ಮಾತುಕತೆಯಿಂದ ಕಾವೇರಿ ಸಮಸ್ಯೆ ಪರಿಹರಿಸಿ
Team Udayavani, Sep 9, 2017, 11:56 AM IST
ಮೈಸೂರು: ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ಬಿಗುಮಾನ ಬಿಟ್ಟು, ಮಾತುಕತೆ ಮೂಲಕ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ರೈತ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದರು.
ಇಶಾ ಫೌಂಡೇಶನ್‌ನಿಂದ ಸದ್ಗುರು ಕೈಗೊಂಡಿರುವ ನದಿಗಳನ್ನು ರಕ್ಷಿಸಿ ಅಭಿಯಾನದ ಅಂಗವಾಗಿ ಶುಕ್ರವಾರ, ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಕೆಆರ್‌ಎಸ್ ಜಲಾಶಯದ ಹಿನ್ನೀರಿಗೆ ಬಾಗಿನ ಅರ್ಪಿಸಿದ ನಂತರ ನಡೆದ ಕಾವೇರಿ ನದಿ ಪಾತ್ರದ ರೈತರ ಸಭೆಯಲ್ಲಿ ಮಾತನಾಡಿದರು.
ನೀರು, ತಾಯಿಯ ಎದೆ ಹಾಲಿನಷ್ಟೇ ಪವಿತ್ರ. ಅಂತಹ ನೀರಿನ ರಕ್ಷಣೆಗಾಗಿ ಅಭಿಯಾನ ಕೈಗೊಳ್ಳುವ ಮೂಲಕ ಸದ್ಗುರುಗಳು ಪವಿತ್ರ ಕಾರ್ಯ ಮಾಡುತ್ತಿದ್ದಾರೆ. ಇಡೀ ಭಾರತವೇ ಇದರ ಹೊಣೆಗಾರಿಕೆ ಹೊರಬೇಕು, ತಾನೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದೇನೆಂದು ಮಿಸ್ಡ್ಕಾಲ್ ಕೊಟ್ಟು ಮನೆಯಲ್ಲಿ ಕೂರುವುದಲ್ಲ, ಪ್ರತಿಯೊಬ್ಬರೂ 5 ಸಸಿಗಳನ್ನು ನೆಡಬೇಕೆಂದರು.
ಪ್ರತಿ ವ್ಯಕ್ತಿಗೆ ನಿತ್ಯ 135 ಲೀಟರ್ ನೀರಿನ ಅವಶ್ಯಕತೆ ಇದೆ. ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ 2030ನೇ ಇಸವಿ ವೇಳೆಗೆ ಪ್ರಪಂಚದ ಶೇ.25ರಷ್ಟು ಜನ ನೀರಿಲ್ಲದೆ ಸಾಯುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ನದಿಗಳನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂದರು.
ಈ ಹಿಂದೆ ರಾಜ್ಯದಲ್ಲಿ 42 ಸಾವಿರ ಕೆರೆ ಇತ್ತು. ಇಂದು 28 ಸಾವಿರ ಕೆರೆಗಳು ಮಾತ್ರ ಉಳಿದಿವೆ. 16 ಸಾವಿರ ಕೆರೆಗಳನ್ನು ಮುಚ್ಚಿಬಿಟ್ಟಿದ್ದೇವೆ. ಉಳಿದ ಕೆರೆಗಳನ್ನೂ ಮುಚ್ಚಲು ಸರ್ಕಾರ ಮುಂದಾಗಿತ್ತು. ಆದರೆ ವಿರೋಧ ವ್ಯಕ್ತವಾಗಿದ್ದರಿಂದ ಕೈಬಿಟ್ಟಿದೆ. ಹಿಂದಿನ ಕಾಲದಲ್ಲಿ ಮೈಮಾರಿಕೊಂಡು ಬದುಕುತ್ತಿದ್ದ ಜನ ರಾಜ್ಯದಲ್ಲಿ 15 ಸಾವಿರ ಸೂಳೆಕೆರೆ ಕಟ್ಟಿಸಿದ್ದಾರೆ. ಆ ಕೆರೆಗಳಿಗೆ ಶಾಂತಿಸಾಗರ ಎಂದು ಹೆಸರಿಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇನೆ.
ಸರ್ಕಾರಗಳು ಇವನ್ನೆಲ್ಲಾ ಕೇಳುವ ಸ್ಥಿತಿಯಲ್ಲಿಲ್ಲ. ನೀರಿಲ್ಲದೆ ಹಳ್ಳಿಗರು ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಎರಡೂ ರಾಜ್ಯಗಳ ರೈತ ಪ್ರತಿನಿಧಿಗಳನ್ನೊಂಡ ಕಾವೇರಿ ಕುಟುಂಬ ಅರ್ಧಕ್ಕೆ ನಿಂತಿದೆ. ಸದ್ಗುರುಗಳ ನೇತೃತ್ವದಲ್ಲೇ ಸಮಿತಿಯಾಗಲಿ ಅದನ್ನು ಮುಂದುವರಿಸಿಕೊಂಡು ಮಾತುಕತೆ ಮೂಲಕ ನೀರು ಹಂಚಿಕೆ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಿದರು.
ಡ್ಯಾಂ ಕಟ್ಟಿದ ಮೇಲೆ ನಮ್ಮ ಜಮೀನೆಲ್ಲಾ ಮುಳಗಡೆ ಆಗಿ ನಾವೇ ಕಷ್ಟ ಪಡ್ತಿದ್ದೇವೆ. ಬೇರೆ ಕಡೆ ಈಗ ಜಮೀನಿರಬಹುದು, ಆದರೆ ಇಲ್ಲಿ ಅಷ್ಟು ಫಲವತ್ತಾದ ಜಮೀನೆಲ್ಲಿ ಸಿಗ್ತದೆ. ನದಿ ಪಕ್ಕದಲ್ಲಿದ್ರೂ 5 ತಿಂಗಳಿಂದ ನಮಗೇ ನೀರಿಲ್ಲ, ಅಂತಾದ್ರಲ್ಲಿ ತಮಿಳುನಾಡಿನವರು ನಮಗೂ ನೀರು ಕೊಡಿ ಅಂತಾರಲ್ಲ ಹೆಂಗೆ. ನದಿ ಉಳಿಸಬೇಕು ಅನ್ನೋದು ನ್ಯಾಯ, ಆದರೆ, ಸ್ಥಳದಲ್ಲಿ ಏನಿದೆ ಅನ್ನೋದನ್ನು ತಿಳ್ಕೊಂಡು ಮಾತಾಡಬೇಕು.
-ಕೃಷ್ಣೇಗೌಡ, ಯಡಹಳ್ಳಿ ಯಜಮಾನರು
ಮಳೆ ಅಧಿಕವಾದರೆ ಕಾವೇರಿ ನದಿಯಲ್ಲಿ ಅಧಿಕ ನೀರು ಬರ್ತದೆ. ಆಗ ನಮಗೂ-ಕರ್ನಾಟಕಕ್ಕೂ ನದಿ ನೀರಿಗಾಗಿ ಜಗಳವೇ ಬರೋದಿಲ್ಲ. ಮಳೆಗಾಗಿ ಸಸಿ ನೆಡೋಣ, ನದಿ ಪಾತ್ರರಕ್ಷಿಸೋಣ. ಸದ್ಗುರುಗಳ ಕಾರ್ಯದಲ್ಲಿ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ.
-ಪಿ.ಆರ್.ಸುಂದರಸ್ವಾಮಿ, ತಮಿಳುನಾಡು ರೈತ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.