ಅಯ್ಯಪ್ಪ ಸನ್ನಿಧಿಗೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ
Team Udayavani, Jan 4, 2019, 5:59 AM IST
ಮೈಸೂರು: ತನ್ನದೇ ಆದ ಧಾರ್ಮಿಕ ಸಂಪ್ರದಾಯ ಹೊಂದಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಇಬ್ಬರು ಮಹಿಳೆಯರು ಪ್ರವೇಶ ಮಾಡಿರುವುದನ್ನು ಖಂಡಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ಚೌಕದ ಬಳಿ ಮಾನವ ಸರಪಳಿ ರಚಿಸಿದ ಅಯ್ಯಪ್ಪ ಭಕ್ತರು, ಅಯ್ಯಪ್ಪ ಸನ್ನಿಧಿ ಪ್ರವೇಶಿಸಿರುವ ಬಿಂದು ಮತ್ತು ಕನಕದುರ್ಗ ಮತ್ತು ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಇಬ್ಬರು ಮಹಿಳೆಯರು ಅಯ್ಯಪ್ಪನ ದೇವಸ್ಥಾನಕ್ಕೆ ತೆರಳಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಇದಕ್ಕೆ ಕೇರಳ ಸರ್ಕಾರ ಉದ್ದೇಶಪೂರ್ವಕವಾಗಿಯೇ ಅಯ್ಯಪ್ಪ ಭಕ್ತರ ನಂಬಿಕೆಯನ್ನು ಅಪಮಾನಿಸಲು, ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳು ಗೆಡವಲು ಸರ್ಕಾರವೇ ಅವಕಾಶ ನೀಡಿದೆ.
ಹಲವು ದಿನಗಳ ಕಠಿಣ ವ್ರತಾಚರಣೆ ಮಾಡಿ, ದೇವಸ್ಥಾನದ ಸಂಪ್ರದಾಯ ಪಾಲಿಸಿ ಭಕ್ತಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕಿತ್ತು. ಆದರೆ, ಇದೆಲ್ಲವನ್ನೂ ಗಾಳಿಗೆ ತೂರಿ ಈ ಇಬ್ಬರು ಮಹಿಳೆಯರು ಸಂಪ್ರದಾಯಕ್ಕೆ ಮಸಿ ಬಳಿದು ಸನ್ನಿಧಿಯನ್ನು ಪ್ರವೇಶಿಸುವ ಮೂಲಕ ಭಕ್ತರ ಧಾರ್ಮಿಕ ಭಾವನೆಯೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಕಿಡಿಕಾರಿದರು.
ಅಯ್ಯಪ್ಪ ಭಕ್ತರಿಗೆ ಜ.2 ಕರಾಳ ದಿನವಾಗಿದೆ. ಕೇರಳದ ಕಮ್ಯುನಿಷ್ಟ್ ಸರ್ಕಾರ ಇಬ್ಬರು ನಾಸ್ತಿಕ ಮಹಿಳೆಯರನ್ನು ಪೊಲೀಸರ ಬೆಂಗಾವಲಿನಲ್ಲಿ ಸನ್ನಿಧಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ನೂರಾರು ವರ್ಷಗಳಿಂದ ಶಬರಿಮಲೆ ಕ್ಷೇತ್ರದಲ್ಲಿ ಆಚರಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ನಾಶ ಮಾಡುವ ಮೂಲಕ ಆಘಾತವನ್ನುಂಟು ಮಾಡಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ಚೇತನ್ ಮಂಜುನಾಥ್, ಗಿರಿಧರ್, ನಗರ ಬಿಜೆಪಿ ಯುವಮೋರ್ಚಾ ಆಧ್ಯಕ್ಷ ಗೋಕುಲ್ ಗೋವರ್ಧನ್, ಸವಿತಾ ಫಡೆ ಮೊದಲಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.