ಕಾಲಮಿತಿಯಲ್ಲಿ ಜನರ ಸಮಸ್ಯೆ ಪರಿಹರಿಸಿ
Team Udayavani, Sep 12, 2019, 3:00 AM IST
ಹುಣಸೂರು: ರಸ್ತೆಯಲ್ಲೇ ಮನೆ ನಿರ್ಮಾಣ, ಅನಧಿಕೃತವಾಗಿ ಟವರ್ ಅಳವಡಿಕೆ, ಅಕ್ರಮ ಖಾತೆ, ದೊಂಬರ ಕಾಲೋನಿಯವರಿಗೆ ನಿವೇಶನ ವಿತರಣೆ ವಿಳಂಬ ಮತ್ತಿತರ ಅವ್ಯವಸ್ಥೆ ಕುರಿತು ಲೋಕಾಯುಕ್ತ ಎಸ್ಪಿ ಕೆ.ಎನ್.ಮಾದಯ್ಯ ಅವರಿಗೆ ಸಾರ್ವಜನಿಕರು ದೂರು ನೀಡಿದರು.
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಬುಧವಾರ ನಡೆದ ದೂರು ಸ್ವೀಕಾರ ಮತ್ತು ವಿಚಾರಣೆ ವೇಳೆ ಸಾರ್ವಜನಿಕರು ಇಲ್ಲಿನ ನಗರಸಭೆ ವಿರುದ್ಧ ದೂರುಗಳ ಸುರಿಮಳೆಗೈದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮಾದಯ್ಯ, ಆಯಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದು ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಆಯುಕ್ತರಿಗೆ ತಾಕೀತು ಮಾಡಿದರು.
ರಸ್ತೆಯಲ್ಲೇ ಮನೆ: ಮಾರುತಿ ಬಡಾವಣೆಯ ರಸ್ತೆಯಲ್ಲೇ ವ್ಯಕ್ತಿಯೊಬ್ಬರು ಮನೆ ನಿರ್ಮಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ತೆರವಿಗೆ ಆದೇಶಿಸಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರು ನೀಡಿದರು.
ಟವರ್ ತೆರವುಗೊಳಿಸಿ: ಕರವೇ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಸಂತೆ ಮಾಳವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಯೊಬ್ಬರು ಮನೆ ಮೇಲೆ ಅಕ್ರಮವಾಗಿ ಮೊಬೈಲ್ ಟವರ್ ಅಳವಡಿಸಿಕೊಂಡಿದ್ದಾರೆ. ಈ ಕುರಿತು ನಗರಸಭೆಗೆ ಹಲವಾರು ಬಾರಿ ದೂರು ನೀಡಿ ಪ್ರತಿಭಟಿಸಿದ್ದರೂ ನಗರಸಭಾ ಆಯುಕ್ತರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗಿರುವ ಟವರ್ ಅನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಖಾತೆ ರದ್ದಾಗಲಿ: ಮಾರುತಿ ಬಡಾವಣೆಯ ಪ್ಯಾಟ್ರಿಕ್‌ರವರು ನಮಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸಿದ್ದು, ತೆರವುಗೊಳಿಸಿರೆಂದರೂ ಸ್ಪಂದಿಸುತ್ತಿಲ್ಲ. ಚಿಕ್ಕ ಹುಣಸೂರಿನ ಶಿವರಾಂ ತಮಗೆ ಸೇರಿದ ಒಂಟಿಬೋರೆಪಾಳ್ಯ ನಿವೇಶನವನ್ನು ನಗರಸಭೆ ಅಧಿಕಾರಿಗಳು ಮತ್ತೂಬ್ಬರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸೂಕ್ತ ದಾಖಲಾತಿ ನೀಡಿದರೂ ಲೋಕಾಯುಕ್ತ ಪೊಲೀಸರೇ ಕ್ರಮವಹಿಸುತ್ತಿಲ್ಲ ಎಂದು ಅವಲತ್ತುಕೊಂಡರು.
ಉದಯ ನಗರದ ವೆರೋನಿಕಾ ನಿರ್ಮಲಾ, ನಿವೇಶನಕ್ಕಾಗಿ ನಗರಸಭೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಈವರೆವಿಗೂ ಮಂಜೂರಾಗಿಲ್ಲ ಎಂದು ಅಳಲು ತೋಡಿಕೊಂಡರು. ನಗರದ ರಾಜಲಕ್ಷ್ಮೀ ವುಡ್ ಇಂಡಸ್ಟ್ರೀಸ್ ಸ್ಥಳಾಂತರಕ್ಕೆ ಅರಣ್ಯಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ ಎಂದು ಧನರಾಜ್ ದೂರಿದರೆ, ಹೈರಿಗೆಯ ಮಹೇಶ್, ಮೀನುಗಾರಿಕೆ ಸಹಕಾರ ಸಂಘದಲ್ಲಿ ಸದಸ್ಯತ್ವ ನೀಡುತ್ತಿಲ್ಲ ಎಂದರು.
