ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು
Team Udayavani, Dec 4, 2019, 3:53 PM IST
ಭೇರ್ಯ: ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಮೀಪದ ಕುಪ್ಪಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಸಂಭವಿಸಿದೆ. 8ನೇ ತರಗತಿ ಓದುತ್ತಿದ್ದ ಗೌತಮ್ (14) ಮೃತ ದುರ್ದೈವಿ.
ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಸಾಲೆಕೊಪ್ಪಲು ಗ್ರಾಮದ ಶಿವಣ್ಣ ಮತ್ತು ರೇಖಾ ದಂಪತಿ ಪುತ್ರ ಗೌತಮ್, 2019-20ನೇ ಸಾಲಿನಿಂದ 8ನೇ ತರಗತಿಗೆ ಕುಪ್ಪಳ್ಳಿ ವಸತಿ ಶಾಲೆಗೆ ದಾಖಲಾಗಿದ್ದನು. ರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆಯಲ್ಲಿ ಊಟ ಮಾಡಿ, ಶಾಲಾ ಕೊಠಡಿಯೊಳಗೆ 30 ವಿದ್ಯಾರ್ಥಿಗಳ ಜತೆಯಲ್ಲಿ ಮಲಗಿದ್ದನು. ಬೆಳಗ್ಗೆ ಈತನ ಸ್ನೇಹಿತರು ಎಂದಿನಂತೆ ಎಬ್ಬಿಸಲು ಹೋದಾಗ ಎಚ್ಚರಗೊಳ್ಳದಿದ್ದರಿಂದ ಪಕ್ಕದ ಕೊಠಡಿಯಲ್ಲಿದ್ದ ಶಿಕ್ಷಕಿ ಹಾಗೂ ನರ್ಸ್‌ಗೆ ತಿಳಿಸಿದ್ದಾರೆ.
ಅವರು ಆಗಮಿಸಿ ನೋಡಿದಾಗ ಗೌತಮ್ ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೇ ಗೌತಮ್ ಪೋಷಕರಿಗೆ ಹಾಗೂ ಸಾಲಿಗ್ರಾಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ತಮ್ಮ ಪುತ್ರ ಅನುಮಾನಸ್ಪಾದವಾಗಿ ಮೃತಪಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿ ಎಂದು ಪೋಷಕರು ಸಾಲಿಗ್ರಾಮ ಪೊಲೀಸರಿಗೆ ದೂರು ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಶಾಲೆಗೆ ಭೇಟಿ ನೀಡಿ, ಗೌತಮ್ ಅನುಮಾನಾಸ್ಪದ ಸವಿನ ಬಗ್ಗೆ ಆತನ ಸ್ನೇಹಿತರ ಜತೆ ಮಾತುಕತೆ ನಡೆಸಿದರು. ಈ
ಸಂದರ್ಭದಲ್ಲಿ ವೃತ್ತನಿರೀಕ್ಷಕ ಪಿ.ಕೆ. ರಾಜು, ತಹಶೀಲ್ದಾರ್ ಮಂಜುಳಾ, ಜಿಲ್ಲಾ ಹಿಂದುಳಿದ ವರ್ಗದ ಜಿಲಾಧಿಕಾರಿ ಬಿಂದ್ಯಾ, ಸಬ್‌ಇನ್ಸ್‌ಪೆಕ್ಟರ್ ಚೇತನ್, ಮಾದಪ್ಪ, ಬಿಸಿಎಂ ಅಧಿಕಾರಿ ಮಹೇಶ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ವಸತಿ ಶಾಲೆಯ ಪ್ರಾಂಶುಪಾಲ ಹೇಮಂತ್ ಇತರರಿದ್ದರು.
ಶಾಲೆ ಸ್ಥಳಾಂತರಿಸಿ: ಕುಪ್ಪಳ್ಳಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಗೆ 10 ಎಕರೆ ಜಮೀನು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 10 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ. ಅಲ್ಲಿಯವರೆಗೆ ಈ ವಸತಿ ಶಾಲೆಯನ್ನು ಮೇಲೂರು ಅಥವಾ ಸೌಲಭ್ಯವಿರುವ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗೆ ಶಾಸಕ ಸಾ.ರಾ. ಮಹೇಶ್ ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.