ಸಂವಿಧಾನ ಉಲ್ಲಂಘಿಸಿದರಷ್ಟೇ ಬಜರಂಗದಳ ನಿಷೇಧ: ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದನೆ
Team Udayavani, May 6, 2023, 7:35 AM IST
ಮೈಸೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾವ ಮಾಡಿ ವಿವಾದ ಉಂಟಾಗಿರುವಂತೆಯೇ ಆ ಕಾವು ತಣಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡುವೆಯೇ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂವಿಧಾನ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ಕೃತ್ಯವೆಸಗುವ ಸಂಘಟನೆಗಳನ್ನು ನಿಷೇಧ ಮಾಡಲಾಗುತ್ತದೆ ಎಂದು ಭರವಸೆಯನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಲಾಗಿದೆ. ಅದೇ ನೀತಿ ಬಜರಂಗದಳಕ್ಕೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವನ್ನು ಪ್ರಸ್ತಾವಿಸಿದ್ದರಿಂದ ಬಿಜೆಪಿಗೆ ನೀವೇ ಅಸ್ತ್ರ ಕೊಟ್ಟಂತಾಗಲಿಲ್ಲವೇ?
ಪ್ರಣಾಳಿಕೆಯಲ್ಲಿರುವ ಬಜರಂಗದಳ ನಿಷೇಧದ ಪ್ರಸ್ತಾವವನ್ನು ಬಿಡುಗಡೆ ಮುನ್ನ ನಾನು ಓದಿರಲಿಲ್ಲ. ಪ್ರಣಾಳಿಕೆ ಸಮಿತಿಯವರು ಇದನ್ನು ಸೇರಿಸಿದ್ದಾರೆ. ಅದರಲ್ಲಿರುವ ಈ ವಿಚಾರಕ್ಕೆ ಬದ್ಧನಾಗಿದ್ದೇನೆ. ಸಂವಿಧಾನವನ್ನು ಉಲ್ಲಂ ಸುವ ವ್ಯಕ್ತಿಗಳು ಅಥವಾ ಸಂಘಟನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಹಾಗೂ ಅಂತಹ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ.
ಬಜರಂಗದಳ ಹಾಗೂ ಪಿಎಫ್ಐ ಹೆಸರನ್ನು ಪ್ರಸ್ತಾವಿಸಿದ್ದೇವೆ. ಸಂವಿಧಾನವನ್ನು ಉಲ್ಲಂ ಸಿದರೆ ಅಂಥವರ ಮೇಲೆ ಕ್ರಮ ಎಂದಿದ್ದೇವೆ, ಇದರಲ್ಲಿ ತಪ್ಪೇನಿದೆ?
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಬದ್ಧವಾಗಿದ್ದೇವೆ. ಸಂವಿಧಾನವೇ ಪವಿತ್ರ ಎಂದು ನಾವು ನಂಬಿದ್ದೇವೆ. ಬಜರಂಗದಳ ಮತ್ತು ಪಿಎಫ್ಐಗಳ ಸಹಿತ ಬಹುಸಂಖ್ಯಾಕ ಅಥವಾ ಅಲ್ಪಸಂಖ್ಯಾಕ ಸಂಘಟನೆಗಳು ಸಂವಿಧಾನದ ವಿಧಿಗಳನ್ನು ಉಲ್ಲಂ ಸುವುದನ್ನು ಸಹಿಸುವುದಿಲ್ಲ. ಅಂಥ ಬೆಳವಣಿಗೆ ಆದಾಗ ಮಾತ್ರ ನಿಷೇಧದ ಕ್ರಮವನ್ನು ಪ್ರಸ್ತಾವಿಸಿದ್ದೇವೆ. ಇದು ಬಿಜೆಪಿಗೆ ಅಸ್ತ್ರವಾಗಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣವನ್ನು ಜನರು ಒಪ್ಪುವುದಿಲ್ಲ.
