ಸಾರ್ವಜನಿಕ ರಸ್ತೆ, ಕೆರೆಗಳ ಒತ್ತುವರಿ ತೆರವಿಗೆ ಸೂಚನೆ
Team Udayavani, Nov 23, 2018, 11:58 AM IST
ಮೈಸೂರು: ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿರುವ ರಸ್ತೆ ಹಾಗೂ ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ, ಸರ್ವೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದುಕೊರತೆ ಆಲಿಸುವ ಫೋನ್-ಇನ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಈ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ರಸ್ತೆ, ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಕೇಳಿಬಂದಿವೆ. ಹೀಗಾಗಿ ಅಧಿಕಾರಿಗಳು ಒತ್ತುವರಿ ಆಗಿರುವ ಸ್ಥಳಗಳ ಪರಿಶೀಲಿಸಿ, ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ತಿಳಿಸಿದರು.
ಅಲ್ಲದೇ ಬೀದಿ ದೀಪಗಳ ನಿರ್ವಹಣೆ ಬಗ್ಗೆಯೂ ದೂರುಗಳು ಬಂದಿದ್ದು, ಈ ಬಗ್ಗೆಯೂ ನಿಗಾವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೂ ಮುನ್ನ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ 15 ಮಂದಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ಒತ್ತುವರಿ ತೆರವುಗೊಳಿಸಿ: ನಗರದ ಲಷ್ಕರ್‌ವೊಹಲ್ಲಾ ನಿವಾಸಿ ಬಾಬು ಅವರು, ಅಶೋಕರಸ್ತೆಯಲ್ಲಿರುವ ಗುಜರಿ ಸಮೀಪದ ರಸ್ತೆಯಲ್ಲಿ ಕಬ್ಬಿಣದ ವಸ್ತುಗಳನ್ನು ರಸ್ತೆಯಲ್ಲಿ, ಪಾದಚಾರಿ ಮಾರ್ಗದಲ್ಲಿ ಇರಿಸಿದ್ದು, ಇದರಿಂದ ಸಾರ್ವಜನಿಕರು, ಶಾಲೆ ಮಕ್ಕಳಿಗೆ ತೊಂದರೆಯಾಗಿದೆ ಎಂದು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಬನ್ನೂರು ನಿವಾಸಿ ರಾಮಕೃಷ್ಣ ಎಂಬುವರು ಕರೆ ಮಾಡಿ, ಬನ್ನೂರಿನ ಕೊಡಗಹಳ್ಳಿಯಲ್ಲಿ ರೈಸ್‌ಮಿಲ್‌ನಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆ ಹಾಗೂ ಗ್ರಾಪಂ ಪಿಡಿಒ ಕಾರ್ಯವೈಖರಿ ಬಗ್ಗೆ ದೂರು ನೀಡಿದರು. ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಜ್ಯೋತಿ, ಈ ಬಗ್ಗೆ ಪರಿಶೀಲಿಸಿ, ಕ್ರಮವಹಿಸುವುದಾಗಿ ತಿಳಿಸಿದರು. ಶಾರದಾದೇವಿನಗರದ ನಿವಾಸಿ ಯಶವಂತ್, ಬಡಾವಣೆಯ ಮುಖ್ಯರಸ್ತೆಯ ಪಾದಚಾರಿ ಮಾರ್ಗದ ಒತ್ತುವರಿ ಬಗ್ಗೆ ದೂರಿದರು.
ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಪಾಲಿಕೆ ಅಭಯ ತಂಡದಿಂದ ಒತ್ತುವರಿ ತೆರವು ಮಾಡಿವುದಾಗಿ ಹೇಳಿದರು. ಕೂರ್ಗಳ್ಳಿ-ಬೆಳವಾಡಿ ನಡುವಿನ ರಸ್ತೆ ಒತ್ತುವರಿ ಮಾಡಲಾಗಿದ್ದು, ಸಾರ್ವಜನಿಕರಿಗೆ ಓಡಾಡಲು ಸಮಸ್ಯೆಯಾಗಿದೆ ಎಂದು ಕೂರ್ಗಳ್ಳಿ ನಿವಾಸಿ ಸತೀಶ್ ದೂರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ, ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ರಮೇಶ್‌ಬಾಬುಗೆ ಸೂಚನೆ ನೀಡಿದರು.
