ಮುಷ್ಕರ ಸ್ಥಗಿತ: ಚಾಮುಂಡಿ ಪೂಜೆ ಪುನಾರಂಭ
Team Udayavani, Dec 16, 2018, 11:21 AM IST
ಮೈಸೂರು: ಮುಜರಾಯಿ ಸಚಿವರು ಹಾಗೂ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆ ಸಮೂಹದ 22 ದೇವಾಲಯಗಳ ಅರ್ಚಕರು, ನೌಕರರು ಕೈಗೊಂಡಿದ್ದ ಮುಷ್ಕರ ಶನಿವಾರ ಸಂಜೆ ವೇಳೆಗೆ ಸ್ಥಗಿತಗೊಂಡಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆ ಸಮೂಹದ 22 ದೇವಾಲಯಗಳ ನೌಕರರು ಮುಷ್ಕರ ಆರಂಭಿಸಿದ್ದರು.
ಚಾಮುಂಡೇಶ್ವರಿ ದೇವಾಸ್ಥಾನ ಹಾಗೂ ಸಮೂಹ ದೇವಾಸ್ಥಾನಗಳ ನೌಕರರ ಸಂಘದ ನೇತೃತ್ವದಲ್ಲಿ ಚಾಮುಂಡಿಬೆಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟಕಾರರು, ಶೇ.30 ವೇತನ ವೃದ್ಧಿ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಮಂಜೂರು ಮಾಡಲು ಕಾಯಂದ ಆದೇಶ ನೀಡುವುದು, ವಾರ್ಷಿಕ ಬೋನಸ್ ಪಾವತಿಸುವುದು, 75 ಮಂದಿ ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ಏಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು.
ಮುಷ್ಕರ 2ನೇ ದಿನಕ್ಕೆ: ಮುಜರಾಯಿ ದೇವಾಲಯಗಳ ಅರ್ಚಕರು, ನೌಕರರು ಕೈಗೊಂಡಿರುವ ಮುಷ್ಕರದ ಕುರಿತು ಶಾಸಕ ಎಸ್.ಎ. ರಾಮದಾಸ್ ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವ ಕುರಿತು ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡದ ಕಾರಣಕ್ಕೆ ಶನಿವಾರವೂ ಮುಷ್ಕರ ಮುಂದುವರಿದಿತ್ತು.
ಎಂದಿನಂತೆ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜಾ ಕೈಂಕರ್ಯಗಳನ್ನು ನಡೆಸಿದ ಅರ್ಚಕರು ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಮೊದಲ ದಿನದಂತೆ ಶನಿವಾರವೂ ಸಹ ಚಾಮುಂಡಿಬೆಟ್ಟ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಯಾವುದೇ ಪೂಜಾ ಕೈಂಕರ್ಯಗಳು ನಡೆಯಲಿಲ್ಲ.
ಸಚಿವರ ಭರವಸೆ: ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಅರ್ಚಕರು ಹಾಗೂ ಸಿಬ್ಬಂದಿ ಸಮಸ್ಯೆ ಆಲಿಸಿದರು. ಈ ವೇಳೆ ದೂರವಾಣಿ ಮೂಲಕ ಮುಜರಾಯಿ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ಅವರನ್ನು ಸಂಪರ್ಕಿಸಿದ ಶಾಸಕ ರಾಮದಾಸ್, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಕುರಿತು ನೇರವಾಗಿ ಸಚಿವರಿಂದಲೇ ಭರವಸೆ ಕೊಡಿಸಿದರು.
ಡಿ.24ರಂದು ಸಭೆ: ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವ ರಾಜಶೇಖರ್ ಪಾಟೀಲ್, ತಾತ್ಕಾಲಿಕ ನೌಕರರನ್ನು ಕಾಯಂ ಮಾಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಡಿ.24ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು. ಹೀಗಾಗಿ ಮುಷ್ಕರವನ್ನು ಕೈಬಿಡುವಂತೆ ಸಚಿವರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಚಿವರ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು, ಸಂಜೆ 4 ಗಂಟೆ ವೇಳೆಗೆ ಪ್ರತಿಭಟನೆಯನ್ನು ಹಿಂಪಡೆದರು.
17ಕ್ಕೆ ಅಧಿಕಾರಿಗಳ ಸಭೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್.ಎ.ರಾಮದಾಸ್ ಅವರು ಮುಜರಾಯಿ ಸಚಿವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಡಿ.24ರಂದು ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ. ಜತೆಗೆ ಅಧಿಕಾರಿಗಳು ಡಿ.17ರಂದು ಬೋನಸ್ ಸಹ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಸಂಘದ ಕಾರ್ಯದರ್ಶಿ ವಿಶ್ವನಾಥ್ ತಿಳಿಸಿದ್ದಾರೆ.
ಸಂಜೆ ಬಳಿಕ ಪೂಜೆ: ಅರ್ಚಕರು ಹಾಗೂ ಸಿಬ್ಬಂದಿ ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಂಜೆ 4 ಗಂಟೆ ನಂತರ ಚಾಮುಂಡಿಬೆಟ್ಟ ಸೇರಿದಂತೆ ಇತರೆ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಎಂದಿನಂತೆ ದೈನಂದಿನ ಪೂಜಾ ಕೈಂಕರ್ಯಗಳು ನಡೆಯಿತು. ಸಂಜೆ ನಂತರ ದೇವಸ್ಥಾನಗಳಿಗೆ ತೆರಳಿದ ಭಕ್ತಾಧಿಗಳು ದೇವರ ದರ್ಶನ ಪಡೆಯುವ ಜತೆಗೆ ಇನ್ನಿತರ ಸೇವೆಗಳನ್ನು ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.