ನಿಷೇಧ ಪ್ರಸ್ತಾವ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ?
ಖಂಡಿತ ಇಲ್ಲ. ಬಿಜೆಪಿಯವರು ಇಂಥ ವಿಚಾರಗಳನ್ನು ಇಟ್ಟುಕೊಂಡು ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರು ಇಂತಹ ವಿಷಯಗಳಿಗೆ ಕಿಮ್ಮತ್ತು ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಜನಸಾಮಾನ್ಯರನ್ನು ಕಾಡುತ್ತಿರುವ ಬೆಲೆ ಏರಿಕೆ, ಶೇ. 40 ಕಮಿಷನ್ ಸರಕಾರ, ರೈತರ ಸಮಸ್ಯೆಗಳು, ನಿರುದ್ಯೋಗದ ಬಗ್ಗೆ ಚರ್ಚೆ ಬೇಕಿಲ್ಲ. ನಾವು ಈ ವಿಚಾರಗಳನ್ನು ಹೆಚ್ಚಾಗಿ ಪ್ರಸ್ತಾವಿಸುತ್ತಿದ್ದೇವೆ.
ಸಿಎಂ ಬಸವರಾಜ ಬೊಮ್ಮಾಯಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಹೇಳುತ್ತ ತಾವು ಆಡಿರುವ ಮಾತು, ಪ್ರಧಾನಿ ಮೋದಿ ಅವರನ್ನು ಮಲ್ಲಿಕಾರ್ಜುನ ಖರ್ಗೆಯವರು “ವಿಷಸರ್ಪ’ ಎಂದು ಕರೆದದ್ದು, ಬಜರಂಗದಳ ನಿಷೇಧದ ಪ್ರಸ್ತಾವಗಳು ರಾಜ್ಯ ಸರಕಾರದ ವಿರುದ್ಧ ಇರಬಹುದಾದ ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡಬಹುದೇ?
ಖಂಡಿತ ಇಲ್ಲ. ರಾಜ್ಯ ಸರಕಾರದ ಬಗ್ಗೆ ಜನರಲ್ಲಿ ವಿರೋಧ ಭಾವನೆ ಗಟ್ಟಿಯಾಗಿದೆ. ಅದು ಕಡಿಮೆಯಾಗಿಲ್ಲ. ಬಸವರಾಜ ಬೊಮ್ಮಾಯಿ ಅವರ ಬಗ್ಗೆ ನಾನು ಆಡಿರುವ ಮಾತನ್ನು ತಿರುಚಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಬಜರಂಗದಳ ನಿಷೇಧ ಪ್ರಸ್ತಾವದ ಬಗ್ಗೆ ಕಾಂಗ್ರೆಸ್ ನಿಲುವು ಬಹಳ ಸ್ಪಷ್ಟವಾಗಿದೆ.
ಬಿಜೆಪಿ ಹಿಂದುತ್ವ ಕಾರ್ಡ್ ದಾಳ ಉರುಳಿಸುತ್ತಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ?
ಬಿಜೆಪಿಯವರು ಹಿಂದುತ್ವ ಕಾರ್ಡ್ ಎಷ್ಟೇ ಉರುಳಿಸಿದರೂ ಅವರು ಯಶಸ್ವಿಯಾಗುವುದಿಲ್ಲ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿವೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಬಹುತೇಕ ಅಂಶಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಕರೆದರೂ ಬರುತ್ತಿಲ್ಲ. ಇನ್ನು ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಳಒಪ್ಪಂದವು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ವರುಣಾ ಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳು ಚಕ್ರವ್ಯೂಹ ರಚಿಸಿ ನಿಮ್ಮನ್ನು ಕಟ್ಟಿ ಹಾಕಿಲ್ಲವೇ?