ರಸ್ತೆ ಒತ್ತುವರಿ ದೂರು: ಜಟ್ಟಿಹುಂಡಿ ನಿವಾಸಿ ಅರುಣ್ ಕುಮಾರ್ ಅವರು, ಜಟ್ಟಿಹುಂಡಿ ಗ್ರಾಮದಲ್ಲಿನ ರಸ್ತೆಯಲ್ಲಿನ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೋಳಿಫಾರಂ ನಿರ್ಮಿಸಿದ್ದು, ಇದರ ಬಗ್ಗೆ ದೂರು ನೀಡಿದ್ದರೂ ಕ್ರಮವಹಿಸಿಲ್ಲ ಎಂದು ದೂರು ನೀಡಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ಪರಿಶೀಲಿಸಿ, ಮುಂದಿನ ಕ್ರಮವಹಿಸುವುದಾಗಿ ತಿಳಿಸಿದರು. ಇದೇ ವೇಳೆ ಪಿರಿಯಾಪಟ್ಟಣದ ಬೆಟ್ಟದಪುರ ಗ್ರಾಮದ ನಿವಾಸಿ ನಟರಾಜ್ ಅವರು, ಗ್ರಾಮದ ಸರ್ವೆ ನ.350 ಹಾಗೂ ಸ.ನಂ.5ರಲ್ಲಿ ಕೆರೆ ಒತ್ತುವರಿ ಮಾಡಲಾಗಿದ್ದು ಕ್ರಮವಹಿಸುವಂತೆ ಮನವಿ ಮಾಡಿದರು.
ಈ ಬಗ್ಗೆ ವಾರದಲ್ಲಿ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಉಳಿದಂತೆ ತಿ.ನರಸೀಪುರದ ಇಂದಿರಾ ಕಾಲೋನಿಗೆ ರಸ್ತೆ ಡಾಂಬರೀಕರಣ, ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ನಿವಾಸಿ ಸದಾಶಿವ ಮನವಿ ಮಾಡಿದರು.
ಹುಣಸೂರಿನ ಚೌರಿಕಟ್ಟೆಯಲ್ಲಿ ಕೆರೆ ಏರಿ ಕುಸಿದಿದ್ದು ಇದನ್ನು ಸರಿಪಡಿಸುವಂತೆ ಪ್ರಕಾಶ್ ಎಂಬುವರು ಒತ್ತಾಯಿಸಿದರು. ವರುಣಾ ಗ್ರಾಮದ ಪ್ರೌಢಶಾಲೆ ಜಾಗವನ್ನು ಖಾತೆ ಮಾಡಿಕೊಂಡುವಂತೆ ಮಹದೇವ್ ಅವರು ಕೋರಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್, ಜಿಪಂ ಸಿಇಒ ಜ್ಯೋತಿ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಪಡಿತರ ವಿತರಿಸುತ್ತಿಲ್ಲ: ಹನಗೋಡು ಗ್ರಾಪಂ ಸದಸ್ಯ ಇಸ್ಮಾಯಿಲ್ ಪಾಷಾ ಕರೆ ಮಾಡಿ, ಗ್ರಾಮದಲ್ಲಿ ಕಳೆದ 4-5 ತಿಂಗಳಿಂದ ಅಂತ್ಯೋದಯ ಕಾರ್ಡ್ ವಿತರಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಯಾರು ಕ್ರಮವಹಿಸುತ್ತಿಲ್ಲ ಎಂದು ದೂರು ನೀಡಿದರು.
ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಉಪ ನಿರ್ದೇಶಕ ಶಿವಣ್ಣ, ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಕುಟುಂಬದ ಯಾವುದೇ ಸದಸ್ಯರು ಹೋದರು ಪಡಿತರ ವಿತರಿಸಲಾಗುತ್ತದೆ. ಆದರೆ ಕೆಲವು ಕಡೆಗಳಲ್ಲಿ ಪಡಿತರದಾರರು ತಮ್ಮ ಹೆಬ್ಬೆಟ್ಟಿನ ಗುರುತು ನೀಡದ ಕಾರಣ ಸಮಸ್ಯೆ ಆಗಿದ್ದು, ಇದಕ್ಕೆ ಬದಲಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಪರಿಶೀಲಿಸಿ, ಬದಲಿ ವ್ಯವಸ್ಥೆಯನ್ನು ಚುರುಕಾಗಿ ಮಾಡಲು ತಿಳಿಸಿದರು.
ಶಾಶ್ವತ ಪರಿಹಾರ ಸಿಗುತ್ತಿಲ್ಲ-ಡೀಸಿ: ನಗರದಲ್ಲಿರುವ ಖಾಲಿ ನಿವೇಶನಗಳಿಂದ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅಸಹಾಯಕತೆ ವ್ಯಕ್ತಪಡಿಸಿದರು. ರಾಮಕೃಷ್ಣನಗರದ ನಿವಾಸಿ ರಂಗಸ್ವಾಮಿ ಎಂಬುವರು ಕರೆ ಮಾಡಿ, ತಮ್ಮ ಬಡಾವಣೆಯಲ್ಲಿರುವ ಖಾಲಿ ನಿವೇಶನಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಕೋರಿದರು.
ಇದಕ್ಕೆ ಉತ್ತರಿಸಿದ ಡೀಸಿ, ಖಾಲಿ ನಿವೇಶನಗಳ ಸಮಸ್ಯೆಗೆ ಪಾಲಿಕೆ ವತಿಯಿಂದ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.