ಚರ್ಚೆಗೆ ದಿನ ನಿಗದಿಪಡಿಸಿ: ಮಹೇಶ್ ಸವಾಲು
Team Udayavani, Aug 6, 2019, 3:00 AM IST
ಮೈಸೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್.ವಿಶ್ವನಾಥ್ ಬಗ್ಗೆ ವಿಧಾನಸಭೆಯಲ್ಲಿ ನಾನು ಆಡಿರುವ ಮಾತಿಗೆ ಬದ್ಧನಿದ್ದು, ನಿಮ್ಮ ಎಲ್ಲಾ ಷರತ್ತುಗಳನ್ನೂ ಒಪ್ಪುತ್ತೇನೆ. ನಾನು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗಿಲ್ಲ ಎಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಬನ್ನಿ, ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ದೂರಾಗುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್, ಎಚ್.ವಿಶ್ವನಾಥ್‌ಗೆ ಪಂಥಾಹ್ವಾನ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಎಚ್.ವಿಶ್ವನಾಥ್ ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಅವರು, ಹಾಗೊಂದು ವೇಳೆ ನೀವು ಬಂದು ಸುಳ್ಳು ಪ್ರಮಾಣ ಮಾಡಿದರೆ ದೇವರು ನೋಡಿಕೊಳ್ಳುತ್ತಾರೆ ಎಂದರು.
ಕಾರ್ಕೋಟಕ ವಿಷ: ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ.ಮಹೇಶ್ ಅಂದಿದ್ದಾರೆ. ಹೌದು, ಎಚ್.ಡಿ.ದೇವೇಗೌಡರ ಕುಟುಂಬ, ಜೆಡಿಎಸ್ ಪಕ್ಷಕ್ಕೆ ವಿಷ ಹಾಕಿದ್ದು ನಾನೇ, ಆ ಕಾರ್ಕೋಟಕ ವಿಷ ಎಚ್.ವಿಶ್ವನಾಥ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಲಸೆ ಹಕ್ಕಿ: ಹಕ್ಕಿಗಳಿಗೆ ಯಾವ್ಯಾವ ಕಾಲದಲ್ಲಿ ಎಲ್ಲಿ ಸೇರಿದ್ರೆ ನೆಮ್ಮದಿಯಾಗಿ ಇರಬಹುದು, ಚಳಿಗಾಲದಲ್ಲಿ ಎಲ್ಲಿರಬೇಕು? ಮಳೆಗಾಲದಲ್ಲಿ ಎಲ್ಲಿರಬೇಕು? ಬೇಸಿಗೆ ಕಾಲದಲ್ಲಿ ಎಲ್ಲಿರಬೇಕು ಅಂತ ಗೊತ್ತಿರುತ್ತೆ. ಆಯಾಯ ಕಾಲಕ್ಕೆ ಅಲ್ಲಿಗೆ ವಲಸೆ ಹೋಗ್ತವೆ. ಆ ರೀತಿ ಎಚ್.ವಿಶ್ವನಾಥ್ ಹಳ್ಳಿಹಕ್ಕಿಯಲ್ಲ, ವಲಸೆ ಹಕ್ಕಿ. ಕಾಂಗ್ರೆಸ್ ಆಯ್ತು. ಜೆಡಿಎಸ್ ಆಯ್ತು, ಈಗ ಯಾವ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂಬುದು ಎಲ್ಲಿರಿಗೂ ಗೊತ್ತಿದೆ ಎಂದು ಟೀಕಿಸಿದ ಅವರು, ಒಮ್ಮೆ ದೇವರ ಮನೆಯಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಎಚ್.ಡಿ.ದೇವೇಗೌಡರ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ನಾನು -ನೀವು ಎಲ್ಲ ಕುಳಿತು ಚರ್ಚಿಸುವಾಗ ಗೌಡರು ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಎಂದು ಸಲಹೆ ನೀಡಿದಾಗ ಮಂತ್ರಿಯಾಗಿದ್ದೀನಿ, ಸಂಸದನಾಗಿದ್ದೀನಿ, ಸಿದ್ದರಾಮಯ್ಯ ಅವರಿಂದ ನೋವನುಭವಿಸಿದ್ದೇನೆ, ಕೊನೆಗಾಲದಲ್ಲಿ ಶಾಸಕನನ್ನಾಗಿ ಮಾಡಿ ಎಂದು ಕೇಳಲಿಲ್ಲವೇ ಎಂದು ಪ್ರಶ್ನಿಸಿದರು.