ಹಿಂದೆಯೂ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೀಗೆಯೇ ಮಾಡಿದ್ದರು. ಅದರಲ್ಲಿ ಸ್ವಲ್ಪ ಯಶಸ್ವಿಯಾಗಿದ್ದರು. ವರುಣಾದಲ್ಲಿಯೂ ಹಾಗೆ ಮಾಡುವ ಪ್ರಯತ್ನ ಮಾಡಿದ್ದಾರೆ. ಜನರಿಗೆ ಇವರ ಹುನ್ನಾರ ಅರ್ಥವಾಗುತ್ತದೆ. ವರುಣಾ ನನ್ನ ತವರು ಕ್ಷೇತ್ರ. ಜನರ ಪ್ರೀತಿ, ವಿಶ್ವಾಸ ನನಗಿದೆ. ನಾನು ಈ ಕ್ಷೇತ್ರದ ಮನೆ ಮಗ. ವರುಣಾ ಕ್ಷೇತ್ರಕ್ಕೆ ಸೋಮಣ್ಣ ಕೊಡುಗೆ ಏನಿದೆ? ಜನರು ತಮ್ಮ ಮನಸ್ಸಿನಲ್ಲಿ ಯಾರು ಇರುತ್ತಾರೆಯೋ ಅವರನ್ನು ಬೆಂಬಲಿಸುತ್ತಾರೆ.
ಸೋಮಣ್ಣ ನಿಮ್ಮ ಎದುರಾಳಿ ಆಗುತ್ತಾರೆ ಅಂದುಕೊಂಡಿದ್ದರಾ?
ಇಲ್ಲ. ಆದರೆ ಸೋಮಣ್ಣ ಬಿಜೆಪಿ ಅಭ್ಯರ್ಥಿಯಾದ ಅನಂತರ ವರುಣಾ ಕ್ಷೇತ್ರದ ವೀರಶೈವ-ಲಿಂಗಾಯತರು ನನ್ನ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಬಿಜೆಪಿಯವರ ಹುನ್ನಾರ ಈ ಸಲ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ನನ್ನ ಪರವಾಗಿ ಕ್ಷೇತ್ರದ ಜನರ ಉತ್ಸಾಹವೂ ಹೆಚ್ಚಾಗಿದೆ.
ವರುಣಾ ಕ್ಷೇತ್ರವನ್ನು ಬಿಜೆಪಿ ವರಿಷ್ಠರು ಏಕೆ ಅಷ್ಟೊಂದು ಗಂಭೀರವಾಗಿ ಪರಿಗಣಿಸಿದ್ದಾರೆ?
ನಾನು ಸಂಘ ಪರಿವಾರದ ಕಟು ಟೀಕಾಕಾರ. ಇಲ್ಲಿ ನಾನು ಸ್ಪರ್ಧಿಸಿರುವುದರಿಂದ ನನ್ನನ್ನು ಗುರಿ ಮಾಡಿದ್ದಾರೆ. ಸೈದ್ಧಾಂತಿಕವಾಗಿ ನನ್ನನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ನನ್ನ ಪ್ರಶ್ನೆಗಳಿಗೆ ಅವರು ಯಾವತ್ತೂ ಉತ್ತರಿಸಿಲ್ಲ. ಗೌರಿ ಲಂಕೇಶ್, ಡಾ| ಎಂ.ಎಂ. ಕಲಬುರ್ಗಿ ಅವರಿಗೆ ಏನಾಯಿತು, ಗೊತ್ತಿದೆಯಲ್ಲ?
ಮಾಜಿ ಸಿಎಂ ಯಡಿಯೂರಪ್ಪ ವರುಣಾದಲ್ಲಿ ಈ ಬಾರಿ ಸಿದ್ದರಾಮಯ್ಯ ಸೋತರೂ ಆಶ್ಚರ್ಯವಿಲ್ಲ ಎಂದಿದ್ದಾರಲ್ಲ?
ಅವರು ಬಿಜೆಪಿಯವರಾಗಿ ಹೀಗೆ ಹೇಳಲೇಬೇಕು. ಅವರಿಂದ ಮತ್ತೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ ಅಂತ ಯಡಿಯೂರಪ್ಪ ಹೇಳಲು ಸಾಧ್ಯವೇ?
ವರುಣಾದಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಿದರೆ ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ ಎಂಬುದಾಗಿ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರಲ್ಲ?
ಇದು ಅಮಿತ್ ಶಾ ಅವರ ರಾಜಕೀಯ ಭಾಷಣ. ಏಕೆಂದರೆ ವರುಣ ಕ್ಷೇತ್ರದಲ್ಲಿ ಜನರು ನನ್ನನ್ನು ಮುಂದಿನ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮಿತ್ ಶಾ ಹಾಗೆ ಹೇಳಿದ್ದಾರೆ. ಅಮಿತ್ ಶಾ ಹೀಗೆ ಹೇಳುವ ಮೂಲಕ ಬಿಜೆಪಿಯಲ್ಲಿ ಬೇರೆ ಸಂದೇಶ ರವಾನೆಯಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ನೀವೇ ಮುಖ್ಯಮಂತ್ರಿ ಆಗುತ್ತೀರಾ?
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಾನು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಕಾಂಗ್ರೆಸ್ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ಅಂತಿಮವಾಗಿ ತೀರ್ಮಾನಿಸುತ್ತದೆ. ಶಾಸಕರ ಅಭಿಪ್ರಾಯ ಬಹಳ ಮುಖ್ಯ.
ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾದರೆ ಕಾಂಗ್ರೆಸ್ ನಿಲುವೇನು?
ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ರಚನೆಯಾಗುವುದಿಲ್ಲ. ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಅತಂತ್ರ ವಿಧಾನಸಭೆ ರಚನೆಯಾದರೆ ಸುಭದ್ರ ಸರಕಾರ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಮತದಾರರಿಗೆ ಗೊತ್ತಿದೆ.
ಚುನಾವಣ ಸಮೀಕ್ಷೆಗಳ ಬಗ್ಗೆ ಏನಂತೀರಿ?
ಸಮೀಕ್ಷೆಗಳನ್ನು ಪೂರ್ಣ ಸತ್ಯ ಅಥವಾ ಪೂರ್ಣ ಸುಳ್ಳು ಅಂತ ಹೇಳಲು ಸಾಧ್ಯವಿಲ್ಲ. ಇದನ್ನು ಒಂದು ದಿಕ್ಸೂಚಿಯಾಗಿ ಪರಿಗಣಿಸಬೇಕಷ್ಟೇ.
ಈ ಚುನಾವಣೆಯನ್ನು ರಾಷ್ಟ್ರ ರಾಜಕಾರಣದ ಹಿನ್ನೆಲೆಯಲ್ಲಿ ಹೇಗೆ ಅರ್ಥೈಸುತ್ತೀರಿ?
ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಚುನಾವಣೆ ಮಹತ್ವದ್ದಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಇಲ್ಲಿ ಕಾಂಗ್ರೆಸ್ ಗೆದ್ದು, ಬಿಜೆಪಿ ಸೋತ ಅನಂತರ ಇದರ ಪರಿಣಾಮವು ರಾಷ್ಟ್ರ ರಾಜಕಾರಣದ ಮೇಲೆ ಆಗುತ್ತದೆ. ದೇಶದಲ್ಲಿ ಬಿಜೆಪಿ ವಿರೋಧಿ ಸಮಾನಮನಸ್ಕ ಪಕ್ಷಗಳು ಒಗ್ಗೂಡುವಲ್ಲಿ, ರಾಷ್ಟ್ರ ರಾಜಕಾರಣವನ್ನು ಬದಲಿಸುವಲ್ಲಿ ರಾಜ್ಯದ ಅಸೆಂಬ್ಲಿ ಚುನಾವಣೆ ಫಲಿತಾಂಶ ಪ್ರಮುಖ ಪಾತ್ರ ವಹಿಸುತ್ತದೆ.
– ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.