ಅಹಿಂದ ಸಬಲೀಕರಣಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ
Team Udayavani, Feb 23, 2018, 1:20 PM IST
ಮೈಸೂರು: ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಆರ್ಥಿಕ ಸಬಲೀಕರಣಕ್ಕೆ ಯಾವ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಪ್ರಶ್ನಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13ನೇ ಬಜೆಟ್ ಮಂಡಿಸಿದೆ,
2 ಲಕ್ಷ ಕೋಟಿ ಬಜೆಟ್ ಗಾತ್ರ ಎಂದು ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಎಲ್ಲ ಭಾಗ್ಯಗಳೂ ಸೇರಿ ಅಹಿಂದ ವರ್ಗಗಳಿಗೆ ಮೀಸಲಿಟ್ಟಿರುವುದು ಕೇವಲ 4 ಸಾವಿರ ಕೋಟಿ. ಅಹಿಂದ ವರ್ಗಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಬಲೀಕರಣಕ್ಕೆ ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ. ಬಾಯಿ ಮಾತಿನಲ್ಲಷ್ಟೇ ಅಹಿಂದ ಎನ್ನುತ್ತಾರೆ ಎಂದು ಟೀಕಿಸಿದರು.
ಕುರುಬರಿಗೆ ಕೊಡುಗೆ ಏನು?: ದೇವರಾಜ ಅರಸು ಅವರು ಅಹಿಂದ ವರ್ಗಗದವರಿಗೆ ಭೂಮಿ, ಉದ್ಯೋಗ ಕೊಟ್ಟರು, ನೀವೇನು ಕೊಟ್ಟಿರಿ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ ವಿಶ್ವನಾಥ್, ತೆಲಂಗಾಣ ಸರ್ಕಾರ ಪ್ರತಿ ಕುರುಬರಿಗೆ 20 ಕುರಿಗಳನ್ನು ಉಚಿತವಾಗಿ ಕೊಡುವ ಯೋಜನೆ ಮಾಡಿದೆ. ನೀವು ಅಹಿಂದ ವರ್ಗಗಳಿಗಿರಲಿ ನಿಮ್ಮದೇ ಕುರುಬ ಸಮುದಾಯಕ್ಕಾದರೂ ಏನು ಕೊಟ್ಟಿರಿ, ಕುರಿ ಸತ್ತರೆ ವಿಮೆ ಅಂತೀರಿ, ಅದೂ ಸರಿಯಾಗಿ ಸಿಗುತ್ತಿಲ್ಲ ಎಂದು ದೂರಿದರು.
ದುಡ್ಡು ಬಿತ್ತಿ ಬೆಳಿತೀನಿ: ಮುಂಬರುವ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತಾರೆ. ದುಡ್ಡು ಬಿತ್ತಿ ಬೆಳಿತೇನೆ ಎಂಬ ಮನಸ್ಥಿತಿಯಲ್ಲಿರುವ ಸಿದ್ದರಾಮಯ್ಯ, ದುಡ್ಡು ಚೆಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇನೆ ಅಂದುಕೊಂಡಿದ್ದಾರೆ. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಇವರು ಮಾಡಿದ್ದು ಇದನ್ನೇ. ರಾಜ್ಯದ ಜನತೆ ಎಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಬ್ಯಾಲೆಟ್ ಮೂಲಕ ಉತ್ತರ ನೀಡುತ್ತಾರೆ ಎಂದರು.
ಕಾನೂನು ಸುವ್ಯವಸ್ಥೆ ಎಲ್ಲಿದೆ?: ಕಾಂಗ್ರೆಸ್ಸಿಗರು, ಎಂಎಲ್‌ಎ ಮಗನೇ ಹಫ್ತಾ ವಸೂಲಿ ಮಾಡುವುದಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು. ಗೃಹಮಂತ್ರಿ, ಡಿಜಿಗೆ ಬೆಲೆಯೇ ಇಲ್ಲ. ಅವರ ಮಾತನ್ನು ಯಾರೂ ಕೇಳಲ್ಲ. ಗೃಹ ಇಲಾಖೆಯನ್ನು ನಡೆಸುತ್ತಿರುವವರೇ ಬೇರೆ. ಕೆಂಪಯ್ಯ ಇವರನ್ನೆಲ್ಲ ನಿಯಂತ್ರಿಸುತ್ತಿದ್ದಾರೆ. ಕೆಂಪಯ್ಯ ಅವರಿಗೆ ಪ್ರತ್ಯೇಕ ಸಾಂವಿಧಾನಿಕ ಅಧಿಕಾರವನ್ನು ಕೊಡಲಾಗಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾದರೆ ಅದರ ಪರಿಣಾಮ ರಾಜ್ಯದ ಆರ್ಥಿಕತೆ ಮೇಲಾಗುತ್ತದೆ. ಪ್ರವಾಸೋದ್ಯಮ, ಕೈಗಾರಿಕೋದ್ಯಮ ಹಾಳಾಗುತ್ತೆ, ಈ ಬಗ್ಗೆ ಮುಖ್ಯಮಂತ್ರಿಗೆ ಗಮನವೇ ಇಲ್ಲ. ಅವರು ಭಾಗ್ಯಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು. ಈ ಬಜೆಟ್ ಸುಳ್ಳುಗಳ ಕಂತೆ. ರಾಜ್ಯದಲ್ಲಿ 100 ಪಬ್ಲಿಕ್ ಶಾಲೆಗಳ ಆರಂಭಕ್ಕೆ ಈ ಬಜೆಟ್‌ನಲ್ಲಿ ತಲಾ 5 ಲಕ್ಷ ರೂ. ಮೀಸಲಿಟ್ಟಿದ್ದಾರೆ.
