ರಸ್ತೆ ಬದಿ ಕೊಳೆತ ತ್ಯಾಜ್ಯ; ಸ್ಥಳೀಯರ ಸಂಕಷ್ಟ
Team Udayavani, Jan 25, 2020, 3:00 AM IST
ಪಿರಿಯಾಪಟ್ಟಣ: ಪಿರಿಯಾಪಟ್ಟಣ-ಗೋಣಿಕೊಪ್ಪ ಮುಖ್ಯರಸ್ತೆ ಅಂಕನಹಳ್ಳಿಕೊಪ್ಪಲು ಹಾಗೂ ಮಾಲಂಗಿ ಗ್ರಾಮಕ್ಕೆ ತೆರಳುವ ತಿರುವಿನಲ್ಲಿ ಕೋಳಿ, ಹಂದಿ, ಇನ್ನಿತರ ತ್ಯಾಜ್ಯದ ದುರ್ವಾಸನೆ ಬೀರುತ್ತಿದೆ. ಪ್ರತಿನಿತ್ಯ ತ್ಯಾಜ್ಯ ಸುರಿಯುತ್ತಿರುವುದರಿಂದ ಸಾರ್ವಜನಿಕರು, ಇಲ್ಲಿನ ನಿವಾಸಿಗಳು ದುರ್ವಾಸನೆಗೆ ಬೇಸತ್ತು ಮೂಗುಮುಚ್ಚಿ ಓಡಾಡುವ ಪರಿಸ್ಥತಿ ನಿರ್ಮಾಣವಾಗಿದೆ.
ಪಟ್ಟಣದ ಸುತ್ತಮುತ್ತ ಕೋಳಿ ಹಾಗೂ ಮಾಂಸದ ಅಂಗಡಿ ಮಾಲಿಕರು ಕೋಳಿ ಹಾಗೂ ಮಾಂಸದ ತ್ಯಾಜ್ಯವನ್ನು ದೂರದ ಜಾಗಗಳಿಗೆ ಸಾಗಿಸುವ ಬದಲು ರಸ್ತೆ ಪಕ್ಕದಲ್ಲೇ ತಂದು ಸುರಿಯುತ್ತಿರುವುದರಿಂದ ಕೊಳೆತು ನಾರುತ್ತಿರುವುದರಿಂದ ಇಲ್ಲಿ ವಾಸಿಸುತ್ತಿರುವ ಜನ ಹಾಗೂ ದೂರದ ಊರುಗಳಿಗೆ ತೆರಳುವ ನಾಗರಿಕರು ಮುಗುಮುಚ್ಚಿ ತಿರುಗಾಡುತ್ತಿದ್ದಾರೆ.
ಕೈ ಕಟ್ಟಿ ಕುಳಿತ ಪುರಸಭೆ, ಗ್ರಾಪಂ: ಪುರಸಭಾ ವ್ಯಾಪ್ತಿ ಹಾಗೂ ಮಾಲಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರಲಿದೆ. ಅಂಗಡಿ ಮಾಲಿಕರು ಸತ್ತಂತಹ ಪ್ರಾಣಿ ಮತ್ತು ಕೋಳಿ ಹಾಗೂ ಮಾಂಸದ ತ್ಯಾಜ್ಯ ಮತ್ತು ಪ್ರತಿನಿತ್ಯ ರಸ್ತೆ ಬದಿಗೆ ತಂದು ಸುರಿಯುತ್ತಾರೆ. ಇದು ಕೊಳೆತು ನಾರುತ್ತ ದುರ್ವಾಸೆ ಬೀರಲು ಪ್ರಾರಂಭವಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ದೂರದ ಗೋಣಿಕೊಪ್ಪ ಹಾಗೂ ಕೊಡಗು ಮತ್ತು ಕೇರಳಕ್ಕೆ ತೆರಳುವ ಪ್ರವಾಸಿಗರಿಗೆ ತೊಂದರೆಯಾಗಿದೆ. ಅಲ್ಲದೆ, ಈ ಮಾಂಸ ಹಾಗೂ ತ್ಯಾಜ್ಯ ತಿನ್ನಲು ಹಿಂಡಿಂಡು ನಾಯಿಗಳು ರಸ್ತೆಯಲ್ಲಿ ಅಡ್ಡಾಡುತ್ತಿರುತ್ತವೆ.
ನಾಯಿಗಳು ಕೆಲವೊಮ್ಮೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಶಾಲೆಗಳಿಗೆ ತೆರಳುವ ಮಕ್ಕಳ ಮೇಲೆರಗುತ್ತಿವೆ. ಅಲ್ಲದೇ, ವಾಹನ ಸವಾರರಿಗೆ ನಾಯಿಗಳು ಅಡ್ಡ ಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ರಸ್ತೆ ಪಕ್ಕ ಸುರಿಯುತ್ತಿರುವ ತ್ಯಾಜ್ಯದಿಂದ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ. ಸವಾರರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಪುರಸಭಾ ಮತ್ತು ಮಾಲಂಗಿ ಗ್ರಾಪಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಪುರಸಭಾ ವ್ಯಾಪ್ತಿಯಲ್ಲಿ ಬರುವ ಕೋಳಿ, ಮಾಂಸದ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಿ ತ್ಯಾಜ್ಯವನ್ನು ತಾವೇ ಸೂಕ್ತ ಸ್ಥಳಗಳಿಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಾಗಿಸಲು ವಾಹನಗಳಿಗೆ ಟೆಂಡರ್ ಕರೆಯಲಾಗಿದೆ.
-ಎ.ಪ್ರಸನ್ನ, ಪರಿಸರ ಎಂಜಿನಿಯರ್ ಪುರಸಭೆ ಪಿರಿಯಾಪಟ್ಟಣ
ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ತಾಜ್ಯದ ಕುರಿತು ಮಾಹಿತಿ ಪಡೆಯಲಾಗಿದೆ. ಮುಂದಿನ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗಿಟ್ಟು ತೀರ್ಮಾನದ ನಂತರ ಕ್ರಮ ವಹಿಸಲಾಗುವುದು.
-ಡಾ.ಆಶಾ, ಮಾಲಂಗಿ ಗ್ರಾಪಂ ಪಿಡಿಒ
ಪ್ರತಿನಿತ್ಯ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ತಿನ್ನಲು ನಾಯಿಗಳ ಹಿಂಡು ಬರುತ್ತಿವೆ. ಅಲ್ಲದೇ, ನಾಯಿಗಳು ಶಾಲಾ ಮಕ್ಕಳು ಹಾಗೂ ದಾರಿ ಹೋಕರ ಮೇಲೆ ದಾಳಿ ಮಾಡುತ್ತಿವೆ. ವಾಹನ ಸವಾರರೂ ಸಂಕಷ್ಟ ಎದುರಿಸುತ್ತಿದ್ದಾರೆ.
-ಜಮೀಲ್, ಅಂಕನಹಳ್ಳಿ ಕೊಪ್ಪಲು ನಿವಾಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.