ಆನೆ ತಡೆಗೆ ದಾಸ್ತಾನು ಮಾಡಿದ್ದ ರೈಲ್ವೆ ಕಂಬಿ ಸಾಗಾಟ: ಗ್ರಾಮಸ್ಥರ ಆಕ್ರೋಶ
Team Udayavani, Jun 9, 2022, 12:37 PM IST
ಹುಣಸೂರು: ಅರಣ್ಯ ಇಲಾಖೆ ವತಿಯಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ನಾಗರಹೊಳೆ ಉದ್ಯಾನವನದಂಚಿನಲ್ಲಿ ರೈಲ್ವೆ ಕಂಬಿಯ ಬೇಲಿ ನಿರ್ಮಾಣಕ್ಕೆ ದಾಸ್ತಾನು ಮಾಡಿದ್ದ ಸಾಮಗ್ರಿಗಳನ್ನು ಬೇರೆಡೆ ಸಾಗಿಸಲು ಬಂದಿದ್ದ ವಾಹನಗಳನ್ನು ಕಾಡಂಚಿನ ಗ್ರಾಮಸ್ಥರು ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಅರಣ್ಯ ಇಲಾಖೆ ವತಿಯಿಂದ ಹುಲ್ಲೇಪುರ ಗ್ರಾಮದಿಂದ ಉತ್ತೇನಹಳ್ಳಿವರೆಗೆ ಒಟ್ಟು ನಾಲ್ಕು ಕಿಲೋಮೀಟರ್ ಕಾಡಾನೆ ಹಾವಳಿಗಾಗಿ ತಡೆ ಗೋಡೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಅರಣ್ಯ ಇಲಾಖೆಯ ವತಿಯಿಂದ ಈಗಾಗಲೇ ಕಾಮಗಾರಿಯನ್ನು ಕೂಡ ಪ್ರಾರಂಭಿಸಲಾಗಿದೆ. ಆದರೆ ಇದೀಗ ಸಂಗ್ರಹಿಸಿಟ್ಟಿದ್ದ ರೈಲ್ವೆ ಕಂಬಿ ಮತ್ತಿತರ ಸಾಮಗ್ರಿಗಳನ್ನು ದೊಡ್ಡ ಜೆಸಿಬಿ ಮೂಲಕ ಲೋಡ್ ಮಾಡುತ್ತಿದ್ದ ವಿಷಯ ತಿಳಿದ ಕಿಕ್ಕೇರಿಕಟ್ಟೆ ಗ್ರಾಮಸ್ಥರು ರೈಲ್ವೆ ಕಂಬಿ ದಾಸ್ತಾನು ಮಾಡುತ್ತಿದ್ದ ಸ್ಥಳಕ್ಕೆ ದೌಡಾಯಿಸಿ ಲಾರಿಗಳನ್ನು ತಡೆದು ತಡೆದು ಪ್ರತಿಭಟನೆ ನಡೆಸಿದರು.
