ಸಿದ್ದರಾಮಯ್ಯ ಬಜೆಟ್‌ನ ಯೋಜನೆಗಳಿಗೆ ತಿಲಾಂಜಲಿ?
Team Udayavani, Jun 17, 2018, 12:31 PM IST
ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ದಾಖಲೆಯ 13ನೇ ಆಯವ್ಯಯಕ್ಕೆ ಸಮ್ಮಿಶ್ರ ಸರ್ಕಾರ ಎಳ್ಳು-ನೀರು ಬಿಡುವ ಸಾಧ್ಯತೆ ಹೆಚ್ಚಿದೆ.
ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜುಲೈನಲ್ಲಿ ಹೊಸ ಬಜೆಟ್ ಮಂಡಿಸುವುದಾಗಿ ಘೋಷಿಸಿದ್ದು, ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಸಾಮಾನ್ಯ ಕಾರ್ಯಕ್ರಮಗಳ ಕ್ರೋಢೀಕರಣ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲು ಸಮಿತಿ ರಚನೆ, ಸಿದ್ದರಾಮಯ್ಯ ಜಾರಿ ಮಾಡಿದ್ದ ಎಲ್ಲಾ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸಲು ತೀರ್ಮಾನಿಸಿದೆ.
ಯಕ್ಷಪ್ರಶ್ನೆ: ಜನಪ್ರಿಯ ಕಾರ್ಯಕ್ರಮಗಳ ಮುಂದುವರಿಕೆ ಎಂದಾಗ ಅನ್ನಭಾಗ್ಯ ಸೇರಿದಂತೆ ಸಿದ್ದರಾಮಯ್ಯ ಅವರ ಕೆಲವೊಂದು ಭಾಗ್ಯಗಳು ಮುಂದುವರಿಯಬಹುದು, ಆದರೆ, ಮುಖ್ಯಮಂತ್ರಿಯಾಗಿ ಅವರು ಮಂಡಿಸಿದ ಕಡೆಯ ಆಯವ್ಯಯದಲ್ಲಿ ತವರು ಜಿಲ್ಲೆಗೆ ಘೋಷಿಸಿದ್ದ ಹಲವು ಯೋಜನೆಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಘೋಷಣೆಗಳಾಗಿಯೇ ಉಳಿವ ಸಾಧ್ಯತೆ: 2018-19ನೇ ಸಾಲಿನ ಆಯವ್ಯಯದಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅರಮನೆಗಳ ನಗರಿ ಮೈಸೂರಿನ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಯೋಜನೆಗಳ ಜೊತೆಗೆ ಚುನಾವಣೆ ದೃಷ್ಟಿಯಿಂದ ವಿವಿಧ ಜಾತಿ-ಧರ್ಮದವರನ್ನು ಓಲೈಸಲು ಅನುದಾನವನ್ನೂ ಘೋಷಣೆ ಮಾಡಿದ್ದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಕೇವಲ ಮೂರು ತಿಂಗಳ ಕಾಲ ನಡೆಯುವ ದಸರಾ ವಸ್ತುಪ್ರದರ್ಶನವನ್ನು ನವದೆಹಲಿಯ ದೆಹಲಿ ಹಾತ್ ಮಾದರಿಯಲ್ಲಿ ವರ್ಷಪೂರ್ತಿ ನಡೆಯುವಂತೆ ಮೈಸೂರು ಹಾತ್ ನಿರ್ಮಿಸುವ ಘೋಷಣೆ ಮಾಡಿದ್ದರು.
ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಪ್ರತಿವರ್ಷ ಆಯೋಜಿಸುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟವನ್ನು ಈ ವರ್ಷದಿಂದ ರಾಷ್ಟ್ರೀಯ ಕ್ರೀಡಾಕೂಟದಂತೆ ವಿವಿಧ ಹಂತಗಳಲ್ಲಿ ಆಯೋಜಿಸಲು ಮತ್ತು ರಾಜ್ಯಮಟ್ಟದ ಕ್ರೀಡಾಕೂಟವನ್ನು ದಸರಾ-ಸಿಎಂ ಕಪ್ ಹೆಸರಿನಲ್ಲಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಲು 7ಕೋಟಿ ರೂ. ಅನುದಾನ ಒದಗಿಸುವ ಘೋಷಣೆ ಮಾಡಿದ್ದರು.
ಇನ್ನು ಕೇಂದ್ರ ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಬೆಂಗಳೂರು-ಮೈಸೂರು ಕಾರಿಡಾರ್‌ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ ಪಡಿಸುವುದಾಗಿ ಆಯವ್ಯಯದಲ್ಲಿ ಹೇಳಲಾಗಿತ್ತು.
