡೇರಿಸಿರುವುದಾಗಿ ಹೇಳುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ರಾಜ್ಯ ಸರ್ಕಾರದ ಸೌಲಭ್ಯ ವಿತರಣಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಟೀಕಿಸಿದರು.
ಸಮಾವೇಶದಲ್ಲಿ ವೀರಾವೇಶದಿಂದ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಈವರೆಗೂ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಣಾಳಿಕೆಗಳನ್ನು ಕಸದ ಬುಟ್ಟಿಗೆ ಹಾಕಿದ್ದೇ ಹೆಚ್ಚು. ಆದರೆ ತಾವು ಮಾತ್ರ ಪ್ರಣಾಳಿಕೆಯನ್ನು ಪಕ್ಕದಲ್ಲಿಟ್ಟುಕೊಂಡೇ ಬಜೆಟ್ ರೂಪಿಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 150ಕ್ಕೂ ಹೆಚ್ಚು ಈಡೇರಿಸಿರುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಶೇ.25 ಮಾತ್ರ ನಿಜ ಹೇಳಿದ್ದು, ಶೇ.75 ಸುಳ್ಳು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭ ರವಸೆಗಳು ಹಾಗೂ ನಂತರ ಈಡೇರಿಸಿದ ಭರವಸೆಗಳು ಎಷ್ಟು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. ಚುನಾವಣೆ ಹೊಸ್ತಿಲಿನಲ್ಲಿ ಸಾಧನಾ ಸಮಾವೇಶ ಮಾಡಿದವರು ಪುನಾ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಹಲವು ಭಾಗ್ಯಗಳನ್ನು ನೀಡಿದ್ದಾರೆ, ಆದರೆ ಇವುಗಳು ಅರ್ಹ ಫಲಾನುಭವಿಗಳಿಗೆ ತಲುಪಿದೆಯೇ?, ಈ ಬಗ್ಗೆ ಸಮೀಕ್ಷೆ ನಡೆದಿದೆಯೇ? ಎಂಬ ಬಗ್ಗೆ ಎರಡು ತಿಂಗಳ ಹಿಂದೆ ತಾವೇ ಖುದ್ದಾಗಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ. ಸರ್ಕಾರ ಈಡೇರಿಸಿರುವ ಭರವಸೆಗಳ ಬಗ್ಗೆ ಯಾವ ಅಧಿಕಾರಿಗೂ ಸ್ಪಷ್ಟ ಮಾಹಿತಿಯೇ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಸರ್ಕಾರವಲ್ಲ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಸಿದ್ದರಾಮಯ್ಯ ಸರ್ಕಾರವಲ್ಲ. ಹೀಗಿದ್ದರೂ ರಾಜ್ಯ ಸರ್ಕಾರವನ್ನು ಹೈಜಾಕ್ ಮಾಡಿರುವ ಸಿದ್ದರಾಮಯ್ಯ ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ, ಗುದ್ದಲಿ ಪೂಜೆ, ಇನ್ನಿತರ ಕಾರ್ಯ ಕ್ರಮಗಳ ಉದ್ಘಾಟನೆ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿ,
-ಅಧಿಕಾರಕ್ಕೆ ಬಂದರೆ ರಾಜ್ಯದ ಖಜಾನೆಗೆ ಹಣ ವಾಪಸ್ ತರುತ್ತೇನೆ ಎಂಬ ಭರವಸೆ ನೀಡಿದ್ದ ನೀವು, ಆ ಕೆಲಸ ಏನಾಯಿತು ಎಂಬುದನ್ನು ತಿಳಿಸಬೇಕಿದೆ. ಅಲ್ಲದೆ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ ಈ ಏನಾಯಿತು?, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಗಣಿ ಪ್ರದೇಶದ ಪುನಶ್ಚೇತನ ಕುರಿತು ಈವರೆಗೆ ಸಭೆ ಮಾಡಿಲ್ಲ. ಇದಕ್ಕಾಗಿ ಮೀಸಲಿಟ್ಟಿರುವ 10 ಸಾವಿರ ಕೋಟಿ ರೂ. ಕೊಳೆಯುತ್ತಿದೆ ಎಂದರು.