ಸಾಮಗ್ರಿ ಸಾಗಿಸಲು ಬಿಡಲ್ಲ ಎಂದು ಗ್ರಾಮಸ್ಥರ ಪಟ್ಟು
ಬೆಂಗಳೂರಿನಲ್ಲಿದ್ದ ಶಾಸಕ ಎಚ್ ಪಿ ಮಂಜುನಾಥ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಮ್ಮ ಗ್ರಾಮಕ್ಕೆ ಮಂಜೂರಾಗಿರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ಕಳೆದ ಹತ್ತಾರು ವರ್ಷಗಳಿಂದ ಕಾಡಾನೆ ಹಾವಳಿಯಿಂದ ಬೇಸತ್ತು ಹೋಗಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿಗೆ ಮಂಜೂರಾಗಿರುವ ಸಾಮಗ್ರಿಗಳನ್ನು ಬೇರೆಡೆ ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಶಾಸಕರಿಂದ ಗ್ರಾಮಸ್ಥರ ಮನವೊಲಿಕೆ
ಪಟ್ಟು ಹಿಡಿದ ಗ್ರಾಮಸ್ಥರ ಮನವೊಲಿಸಿದ ಶಾಸಕ ಎಚ್.ಪಿ. ಮಂಜುನಾಥ್ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಉಡುವೇಪುರದಿಂದ ಉತ್ತೇನಹಳ್ಳಿವರೆಗೆ ಈ ಭಾಗದ ಕಪ್ಪು( ಜೌಗು) ಮಣ್ಣಾಗಿದ್ದು ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ನೂತನವಾಗಿ ಹೊಸ ತಂತ್ರಜ್ಞಾನದಿಂದ ಕೂಡಿದ ರೋಪ್ ವೇ (ಉಕ್ಕಿನ ಹಗ್ಗ) ಬೇಲಿಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ಇದನ್ನೂ ಓದಿ:ಮುಂಬೈ ಟು ಮಂಗಳೂರು 2 ಕೋಟಿ ರೂ. ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ
ಉದ್ಯಾನವನದ ಉತ್ತೇನಹಳ್ಳಿ ಗ್ರಾಮದಿಂದ ಅಳಲೂರು ಗ್ರಾಮದವರಿಗೆ ಬಾಕಿ ನಾಲ್ಕು ಕಿ.ಮೀ. ದೂರ ಬೇಲಿ ನಿರ್ಮಾಣ ಕಾಮಗಾರಿಗೆ ಇದೇ ಸಾಮಗ್ರಿಗಳನ್ನು ಬಳಸಲಾಗುತ್ತಿದೆ ಎಂದು ಸಮಾಧಾನಪಡಿಸಿ ಈಗಾಗಲೆ ತಾವು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಭಾಗದ ರೈತರು ಹಾಗೂ ಕೆಲ ಮುಖಂಡರು ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ರೋಪ್ ವೇ ಕಾಮಗಾರಿ ವೀಕ್ಷಣೆ ಮಾಡಿ ತೃಪ್ತಿಕರವಾಗಿದ್ದಲ್ಲಿ ಈ ಭಾಗದಲ್ಲಿ ರೋಪ್ ವೇ ಕಾಮಗಾರಿ ನಡೆಸಲಾಗುವುದು ಎಂಬ ಸಲಹೆಯನ್ನು ನೀಡಿದರು
ನಂತರ ನಾಗರಹೊಳೆ ಉದ್ಯಾನವನದ ಹುಣಸೂರು ವಲಯದ ಆರ್.ಎಫ್.ಓ. ಹನುಮಂತರಾಜು, ಡಿ.ಆರ್ ಎಫ್ಓಗಳಾದ ಸಿದ್ದರಾಜು, ವೀರಭದ್ರಯ್ಯ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಗ್ರಾಮಸ್ಥರನ್ನು ಇಲಾಖೆ ವಾಹನದಲ್ಲಿ ಕರೆದ್ಯೊಯ್ದು ವೀಕ್ಷಣೆ ಮಾಡಿಸಿದರು.
ರೋಪ್ ವೇ ಒಪ್ಪದ ರೈತರು
ಅರೆ ಮಲೆನಾಡು ಪ್ರದೇಶವಾದ ಹನಗೋಡು ಭಾಗದಲ್ಲಿ ಮೊದಲೇ ಅಂಟು ಮಣ್ಣು ಜೊತೆಗೆ ಅತಿಯಾದ ಮಳೆ ರೋಪ್ ವೇ ನಿರ್ಮಾಣ ಮಾಡಿದಲ್ಲಿ ಇದಕ್ಕೆ ಅಳವಡಿಸುವ ಸಿಮೆಂಟ್ ಕಂಬಗಳು ಕುಸಿಯುವ ಹಾಗೂ ರೋಪ್ ವೇ ಜಗ್ಗುವುದರಿಂದ ಆನೆಗಳು ಹೊರ ದಾಟುತ್ತವೆ. ಆದ್ದರಿಂದ ಈ ಭಾಗದಲ್ಲಿ ರೋಪ್ ವೇ ಕಾಮಗಾರಿ ಬೇಡ ನಮಗೆ ರೈಲ್ವೆ ಹಳಿ ತಡೆಗೋಡೆಯೇ ನಿರ್ಮಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.