ತಾಲೂಕು ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ರಜಾ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ಬಸ್ ಮಾರ್ಗಗಳನ್ನು ದಿಢೀರ್ ರದ್ದುಗೊಳಿಸುತ್ತಾರೆ. ಮುಂಜಾನೆ ಮತ್ತು ಸಂಜೆ ಮೈಸೂರಿಗೆ ಬಸ್‌ಇಲ್ಲದೇ ಪರದಾಡುತ್ತಿದ್ದರೂ ಡಿಪೋ ಮ್ಯಾನೇಜರ್ ಕ್ರಮವಹಿಸುತ್ತಿಲ್ಲ ಎಂದು ದೂರು ನೀಡಿದರು.
ತಡೆಗೋಡೆ ನಿರ್ಮಿಸಿ: ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ದೊಂಬರ ಕಾಲೋನಿಯ ಬಡ ಕುಟುಂಬಗಳಿಗೆ ಮನೆ ವಿತರಿಸುತ್ತಿಲ್ಲ. ಮೋದೂರು ಕೆರೆ ಏರಿಯ ಎರಡು ಬದಿತಡೆಗೋಡೆ ನಿರ್ಮಿಸುತ್ತಿಲ್ಲ. ಚಿಲ್ಕುಂದ ಏತ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ರಾಚಯ್ಯ ತಮ್ಮ ಜಮೀನಿನ ದುರಸ್ತು ಕಾರ್ಯ 2016ರಿಂದಲೂ ಆಗಿಲ್ಲ ಎಂದು ದೂರು ಸಲ್ಲಿಸಿದರು.
ಪೊಲೀಸರೇ ಬೈಕ್ ದಾಖಲೆ ನೀಡುತ್ತಿಲ್ಲ: ಐದು ವರ್ಷಗಳ ಹಿಂದೆ ಪೊಲೀಸರು ನಡೆಸಿದ ಹರಾಜಿನಲ್ಲಿ ಬೈಕ್ ಖರೀದಿಸಿದ್ದೆ. ಆದರೆ ರಿ.ನಂ. ಅವಾಂತರದಿಂದ ತಮ್ಮ ಹೆಸರಿಗಿನ್ನು ವರ್ಗಾಯಿಸಿಕೊಳ್ಳಲು ಸತಾಯಿಸುತ್ತಿದ್ದಾರೆಂದು ನಗರದ ಸ್ಟುಡಿಯೋ ಮಾಲೀಕ ರಾಮಸ್ವಾಮಿ ದೂರಿದರು. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಆರ್‌ಟಿಒ ಅನ್ನದಾನಯ್ಯರಿಗೆ ಎಸ್‌ಪಿ. ಆದೇಶಿಸಿದರು. ತಹಸೀಲ್ದಾರ್ ಬಸವರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪೌರಾಯುಕ್ತರಿಗೆ ಎಸ್ಪಿ ತರಾಟೆ: ನಗರಸಭೆ ವಿರುದ್ಧವೇ ಹೆಚ್ಚು ದೂರುಗಳು ಬಂದಿವೆ. ಹಲವಾರು ಬಾರಿ ಸೂಚನೆ ನೀಡಿದ್ದರೂ ಅಕ್ರಮವಾಗಿ ನಿರ್ಮಿಸಿರುವ ಮನೆ, ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ. ಅಕ್ರಮ ಖಾತೆಗಳನ್ನು ಏಕೆ ರದ್ದುಗೊಳಿಸಿಲ್ಲಂ?, ಯಾವ ಕಾರಣಕ್ಕಾಗಿ ಕ್ರಮವಹಿಸುತ್ತಿಲ್ಲ?, ನಿಮ್ಮನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಕಳುಹಿಸುವುದೇ ಸರಿಯಾದ ಕ್ರಮವೆಂದು ನಗರಸಭೆ ಆಯುಕ್ತ ಶಿವಪ್ಪನಾಯ್ಕ ಅವರನ್ನು ಎಸ್ಪಿ ಮಾದಯ್ಯ ಹಾಗೂ ವೃತ್ತ ನಿರೀಕ್ಷಕಿ ರೂಪಶ್ರೀ ತರಾಟೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇನ್ನು ಮೂರು ದಿನದೊಳಗೆ ಅನಧಿಕೃತ ಮೊಬೈಲ್ ಟವರ್ ತೆರವುಗೊಳಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.