ಯೋಜನೆಗಳು: ಕಬಿನಿ ನದಿಯಿಂದ ನಂಜನಗೂಡು ತಾಲೂಕು ಇಬ್ಬಜಾಲ ಗ್ರಾಮದ ಬಳಿ ನೀರನ್ನು ಎತ್ತಿ ಕುಡಿಯುವ ನೀರು ಒದಗಿಸುವ ಸಲುವಾಗಿ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 68 ಕೋಟಿ ರೂ. ಒದಗಿಸುವುದು. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಆರಂಭಿಸಲು 15ಕೋಟಿ ರೂ., ಮೈಸೂರಿನ ಶುಶ್ರೂಷಾ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಲು 30 ಕೋಟಿ ರೂ., ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಮುಖಾಂತರ ಸಾರ್ವಜನಿಕ/ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನ ನಂಜನಗೂಡು ವರ್ತುಲ ರಸ್ತೆ ಬಳಿ 6.5 ಎಕರೆ ಪ್ರದೇಶದಲ್ಲಿ 2ನೇ ಹಂತದ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುವುದು.
ನೂತನ ಭರವಸೆ: 2 ಮತ್ತು 3ನೇ ಸ್ತರದ ನಗರಗಳಲ್ಲಿ ಸೂಕ್ಷ್ಮ/ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಹೊಸ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಲಾಗುವುದು.
ವಿದ್ಯುತ್ ಪ್ರಸರಣಾ ಜಾಲವನ್ನು ಬಲವರ್ಧನೆಗೊಳಿಸಲು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಮತ್ತು ಕಿತ್ತೂರು, ತಿ.ನರಸೀಪುರ ತಾಲೂಕಿನ ಮಡವಾಡಿ (ಪರಿನಾಮಿಪುರ) ಹಾಗೂ ಮೆಲೆಯೂರು, ನಂಜನಗೂಡು ತಾಲೂಕಿನ ಹೆಮ್ಮರಗಾಲ ಹಾಗೂ ಚಂದ್ರನಾಡಿ (ನಲ್ಲಿನಾಥಪುರ)ಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಸ್ಥಾಪಿಸುವುದು.
ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಬಸವ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು 2ಕೋಟಿ ರೂ.ಅನುದಾನ ಒದಗಿಸುವುದು.ಕುವೆಂಪು ಅವರ ಮೈಸೂರಿನ ನಿವಾಸ ಉದಯ ರವಿಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿಪಡಿಸುವುದು. ಜಿಲ್ಲೆಯ ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣ.
ಮೈಸೂರಿನಲ್ಲಿ ಮಾಜಿ ಸಚಿವ ದಿ.ಅಜೀಜ್ ಸ್ಮಾರಕ ಸಮುದಾಯ ಭವನ ನಿರ್ಮಿಸಲು 3 ಕೋಟಿ ರೂ. ಒದಗಿಸುವುದಾಗಿ ಆಯವ್ಯಯದಲ್ಲಿ ಘೋಷಣೆ ಮಾಡಿದ್ದರು. ಅದು ನೆರವೇರುವ ಸಾಧ್ಯತೆ ಕಡಿಮೆಯಾಗಿದೆ. ಆದರೆ, ಕುಮಾರಸ್ವಾಮಿ ಸಂಪುಟದಲ್ಲಿ ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವರಾಗಿ ಜಿಲ್ಲೆಯವರೇ ಆದ ಸಾ.ರಾ.ಮಹೇಶ್ ಇರುವುದು ಒಂದಷ್ಟು ಆಶಾಭಾವ ಮೂಡಿಸಿದೆ.
ಮುಂದುವರಿಯುವುದೇ?: ಆಯವ್ಯಯಕ್ಕೆ ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ದೊರೆತಿದ್ದರು, ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ 2018-19ನೇ ಸಾಲಿನ ಆಯವ್ಯಯದಲ್ಲಿನ ಕಾರ್ಯಕ್ರಮಗಳು ಜಾರಿಯಾಗಲಿಲ್ಲ.
ಈ ಮಧ್ಯೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬದಲಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದರಿಂದ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೊಸದಾಗಿ ಮಂಡಿಸಲಿರುವ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ತವರಿಗೆ ಘೋಷಿಸಿಕೊಂಡಿದ್ದ ಇಷ್ಟೂ ಕಾರ್ಯಕ್ರಮಗಳನ್ನು ಮುಂದುವರಿಸುವ ಸಾಧ್ಯತೆ ಕಡಿಮೆ ಇದೆ.
*ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.