ರಿಯಲ್ ಎಸ್ಟೇಟ್ ಮಾಡ್ತೇನೆ: ಹೌದು, ನಾನು ಬದುಕಿಗಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತೇನೆ. ಯಾರಿಗೂ ಮೋಸ ಮಾಡಿಲ್ಲ, ಅದು ಎಲ್ಲರಿಗೂ ಗೊತ್ತಿದೆ. ರಾಜಕಾರಣವನ್ನೇ ನಾನು ಉದ್ಯಮವಾಗಿಸಿಕೊಂಡಿಲ್ಲ. ಈವರೆಗೆ ವರ್ಗಾವಣೆಗಾಗಲಿ, ಗುತ್ತಿಗೆದಾರರಿಂದಾಗಲಿ ಹಣ ಪಡೆದಿದ್ದರೆ ಹೇಳಲಿ ಎಂದು ಪ್ರಶ್ನಿಸಿದ ಅವರು, ಕಳೆದ 14 ತಿಂಗಳಲ್ಲಿ ನಾನು ಯಾರಿಗೆ ಸಹಾಯ ಮಾಡಿದೆ ಎಂಬುದು ಗೊತ್ತಿಲ್ವಾ?
ನಾನು ಕಷ್ಟದಲ್ಲಿದ್ದೀನಿ ನನ್ನ ಮಗ ಹೋಗಿ ಭೇಟಿ ಮಾಡ್ತಾನೆ ತಲುಪಿಸಲು ಹೇಳಪ್ಪಾ ಅನ್ನಲಿಲ್ವಾ ನೀವು? ಎಷ್ಟು ಸುಳ್ಳು ಹೇಳುತ್ತೀರಿ? ಮನಸಾಕ್ಷಿ ಇಲ್ಲವಾ ನಿಮಗೆ ಎಂದು ಪ್ರಶ್ನಿಸಿದರು. ಕೆ.ಆರ್.ನಗರಕ್ಕೆ ರಾಹುಲ್ ಗಾಂಧಿ ಬಂದಾಗ ಸಿದ್ದರಾಮಯ್ಯ ಇರುವ ಕಡೆ ನಾನು ಬರುವುದಿಲ್ಲ ಅಂದವರು ಮಾಧ್ಯಮಗಳ ಮುಂದೆ ನನ್ನನ್ನು ಕರೆಯಲೇ ಇಲ್ಲ ಎನ್ನುತ್ತೀರಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಬಂದಾಗ ನನಗಿಂತ ಸಿದ್ದರಾಮಯ್ಯಗೆ ಹೆಚ್ಚು ಜೈಕಾರ ಕೂಗ್ತಾವ್ರೆ ಅನ್ನಲಿಲ್ವಾ ನೀವು ಎಂದು ಜರಿದರು.
ವ್ಯಭಿಚಾರಿ: ಎಚ್.ವಿಶ್ವನಾಥ್ ರಾಜಕಾರಣದ ವ್ಯಭಿಚಾರಿ, ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಜರಿದ ಸಾ.ರಾ.ಮಹೇಶ್, ನಿಷ್ಠೆ, ಪ್ರಾಮಾಣಿಕತೆ, ನಿಯತ್ತು ಇರೋದೇ ತಪ್ಪಾ? ನಿಮ್ಮ ಜೀವನ ಚರಿತ್ರೆಯನ್ನೂ ಬರೆಯಿರಿ, ನನ್ನ ಜೀವನ ಚರಿತ್ರೆಯನ್ನು ಬರೆಯುತ್ತೇನೆ ಚರ್ಚೆಯಾಗಲಿ, ಜನ ತೀರ್ಮಾನ ಮಾಡುತ್ತಾರೆ ಎಂದರು.
