ಜಾತ್ರೆ ನೆಪದಲ್ಲಿ ಸಮಾಜಕ್ಕೆ ಸಂಸ್ಕಾರ: ಶ್ರೀ
Team Udayavani, Feb 2, 2019, 7:11 AM IST
ಮೈಸೂರು: ಬದಲಾದ ಆಧುನಿಕ ಜಗತ್ತಿನಲ್ಲಿ ಜಾತ್ರೆಗಳ ನೆಪದಲ್ಲಿ ಶ್ರೀಮಠಗಳು ಸಮಾಜಕ್ಕೆ ಸಂಸ್ಕಾರವನ್ನು ಕೊಡುತ್ತಾ ಬಂದಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುವ ಆರು ದಿನಗಳ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಚಮ್ಮಾಳೆ ಬಾರಿಸುವ ಮೂಲಕ ಸಾಂಸ್ಕೃತಿಕ ಮೇಳ ಉದ್ಘಾಟಿಸಿ ಮಾತನಾಡಿದರು. ಹಿಂದೆ ಜಾತ್ರೆಗಳು ಭಕ್ತಿ, ಭಜನೆಗೆ ಸೀಮಿತವಾಗಿರುತ್ತಿತ್ತು. ಬದಲಾದ ಆಧುನಿಕ ಜಗತ್ತಿನಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾದ ಶ್ರೀಮಠಗಳು ಆಧುನಿಕತೆ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಆಧುನಿಕತೆಯ ನಡುವೆಯೂ ಜಾತ್ರೆಗಳಲ್ಲಿ ಧಾರ್ಮಿಕತೆಯನ್ನು ಕೊಡುತ್ತಾ ಬಂದಿವೆ ಎಂದು ಹೇಳಿದರು.
ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಸಮಾಜದ ಪ್ರಗತಿಗೆ ಅವಕಾಶವಾಗುತ್ತದೆ. ಮನುಷ್ಯನ ದೇಹ ವ್ಯವಹಾರಿಕವಾಗಿದ್ದರೂ ಮನಸ್ಸಿಗೆ ಸಂಸ್ಕಾರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಾತ್ರೆಗಳು ಮನುಷ್ಯನಿಗೆ ಸಂಸ್ಕಾರ ಕೊಡುತ್ತವೆ. ಆಧ್ಯಾತ್ಮದ ಜೊತೆಗೆ ಸಮಾಜದ ಎಲ್ಲವನ್ನೂ ಜಾತ್ರೆ ನೆಪದಲ್ಲಿ ಕೊಡಲಾಗುತ್ತಿದೆ ಎಂದು ಹೇಳಿದರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನ, ಕೃಷಿಮೇಳದಲ್ಲಿ ಜಾತ್ರೆ ನೆಪದಲ್ಲಿ ರೈತರಿಗೆ ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಸುವ ಪ್ರಯತ್ನವಾಗಿದೆ. ಕೃಷಿಯೇ ದೇಶದ ಶಕ್ತಿ. ಹೀಗಾಗಿ ರೈತರಿಗೆ ಕೃಷಿಯಲ್ಲಿನ ಒಳ್ಳೆಯ ವಿಚಾರಗಳನ್ನು ತಿಳಿಸಿದರೆ, ಕೃಷಿಕರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಮುಂದುವರಿಯದ ಕೃಷಿಕ: ದೇಶ ಸ್ವಾತಂತ್ರ್ಯವಾದಾಗ 1947ರಲ್ಲಿ ದೇಶದ ಒಟ್ಟು ಆದಾಯಕ್ಕೆ ಕೃಷಿಯ ಪಾಲು (ಜಿಡಿಪಿ) ಶೇ.50ರಷ್ಟಿತ್ತು. ಆದರೆ, ಇವತ್ತಿಗೂ ರೈತರು ಹಳ್ಳಿಯಲ್ಲೇ ವಾಸಮಾಡುತ್ತಾ ಕೃಷಿ ಮಾಡಿಕೊಂಡಿದ್ದಾರೆ. ಆದರೆ, ಜಿಡಿಪಿಗೆ ಕೃಷಿ ವಲಯದ ಕೊಡುಗೆ ಶೇ.17 ರಿಂದ 18 ಮಾತ್ರ. ಕೃಷಿ ಹಿಡುವಳಿಗಳು ಸಣ್ಣದಾಗುತ್ತಾ, ಕೃಷಿಯ ವೆಚ್ಚ ಹೆಚ್ಚಾಗಿರುವುದು ಇದಕ್ಕೆ ಕಾರಣ. ಹಳೇಯ ಕೃಷಿ ಪದ್ಧತಿಯಿಂದ ಖರ್ಚು ಹೆಚ್ಚಾಗುತ್ತಿದೆ. ಜೊತೆಗೆ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಗೊತ್ತಾಗದಂತಾಗಿದೆ ಎಂದು ಹೇಳಿದರು.