ಈ ಹಣದಲ್ಲಿ ಪಬ್ಲಿಕ್ ಶಾಲೆ ಆರಂಭಿಸುವುದಲ್ಲ, ಅಲ್ಲಿ ಸೀಟು ಕೊಡಿಸಲೂ ಆಗಲ್ಲ. ಜನರನ್ನು ಮೂರ್ಖರನ್ನಾಗಿಸಲು ಹೋಗಿ ಇವರೇ ಮೂರ್ಖರಾಗಿದ್ದಾರೆ. ಕಳೆದ ನಾಲ್ಕೂ ಮುಕ್ಕಾಲು ವರ್ಷದಲ್ಲಿ ಒಂದೇ ಒಂದು ಅಹಿಂದ ವರ್ಗಗಳ ಹಾಸ್ಟೆಲ್ ಕಟ್ಟಡ ನಿರ್ಮಾಣ ಪೂರ್ಣಗೊಂಡಿಲ್ಲ. ಬಾಯಿಮಾತಿಗಷ್ಟೇ ಅಹಿಂದ ಎಂದು ಹೇಳುವ ಸಿದ್ದರಾಮಯ್ಯ ಅವರಿಂದ ಅಹಿಂದ ವರ್ಗದವರು ದೂರಾಗುತ್ತಿದ್ದಾರೆ.
5 ಸ್ಟಾರ್ ಕುರುಬರು: ಬಸ್ ಓಡಿಸುತ್ತಿರುವ ಎಚ್.ಎಂ.ರೇವಣ್ಣ, ಭೈರತಿ ಬಸವರಾಜು, ಕೆಂಪಯ್ಯ, ರಾಮಯ್ಯ ಇವರೇ ಸದ್ಯ ಸಿದ್ದರಾಮಯ್ಯ ಜತೆಗಿರುವ 5ಸ್ಟಾರ್ ಕುರುಬರು ಎಂದು ಲೇವಡಿ ಮಾಡಿದರು.
ಕೃತಜ್ಞತೆ ಇಲ್ಲ: ಮನುಷ್ಯನಿಗೆ ಕೃತಜ್ಞತೆ ಎಂಬುದಿರಬೇಕು. ತನ್ನನ್ನು ರಾಜಕೀಯವಾಗಿ ಬೆಳೆಸಿದವರು, ಪಕ್ಷ, ನಾಡಿನ ಜನರ ಬಗ್ಗೆ ಕೃತಜ್ಞತೆ ಇಲ್ಲದವನು ಜನನಾಯಕನಾಗಲಾರ. ಸಿದ್ದರಾಮಯ್ಯಗೆ ಕೃತಜ್ಞತೆಯೇ ಇಲ್ಲ ಎಂದರು.
ಕಮಿಷನ್ ಸರ್ಕಾರ: ಯಾವ ಸರ್ಕಾರಿ ಕಚೇರಿಗೆ ಹೋದರೂ ಲಂಚವಿಲ್ಲದೆ ಕೆಲಸ ಆಗುವುದಿಲ್ಲ. ಜತೆಗೆ ಉದ್ಘಾಟನೆಯಾದ ಕಟ್ಟಡಕ್ಕೆ ಹೆಚ್ಚುವರಿ ಅಂದಾಜು ಪಟ್ಟಿ ತಯಾರಿಸಿ ಹಣ ಲೂಟಿ ಮಾಡುವ ಕಾಂಟ್ರಾಕ್ಟರ್ ಓರಿಯಂಟೆಡ್ ಸರ್ಕಾರ ಇದು ಎಂದು ಟೀಕಿಸಿದರು.
ಬಿಸಿಎಂ ಕಾರ್ಯಕರ್ತರ ಸಭೆ: ಫೆ.24ರಂದು ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ.
ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಬಂಡೆಪ್ಪ ಕಾಶೆಂಪುರ, ಶಾಸಕ ಮಧು ಬಂಗಾರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಸೋಮಸುಂದರ್, ರೇವಣ್ಣ, ದೀಪಕ್, ಡಿ.ಕುಮಾರ್ ಮೊದಲಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.