ಧರ್ಮ ಒಡೆಯುವ ಕೆಲಸ ಬಿಡಿ: ರಂಭಾಪುರಿ ಶ್ರೀ
Team Udayavani, Jan 16, 2018, 6:20 AM IST
ಮೈಸೂರು: ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸಕ್ಕೆ ರಾಜಕೀಯ ಧುರೀಣರು ಮುಂದಾಗಿರುವುದು ಒಳ್ಳೆಯದಲ್ಲ, ಧರ್ಮದೊಳಗೆ ಕೈಹಾಕಿ ಕಲುಷಿತ ಮಾಡಬೇಡಿ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಎಚ್ಚರಿಕೆ ನೀಡಿದರು.
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಕ್ಷೇತ್ರದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ವೀರಶೈವ ಧರ್ಮ ಸಿದ್ಧಾಂತ ಶಿಖಾಮಣಿಯ ವಚನದಂತೆ ಮುನ್ನಡೆದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಮಾಜವನ್ನು ಒಂದುಗೂಡಿಸುವುದೇ ವೀರಶೈವ ಧರ್ಮದ ಕೆಲಸ, ಛಿದ್ರಗೊಳಿಸುವುದು ವೀರಶೈವರ ಕೆಲಸವಲ್ಲ ಎಂದರು.
ವೀರಶೈವ ಧರ್ಮದಲ್ಲಿ ಹೊರಗಿನ ಶತ್ರುಗಳಿಗಿಂತ, ಒಳಗಿನ ವೈರಿಗಳಿಂದಾಗಿಯೇ ಆಗಾಗ ಸಂಕಷ್ಟಕ್ಕೆ ಗುರಿ ಆಗಬೇಕಾಗುತ್ತಿದೆ. ಶರಣರ ವಚನಗಳನ್ನು ಆಚರಣೆಗೆ ತರಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆಲ್ಲ ಕಾರಣ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಪರಸ್ಪರ ಸಂಘರ್ಷ,ತುಮುಲಗಳು ನಡೆದಿವೆ. ರಾಜಕೀಯ ನುಸುಳಿ ಧರ್ಮದ ಪಾವಿತ್ರÂತೆ, ಗೌರವ ಕುಂದಿಸುವ ಕೆಲಸ ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಕಾವಿ, ಖಾದಿ, ಖಾಕಿ ಮನಸ್ಸು ಮಾಡಿದರೆ ಈ ಸಂಘರ್ಷವನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಕೆಲವರು ಪ್ರಾಮಾಣಿ ಕವಾಗಿ ತಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ಆದರೆ, ಬಹಳಷ್ಟು ಮಂದಿ ಇದಕ್ಕೆ ವ್ಯತಿರಿಕ್ತವಾಗಿ ನಡೆಯುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ ಎಂದರು.
ಅಖೀಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದಾಗ ಹಾನಗಲ್ ಕುಮಾರಸ್ವಾಮಿಗಳು ಹತ್ತು ನಿಬಂಧನೆಗಳನ್ನು ಹಾಕಿದ್ದರು. ಆ ನಿಬಂಧನೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.
ಬಸವಣ್ಣನ ಹೆಸರಲ್ಲಿ, ಗುತ್ತಿಗೆ ಹಿಡಿದವರಂತೆ ಬೆರಳೆಣಿಕೆಯ, ಧರ್ಮದಲ್ಲಿ ಶ್ರದೆಟಛಿ ಇಲ್ಲದ ಮಠಾಧೀಶರು ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಇದಕ್ಕೆ ಯಾವತ್ತೂ ಅವಕಾಶ ಕೊಡಬಾರದು ಎಂದ ಅವರು, ಮೈಸೂರು ಭಾಗದಲ್ಲಿ ವೀರಶೈವ- ಲಿಂಗಾಯತ ಎರಡೂ ಒಂದೇ, ಇಲ್ಲಿ ಬೇರೆ ಬೇರೆ ಎಂಬ ಭಾವನೆ ಇಲ್ಲ. ಸತ್ಯಕ್ಕೆ ಯಾವತ್ತಿದ್ದರೂ ಜಯ ಸಿಕ್ಕೇ ಸಿಗುತ್ತೆ. ಈ ನಿಟ್ಟಿನಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಇನ್ನಷ್ಟು ಕ್ರಿಯಾತ್ಮಕವಾಗಿ ಘಟಕಗಳನ್ನು ಹುಟ್ಟುಹಾಕಿ ಸಮಾಜಕ್ಕೆ ತಿಳಿವಳಿಕೆ ಕೊಡುವ ಕೆಲಸ ಮಾಡಬೇಕಿದೆ ಎಂದರು.
ವೀರಶೈವ ಧರ್ಮ ಬಾಂಧವರಲ್ಲಿ ಲಿಂಗಾಯತ ಬೇರೆ ಎಂಬ ತಪ್ಪು$ಕಲ್ಪನೆ ಬೇಡ, ಸಮಾಜ-ಧರ್ಮವನ್ನು ಕಟ್ಟಿ ಬೆಳೆಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡೋಣ ಎಂದು ಹೇಳಿದರು.
ಸುತ್ತೂರು ಮಠಾಧೀಶರಾದ ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ, ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಇತರರಿದ್ದರು.
ಭಾರತ್ ಮಾತಾಕೀ ಜೈ ಎನ್ನಿ
ಧಾರ್ಮಿಕ ಸಭೆ ಉದ್ಘಾಟಿಸಿ ಭಾಷಣ ಮಾಡಿದ ರಾಜ್ಯಪಾಲ ವಿ.ಆರ್.ವಾಲಾ ಅವರು ತಮ್ಮ ಭಾಷಣದ ಕೊನೆಯಲ್ಲಿ ಸಭಿಕರಿಗೆ ನೀವೆಲ್ಲ ಧಾರ್ಮಿಕ ಸಭೆಯಲ್ಲಿದ್ದೀರಿ. ಭಾರತ ಮಾತೆಗೆ ಜೈಕಾರ ಕೂಗುವ ಮೂಲಕ ನಿಮ್ಮ ತಾಕತ್ತು ತೋರಿಸಿ, ಮಾತೃಭೂಮಿಗೆ ನಾವು ಕೂಗುವ ಜೈಕಾರದ ಶಬ್ದ ಶತ್ರುಗಳಲ್ಲಿ ಕಂಪನ ಉಂಟು ಮಾಡಬೇಕು ಎಂದು ಹೇಳಿ, ಮೂರು ಬಾರಿ ಭಾರತ್ ಮಾತಾಕೀ ಜೈ ಎಂದು ಕೂಗಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.