ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ
Team Udayavani, Mar 2, 2020, 3:00 AM IST
ತಿ.ನರಸೀಪುರ: ಮೂಲ ಸೌಲಭ್ಯ ನೀಡದೆ ಟೋಲ್ ಸಂಗ್ರಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ತಾಲೂಕಿನ ವಿವಿಧ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮೆರವಣಿಗೆ ನಡೆಸಿ ಟೋಲ್ ಮುಂಭಾಗ ಪ್ರತಿಭಟಿಸಿದರು.
ಪಟ್ಟಣದ ಸಮೀಪದ ತಿರಮಕೂಡಲು ವೃತ್ತದಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಎಡದೊರೆ ಟೋಲ್‌ವರೆಗೂ ಮೆರವಣಿಗೆ ಸಾಗಿ ಟೋಲ್‌ಗೆ ಮುತ್ತಿಗೆ ಹಾಕಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲು ಮಾಡುವ ಮುನ್ನ ನೀರು, ಶೌಚಾಲಯ, ಆ್ಯಂಬುಲೆನ್ಸ್, ಏಕಮುಖ ರಸ್ತೆ, ಸರ್ವಿಸ್ ರಸ್ತೆ ಮತ್ತಿತರ ಸೌಲಭ್ಯ ನೀಡಬೇಕಾಗಿತ್ತು.
ಆದರೆ, ಒಂದು ಸೌಲಭ್ಯ ಕೂಡ ಇಲ್ಲಿಲ್ಲ. 15 ಕಿ.ಮೀ. ವ್ಯಾಪ್ತಿಯವರಿಗೆ ಸರ್ವಿಸ್ ರಸ್ತೆ ಇರಬೇಕು ಎಂಬ ಕಾನೂನು ಇದೆಯಾದರೂ ಸೌಕರ್ಯ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸೌಲಭ್ಯ ನೀಡುವವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ಖಾಸಗಿ ಬಸ್ ಸಮಾರಂಭಕ್ಕೆ ಒಪ್ಪಂದ ಮೇಲೆ 8 ಕಿ.ಮೀ. ವ್ಯಾಪ್ತಿಯ ಕೆಂಪಯ್ಯನಹುಂಡಿ ಗ್ರಾಮಕ್ಕೆ 6 ಟ್ರಿಪ್ ಓಡಾಡಿದ್ದಕ್ಕೆ ಸುಮಾರು 720 ರೂ.ಸುಂಕ ವಸೂಲು ಮಾಡಲಾಗಿದೆ ಬಸ್ ಮಾಲೀಕ ಕೆ.ವಜ್ರೆಗೌಡ ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಆಲಗೂಡು ಚಂದ್ರಶೇಖರ್, ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಆಲಗೂಡು ಶಿವಕುಮಾರ್, ತಾಯೂರು ವಿಠಲಮೂರ್ತಿ, ಪಿ.ಪುಟ್ಟರಾಜು, ಮಣಿಕಂಠರಾಜೇಗೌಡ, ಕುಕ್ಕೂರು ರಾಜು, ಬಾಳೆಲೆ ಕುಮಾರ್, ಕೊತ್ತೇಗಾಲ ಶಿವಪ್ರಸಾದ್, ಆರೀಫ್, ಕುರುಬೂರು ಸಿದ್ದೇಶ್ ಸಿದ್ಧಲಿಂಗಮೂರ್ತಿ, ಸೋಸಲೆ ರಾಜಶೇಖರ,
ತುಂಬಲ ಮಂಜುನಾಥ್, ಟೈಲರ್ ಮಹದೇವಸ್ವಾಮಿ, ಮಣಿ ಸೇರಿದಂತೆ ವಾಹನಗಳ ಚಾಲಕರು, ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಹಶೀಲ್ದಾರ್ ಡಿ.ನಾಗೇಶ್, ಪೊ›ಬೇಷನರಿ ಎಸ್‌ಪಿ ಲಖನ್ ಸಿಂಗ್ ಯಾದವ್, ಸಿಪಿಐ ಎಂ.ಆರ್.ಲವ, ಪಿಎಸ್‌ಐಗಳಾದ ಷಬ್ಬೀರ್ ಹುಸೇನ್, ಬಸವರಾಜು ಇತರರಿದ್ದರು.
ಸರ್ವಿಸ್ ರಸ್ತೆಗೆ ಅವಕಾಶ ಇಲ್ಲ: ಪ್ರಸಕ್ತ ಸಾಲಿನ ಟೋಲ್ ಸಂಗ್ರಹಣೆ ಮೂರು ತಿಂಗಳ ಅವಧಿಗೆ ಮಾತ್ರ ಪ್ರಾಯೋಗಿಕ ನೀಡಲಾಗಿತ್ತು. ಇದರ ಸಾಧಕ ಬಾಧಕಗಳ ಬಗ್ಗೆ ವರದಿ ಸಲ್ಲಿಸಿದ ನಂತರ ಸರ್ಕಾರ ಮರು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರದ ನಿಯಮದಡಿ ಇಲ್ಲಿಗೆ ಸರ್ವಿಸ್ ರಸ್ತೆ ಇಲ್ಲ. ಇದು ಇದುವರೆಗೂ ರಾಜ್ಯ ಹೆದ್ದಾರಿ ನಿರ್ವಹಣೆಯಲ್ಲಿತ್ತು.
ಮುಂದಿನ ತಿಂಗಳಿಂದ ನಮ್ಮ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಸರ್ವಿಸ್ ರಸ್ತೆ ನೀಡಲು ಅವಕಾಶವಿಲ್ಲ. ಆದರೆ, ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ಒಂದು ತಿಂಗಳೊಳಗೆ ಕಲ್ಪಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಶ್ರೀಧರ್ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.