ತಾಕತ್ತಿದ್ದರೆ ನೋಟಿಸ್ ನೀಡಿ: ಸರ್ಕಾರದ ಸಾಧನಾ ಸಮಾವೇಶದ ವೇದಿಕೆಯ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಸುನೀಲ್ ಬೋಸ್ ಹಾಗೂ ಡಾ.ಯತೀಂದ್ರರಿಗೆ ಅವಕಾಶ ನೀಡಲಾಗಿತ್ತು. ಅವರೇನು ಸಚಿವರೇ, ಶಾಸಕರೇ ಅಥವಾ ಜನಪ್ರತಿನಿಧಿಗಳೇ ಯಾವ ಆಧಾರದ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡಿದಿರಿ ಎಂದು ಪ್ರಶ್ನಿಸಿದ ಅವರು, ಅವರಿಬ್ಬರು ಮುಖ್ಯಮಂತ್ರಿ, ಸಚಿವರ ಮಕ್ಕಳೆಂಬ ಕಾರಣದಿಂದ ಸರ್ಕಾರದ ಕಾರ್ಯಕ್ರಮದಲ್ಲಿ ಆಸನ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ತಾಕತ್ತಿದ್ದರೆ ಈ ಬಗ್ಗೆ ಸಮಾವೇಶ ಸಂಘಟಕರಿಗೆ ನೋಟಿಸ್ ಜಾರಿಮಾಡಿ, ಅಲ್ಲದೇ ಸಮಾವೇಶದಲ್ಲಿ ಮೂಲ ಕಾಂಗ್ರೆಸಿಗರನ್ನು ಹಾಗೂ ನಿಮ್ಮನ್ನು ಕಾಂಗ್ರೆಸ್‌ಗೆ ತಂದವರಿಗೆ ಅಪಮಾನವಾಗಿದೆ, ಪಕ್ಷದ ಏಳ್ಗೆಗಾಗಿ ದುಡಿದ ಕಾರ್ಯಕರ್ತರನ್ನು ದೂರವಿಟ್ಟಿರುವುದು ದುರಂತದ ಸಂಗತಿ ಎಂದರು.
ಕಾಂಗ್ರೆಸ್ಸಿಗರು ಮೂಲೆಗುಂಪು: ಸಾಧನ ಸಮಾವೇಶದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರ ಚಿತ್ರಗಳನ್ನು ಕಡೆಗಣಿಸಿ, ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಹದೇವಪ್ಪ, ಆಂಜನೇಯ ಅವರ ಫೋಟೋಗಳಿದ್ದವು. ಹೀಗಾಗಿ ಇವರು ಮೂರು ಜನರು ಮಾತ್ರವೇ ಕಾಂಗ್ರೆಸ್ಸಿಗರೇ ಎಂದು ಪ್ರಶ್ನಿಸಿದ ಅವರು, ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರು, ಕಾರ್ಯಕರ್ತರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇರುವುದೋ ಬಿಡುವುದೋ…?: ನಗುವುದೋ ಅಳುವುದೋ ನೀವೇ ಹೇಳಿ? ಇರುವುದೋ ಬಿಡುವುದೋ ಈ ಊರಿನಲಿ.. ಇದು ಹಳ್ಳಿಹಕ್ಕಿ ವಿಶ್ವನಾಥ್ ಹಾಡಿದ ಹಾಡು. ಕಾಂಗ್ರೆಸ್‌ನಲ್ಲಿ ಇರುವುದೋ ಬಿಡುವುದೋ ತಿಳಿಯುತ್ತಿಲ್ಲ. ಬಹಳ ವೇದನೆಯಿಂದ ಈ ಮಾತು ಹೇಳುತ್ತಿದ್ದೇನೆ. ತುಂಬಾ ನೋವಿನಿಂದ ಈ ಬಗ್ಗೆ ಚಿಂತನೆ ಮಾಡಿದ್ದು, ಕಾಂಗ್ರೆಸ್ ಮನೆಯಲ್ಲಿ ಇರುವುದೋ ಬಿಡುವುದೋ ಎಂದು ಯೋಚಿಸುತ್ತಿದ್ದೇನೆ.
ಹಿಂದಿನ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ತಮ್ಮನ್ನು 6 ವರ್ಷ ಅಮಾನತು ಮಾಡಲು ಸಿದ್ಧರಾಗಿದ್ದರು, ಆದರೆ ಉಸ್ತುವಾರಿ ಬದಲಾದ ಕಾರಣ ಕಾಂಗ್ರೆಸ್‌ನಲ್ಲಿ ಉಳಿದೆ. ಸದ್ಯ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಮ್ಮನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಭರವಸೆ ನೀಡಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಕಾಲವೇ ತೀರ್ಮಾನಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.