ಈ ಭಾಗದಲ್ಲಿ ದಾಖಲೆಯ ಗೆಲುವು: 2008ರಲ್ಲಿ ನಿಮ್ಮ ವಿರುದ್ಧವೇ ಕೆ.ಆರ್.ನಗರ ಕ್ಷೇತ್ರದ ಜನತೆ ನನ್ನನ್ನು 20,548 ಮತಗಳ ಅಂತರದಿಂದ ಗೆಲ್ಲಿಸಿದ್ದರು. 2013ರಲ್ಲಿ 16 ಸಾವಿರ ಮತಗಳ ಅಂತರದಿಂದ ಮತ್ತೆ ಗೆಲ್ಲಿಸಿದ್ದರು. ನಿಮ್ಮನ್ನು ಜೆಡಿಎಸ್‌ಗೆ ಕರೆತಂದ ಪರಿಣಾಮ 2018ರ ಚುನಾವಣೆಯಲ್ಲಿ ನಾನು ಗೆದ್ದಿದ್ದು 1,850 ಮತಗಳ ಅಂತರದಿಂದ, ಸಿದ್ದರಾಮಯ್ಯ ಅವರೂ ಸೇರಿದಂತೆ ಈ ಭಾಗದಲ್ಲಿ ಯಾರೂ ಜೆಡಿಎಸ್‌ನಿಂದ ಸತತ ಮೂರು ಬಾರಿ ಆಯ್ಕೆಯಾಗಿಲ್ಲ. ಕೆ.ಆರ್.ನಗರ ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಗೆಲ್ಲಿಸಿದ್ದಾರೆ. ನಿಮ್ಮ ಆತ್ಮಸಾಕ್ಷಿಗೆ ಸುಳ್ಳು ಹೇಳಬೇಡಿ, ನೊಂದು ಹೇಳುತ್ತಿದ್ದೇನೆ ಎಂದರು.
ಎದುರಿಗೆ ಕೂರಿಸಿಕೊಂಡು ಹೇಳುವುದು ಬಹಳಷ್ಟಿದೆ: ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ದೇವರ ಮುಂದೆ ಪ್ರಮಾಣ ಮಾಡಲಿ ಎಂದಿದ್ದಾರೆ. ಜೊತೆಗೆ ಪತ್ರಿಕಾ ಭವನದಲ್ಲಿ ಚರ್ಚೆಗೆ ಬನ್ನಿ ಎಂದಿದ್ದಾರೆ. ಅವರ ಈ ನಾಲ್ಕೂ ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ. ಹಿರಿಯರಾದ ಅವರೇ ಚರ್ಚೆಗೆ ದಿನಾಂಕ ನಿಗದಿಪಡಿಸಲಿ, ಅವರನ್ನೇ ಎದುರಿಗೆ ಕೂರಿಸಿಕೊಂಡು ಹೇಳುವುದು ಬಹಳಷ್ಟಿದೆ, ಯಾವ್ಯಾವ ದಿನ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದೀರಿ,
ಹಾಗೆ ಭೇಟಿ ಮಾಡಿದ್ದು ರಾಜ್ಯದ ಜನರ ಅಭಿವೃದ್ಧಿಗಾಗಿ ಸಲಹೆ ನೀಡಲೋ, ನಿಮ್ಮ ವೈಯಕ್ತಿಕ ಕೆಲಸಗಳಿಗಾಗಿಯೋ? ನನ್ನ ಜೊತೆ ಏನೇನೂ ಮಾತನಾಡಿದ್ದೀರಿ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಸಾ.ರಾ.ಮಹೇಶ್ ತಿಳಿಸಿದರು. ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾಗಿದ್ದವರು ನಮ್ಮ ಪಕ್ಷಕ್ಕೆ ಸೇರಿದಾಗ ಸ್ವಾಗತ ಮಾಡಿದ ತಪ್ಪಿಗೆ ನಿಂದನೆಗಳನ್ನು ಕೇಳಬೇಕಾಗಿ ಬಂದಿದೆ. ಅವರ ನುಡಿ ಒಂದು-ನಡೆ ಒಂದು ಎಂಬುದು ರಾಜ್ಯದ ಜನರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಸದನದಲ್ಲಿ ಅವರ ಬಗ್ಗೆ ಮಾತನಾಡಿದ್ದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.