ಸುತ್ತೂರು ಮಠ ಜಾತ್ರೆಯ ನೆಪದಲ್ಲಿ ಕೃಷಿ ಮೇಳವನ್ನು ಆಯೋಜಿಸಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಮೂಲಕ ಧರ್ಮದ ಜೊತೆಗೆ ಬದುಕಿನ ಜ್ಞಾನವನ್ನೂ ನೀಡುತ್ತಾ ಕೃಷಿ ವಿಶ್ವವಿದ್ಯಾನಿಲಯಗಳು ಮಾಡದ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ಪ್ರಶಂಸಿಸಿದರು. ಮಹತ್ಕಾರ್ಯ ಮಾಡುತ್ತಿದೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಮಾತನಾಡಿ, ಹಿಂದೆ ದನಗಳನ್ನು ಕಟ್ಟುವುದು, ತೇರು ಎಳೆದರೆ ಜಾತ್ರೆ ಆಗಿ ಹೋಗುತ್ತಿತ್ತು. ಆದರೆ, ಸುತ್ತೂರು ಶ್ರೀಗಳು ಜಾತ್ರೆಯ ಹೆಸರಲ್ಲಿ ವಸ್ತು ಪ್ರದರ್ಶನ, ಕೃಷಿ ಮೇಳ ಆಯೋಜಿಸುವ ಮೂಲಕ ಜ್ಞಾನ ದಾಸೋಹ ನೀಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ರಕ್ಷಣೆ ನೀಡುವ ಮಾನವ ಧರ್ಮವನ್ನು ಶ್ರೀಮಠ ಪೋಷಿಸುತ್ತಾ ಬಂದಿದೆ. ಜಾತಿ-ಮತ ಭೇದ ಮಾಡದೆ ಎಲ್ಲರಿಗೂ ಶಿಕ್ಷಣ ನೀಡುವ ಮಹತ್ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಮಕ್ಕಳಿಗೆ ಸಂಸ್ಕಾರ: ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಮಾತನಾಡಿ, ಮಠಗಳಲ್ಲಿ ಶಿಸ್ತು, ಸಂಸ್ಕೃತಿ, ಸಂಸ್ಕಾರಗಳನ್ನು ಹೇಳಿಕೊಡಲಾಗುತ್ತೆ. ಹೀಗಾಗಿ ಶ್ರೀಮಠದಲ್ಲಿ ಬೆಳೆದವರು ಸಮಾಜದಲ್ಲಿ ಸುಸಂಸ್ಕೃತರಾಗಿರುತ್ತಾರೆ. ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎಂಬಂತೆ ಶ್ರೀಮಠಗಳು ಮಕ್ಕಳಿಗೆ ಸಂಸ್ಕಾರ ಕಲಿಸುತ್ತಾ, ಸಮಾಜಮುಖೀ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ತಿರುವನಂತಪುರ ವರ್ಕಲ್‌ನ ಶಿವಗಿರಿ ಮಠದ ಅಧ್ಯಕ್ಷ ಸ್ವಾಮಿ ವಿಶುದ್ಧಾನಂದಜೀ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಶಾಸಕ ವಾಸು, ತರಳಬಾಳು ವಿದ್ಯಾಸಂಸ್ತೆಗಳ ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಯ್ಯ, ಅಮೆರಿಕಾದಿಂದ ಬಂದಿದ್ದ ಶ್ರೀಮಠದ ಭಕ್ತರಾದ ಕವಿತಾ ಕೊಟ್ರಪ್ಪ-ವಿಜಯ ಕೊಟ್ರಪ್ಪ ದಂಪತಿ ಹಾಗೂ ಶೀಲಾ ರಾಜಶೇಖರ್, ಬೆಂಗಳೂರಿನ ವರ್ತಕ ಎಚ್.ಎಸ್.ಸೋಮಶೇಖರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.