ಜೆಡಿಎಸ್ ಬೆಂಬಲಿಸಿ, ಮೈತ್ರಿ ಧರ್ಮ ಪಾಲಿಸಿ
Team Udayavani, Apr 9, 2018, 12:38 PM IST
ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಸರ್ಕಾರ ರಚಿಸಲು ದಲಿತರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮೈತ್ರಿ ಧರ್ಮವನ್ನು ಪಾಲಿಸುವಂತೆ ಬಹುಜನ ಸಮಾಜ ಪಾರ್ಟಿ ರಾಜಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಮೈಸೂರಿನ ರಿಂಗ್ ರಸ್ತೆಯ ಶುಭೋದಿನಿ ಕಲ್ಯಾಣಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಪರಿಚಯ ಕಾರ್ಯಕ್ರಮ ಹಾಗೂ ಬಿಎಸ್‌ಸಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ವಿಶ್ರಾಂತಿ ಕೊಟ್ಟರೆ, ರಾಜ್ಯದಲ್ಲಿ ಕಾಂಗ್ರೆಸ್ ಇನ್ನೆಂದೂ ತಲೆಎತ್ತಲಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೋಲಿಸುವ ಪ್ರಕ್ರಿಯೆ ಸಿದ್ದರಾಮಯ್ಯ ಅವರ ಸೋಲಿನ ಮೂಲಕ ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭವಾಗಬೇಕು. ಆ ಮೂಲಕ ತಮ್ಮ ಶಕ್ತಿ ಸಾಬೀತುಪಡಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಜತೆಗೆ ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಂಡಿದ್ದು, ಜೆಡಿಎಸ್ 204 ಕ್ಷೇತ್ರಗಳಲ್ಲಿ, ಬಿಎಸ್‌ಪಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನಂತೆ ಬಿಎಸ್‌ಪಿ ಕೂಡ ಪ್ರಬಲವಾಗಿದೆ. ಎರಡೂ ಪ್ರಬಲ ಶಕ್ತಿಗಳು ಜೊತೆಗೂಡಿರುವುದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೋಲಿಸುವುದು ಕಷ್ಟವೇನಲ್ಲ.
ಹಾಗೆಂದು ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳದೆ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿ. ಈ ಎರಡು ಕ್ಷೇತ್ರಗಳ ಫಲಿತಾಂಶ, ಇಡೀ ರಾಜ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದಲ್ಲದೆ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ರಚನೆಗೆ ಸಹಕಾರಿಯಾಗಲಿದೆ ಎಂದರು.
45 ದಲಿತ ಮತ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ 45 ಸಾವಿರ ದಲಿತರ ಮತಗಳಿವೆ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡಬಾರದು. ದಲಿತರು ಯಾವುದೇ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದಾಗ ಜೈಭೀಮ್ ಘೋಷಣೆ ಕೂಗಲು ನೈತಿಕತೆ ಬರುತ್ತದೆ ಎಂದು ಹೇಳಿದರು.
ಸಿದ್ದು ಮೈಯಲ್ಲಿ ಕಾಂಗ್ರೆಸ್‌ನ ಡಿಎನ್‌ಎ: 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಮರು ಜನ್ಮ ನೀಡಿದ್ದು ಬಹುಜನ ಸಮಾಜ ಪಾರ್ಟಿ. ಅದನ್ನವರು ಮರೆತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಭಾಗ್ಯಗಳು ದತ್ತಿ ಕಾರ್ಯ ಕ್ರಮಗಳಿದ್ದಂತೆ, ಕಾಂಗ್ರೆಸ್‌ನ ವಂಶವಾಹಿನಿ ಒಳಗೆ ಇಂತಹ ದತ್ತಿ ಕಾರ್ಯಕ್ರಮಗಳಿರುತ್ತವೆ. ಸಮಾಜ ವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ರಕ್ತದಲ್ಲಿ ಕೂಡ ಕಾಂಗ್ರೆಸ್‌ನ ಡಿಎನ್‌ಎ ಸೇರಿರುವುದು ದುರಂತ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲೇ ಕಳೆದ ಐದು ವರ್ಷಗಳಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ ಇಲ್ಲದೆ ಮೂರು ವರ್ಷ ಸತತ ಬರಗಾಲ ಇದ್ದರೆ, ಕಳೆದ ಹೆಚ್ಚು ಮಳೆ ಬಿದ್ದರೂ ಸರ್ಕಾರದ ತಪ್ಪು$ ತೀರ್ಮಾನದಿಂದಾಗಿ ಬರಗಾಲ ಸೃಷ್ಟಿಯಾಯಿತು. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಶಾಪ ಅನಿಸಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಸಹಕಾರಿ ಬ್ಯಾಂಕುಗಳಲ್ಲಿನ ರೈತರ 50 ಸಾವಿರ ರೂ. ಸಾಲಮನ್ನಾ ಘೋಷಣೆ ಮಾಡಿದರೂ ರೈತರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ದೇಶದ ರೈತರ 3 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದರೆ ಖಜಾನೆ ಖಾಲಿಯಾಗುತ್ತೆ ಎಂದು ಹೇಳುವ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿ, ಉದ್ಯಮಿಗಳ 4.60 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುತ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಜೆಡಿಎಸ್-ಬಿಎಸ್‌ಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ 24ಗಂಟೆಯೊಳಗೆ ರೈತರನ್ನು ಋಣಮುಕ್ತರನ್ನಾಗಿ ಸುತ್ತೇವೆ ಎಂದು ಭರವಸೆ ನೀಡಿದರು. ಇತಿಹಾಸ ತಜ್ಞ ಪೊ›.ಪಿ.ವಿ.ನಂಜರಾಜೇ ಅರಸು, ಕ್ಷೇತ್ರದ ಬಿಎಸ್ಪಿ ಅಧ್ಯಕ್ಷ ಎಂ.ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.