ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ
Team Udayavani, Nov 3, 2018, 12:33 PM IST
ಮೈಸೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕೆಎಸ್‌ಸಿಎ ಮೈಸೂರು ವಲಯದ ಸಂಚಾಲಕ ಬಾಲಚಂದರ್ ಕಿವಿಮಾತು ಹೇಳಿದರು.
ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಎಸ್‌ಜೆಸಿಇ ಕಾಲೇಜು ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಅಂತರ್ ಎಂಜಿನಿಯರಿಂಗ್ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆ ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ಯುವ ಹಾಗೂ ಉತ್ಸಾಹಿ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಕ್ರೀಡೆಗಿಂತ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸುತ್ತಾರೆ. ಆದರೆ ವಿದ್ಯಾಭ್ಯಾಸದಷ್ಟೇ ಕ್ರೀಡೆಯೂ ಮುಖ್ಯವಾಗಿದೆ. ಹೀಗಾಗಿ ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ವಾತಾವರಣ ನಿರ್ಮಿಸಬೇಕಿದೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಕ್ರಿಕೆಟ್, ಫುಟ್ಬಾಲ್, ಟೇಬಲ್ ಟೆನ್ನಿಸ್, ಚೆಸ್ ಹಾಗೂ ವಿದ್ಯಾರ್ಥಿನಿಯರಿಗೆ ಟೇಬಲ್ ಟೆನ್ನಿಸ್ ಹಾಗೂ ಚೆಸ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವದ್ಯಾಲಯದ ಕುಲಪತಿ ಪ್ರೊ.ಬಿ.ಜಿ.ಸಂಗಮೇಶ್ವರ, ಕಾಲೇಜು ಪ್ರಾಂಶುಪಾಲ ನಾಗಭೂಷಣ್, ರೇವಣ್ಣ ಇನ್ನಿತರರು ಹಾಜರಿದ್ದರು.