ಪಾಲಿಕೆ 33 ಸ್ಥಾನಕ್ಕಾಗಿ ಎಲ್ಲರೂ ಶ್ರಮಿಸಿ
Team Udayavani, Aug 25, 2018, 11:33 AM IST
ಮೈಸೂರು: ಪಾಲಿಕೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಕನಿಷ್ಠ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯ ತಿಳಿಯಲು ಚುನಾವಣೆಯೊಂದೇ ಮಾರ್ಗವಾದ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆಯೂ ಪ್ರತಿಷ್ಠೆಯ ಚುನಾವಣೆಯಾಗಲಿದೆ.
ಅಲ್ಲದೆ ಬೆಂಗಳೂರು ಹೊರತುಪಡಿಸಿ ಮೈಸೂರು, ಹುಬ್ಬಳ್ಳಿ ಪ್ರಮುಖ ನಗರಗಳಾಗಿದ್ದು, ಹೀಗಾಗಿ ಈ ಬಾರಿ ಪಾಲಿಕೆ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ಗಳಲ್ಲಿ ಕನಿಷ್ಠ 33 ಸ್ಥಾನ ಗೆಲ್ಲುವ ಗುರಿಯೊಂದಿಗೆ ಎಲ್ಲಾ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಜೆಡಿಎಸ್, ಬಿಜೆಪಿ ಸ್ಪರ್ಧೆ ನಡುವೆ ನಾವು ಸ್ವತಂತ್ರ್ಯವಾಗಿ ಅಧಿಕಾರ ಹಿಡಿಯಬೇಕಿದೆ. ಆದ್ದರಿಂದ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಎಲ್ಲರೂ ಸಂಘಟಿತರಾಗಿ ಕೆಲಸ ಮಾಡುವ ಮೂಲಕ, ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅಲ್ಲದೆ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಸಹಜವಾಗಿ ಟಿಕೆಟ್ ಪಡೆಯಲು ಪೈಪೋಟಿ ನಡೆಯಲಿದೆ.
ಆದರೆ ಟಿಕೆಟ್ ದೊರೆಯದ ಮಾತ್ರಕ್ಕೆ ನಿರಾಸೆಗೊಳ್ಳುವ ಅಗತ್ಯವಿಲ್ಲ, ಕಾಂಗ್ರೆಸ್ನಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯಲ್ಲಿ ಕೆಲಸ ಮಾಡಿದವರಿಗೆ ನ್ಯಾಯಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸ್ಥಳೀಯ ಜನಪ್ರತಿನಿಧಿಗಳು ಸವಾಲಾಗಿ ಸ್ವೀಕರಿಸಿ, ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕಿದೆ ಎಂದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಡಿಮೆ ಅವಧಿ ಇದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಬಾರಿ ಸ್ಪಷ್ಟ ಬಹುಮತ ನಮಗೆ ಸಿಗಲಿಲ್ಲ. ಈ ಬಾರಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಜತೆಗೆ ವ್ಯಕ್ತಿಯೂ ಮುಖ್ಯವಾಗಲಿದ್ದು, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಅವಕಾಶ ಸಿಗದ ಸಮಾಜದವರಿಗೆ ಬೇರೆ ಸ್ಥಾನಮಾನ ನೀಡುವ ಅವಕಾಶ ನೀಡಬೇಕು. ಇದರಿಂದ ಪಕ್ಷದ ಏಳಿಗೆಗೆ ಸಹಕಾರಿಯಾಗಲಿದೆ. ಎಲ್ಲರೂ ಸಂಘಟಿತರಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಸ್ಪಷ್ಟ ಬಹುಮತ ಪಡೆಯಲು ಶ್ರಮಿಸೋಣ ಎಂದರು.
ಶಾಕಸರಾದ ತನ್ವೀರ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಆರ್.ಧರ್ಮಸೇನಾ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಎಂ.ಸತ್ಯನಾರಾಯಣ, ಮುಖಂಡರಾದ ಸಿ.ಎಚ್.ವಿಜಯಶಂಕರ್, ಆತ್ಮಾನಂದ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳು ಹಾಜರಿದ್ದರು.
ಭುಗಿಲೆದ್ದ ಅಸಮಾಧಾನ: ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದ ಕೆಲವು ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷರ ಎದುರಲ್ಲೇ ಅಸಮಾಧಾನ ಹೊರಹಾಕಿದರು. ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ, ಪಾಲಿಕೆ 22ನೇ ವಾರ್ಡಿನಿಂದ ತಮ್ಮ ಮಗಳಿಗೆ ಟಿಕೆಟ್ ಕೊಡಿಸುವ ನಿರೀಕ್ಷೆ ಹೊಂದಿದ್ದ ಚೌಹಳ್ಳಿ ಪುಟ್ಟಸ್ವಾಮಿ, ಈಶ್ಚರ್ ಚಕ್ಕಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳಾ ಟಿಕೆಟ್ ಆಕಾಂಕ್ಷಿಯೊಬ್ಬರು ದಿನೇಶ್ ಗುಂಡೂರಾವ್ ಅವರ ಎದುರು ಕಣ್ಣೀರಿಟ್ಟು ತಮ್ಮ ಅಸಮಾಧಾನ ಹೊರ ಹಾಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.