ಮಹಿಳಾ ವಿರೋಧಿ ನಿಲುವು ಪ್ರಶ್ನಿಸುವಂತಾಗಬೇಕು
Team Udayavani, Nov 25, 2019, 3:00 AM IST
ಮೈಸೂರು: ನಮ್ಮ ಸಮಾಜ ಸೃಷ್ಟಿಸಿರುವ ಮಹಿಳಾ ವಿರೋಧಿ ನಿಲುವುಗಳು ಮತ್ತು ಕಟ್ಟುಪಾಡುಗಳನ್ನು ನೇರವಾಗಿ ಪ್ರಶ್ನಿಸುವ ಹಾಗೂ ಟೀಕಿಸುವ ಕೆಲಸವಾಗಬೇಕು ಎಂದು ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಡಾ.ವಿಜಯಮ್ಮ ಹೇಳಿದರು. ಅಭಿರುಚಿ ಪ್ರಕಾಶನ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಮತಿ ಎಚ್.ಎಸ್. ಅವರ “ಸ್ತ್ರೀವಾದ ಚಿಂತನೆ ಮತ್ತು ಹೋರಾಟ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಯಾರೂ ಮೇಲಲ್ಲ, ಕೀಳಲ್ಲ: ನಮ್ಮ ಸಮಾಜದಲ್ಲಿರುವ ಪಿತೃ ಪ್ರಧಾನ ವ್ಯವಸ್ಥೆ ಮಹಿಳೆಯನ್ನು ವ್ಯಾಖ್ಯಾನಿಸಿರುವ ರೀತಿ ಸರಿಯಾಗಿಲ್ಲ. ಅದನ್ನು ಪ್ರಶ್ನಿಸುವುದರ ಜತೆಗೆ ಅದರಾಚೆಗೂ ನಾವು ಗುರುತಿಸಿಕೊಳ್ಳಬೇಕಿದೆ. 70ರ ದಶಕದಿಂದೀಚೆಗೆ ರೂಪುಗೊಂಡ ಸ್ತ್ರೀವಾದ ಶಸ್ತ್ರಾಸ್ತ್ರ ಯುದ್ಧವಲ್ಲ. ಬದಲಿಗೆ ಶಾಂತಿ, ಕರುಣೆಯಿಂದ ರೂಪುಗೊಂಡಿರುವುದಾಗಿದೆ. ಹೆಣ್ಣು ಮತ್ತು ಗಂಡು ಇವರಲ್ಲಿ ಯಾರೂ ಮೇಲಲ್ಲ ಅಥವಾ ಕೀಳಲ್ಲ. ಇಬ್ಬರೂ ಮನುಷ್ಯರಾಗಿದ್ದು, ಜೊತೆ ಜೊತೆಯಲ್ಲಿ ಸಾಗಬೇಕು ಎಂದು ಹೇಳಿದರು.
ಈಗ ಒಲಿಸಿಕೊಳ್ಳುವ ಪ್ರಯತ್ನ ಅತ್ಯಂತ ಅಗತ್ಯ ಸಂಗತಿಯಾಗಿದೆ. ಪುರುಷ ಪ್ರಧಾನ ವ್ಯವಸ್ಥೆ ಮನಸ್ಸು ಯಾವುದೇ ದಿಕ್ಕಿನಲ್ಲಿ ಸಾಗುತ್ತಿದ್ದರೂ ಅದನ್ನು ಸರಿದಾರಿಗೆ ತರುವ ಅನುನಯ ಗುಣ ಮುಖ್ಯ. ಬಹಳಷ್ಟು ಪುರುಷರಿಗೆ ಸ್ತ್ರೀವಾದ ಇಂದು ಅರ್ಥ ಆಗುತ್ತಿದೆ. ಈ ಹೊತ್ತಿನಲ್ಲಿ ಅವರ ಪ್ರಜ್ಞೆಯ ಆಳಕ್ಕೆ ಸ್ತ್ರೀವಾದ ಹೋಗುವಂತೆ ನೋಡಿಕೊಳ್ಳುವ ಅಗತ್ಯವಿದೆ. ಜೊತೆಗೆ ಸಮಾಜದಲ್ಲಿ ಆಗುವ ಎಲ್ಲಾ ಬೆಳವಣಿಗೆಯನ್ನು ನಿರ್ಣಯಿಸುವ ಅರ್ಹತೆಯಲ್ಲಿ ಮಹಿಳೆಗೂ ಪಾಲು ಸಿಗಬೇಕು. ಅಲ್ಲಿಯವರೆಗೂ ನಾವು ಹೋರಾಟ ಮಾಡುತ್ತಲೇ ಇರಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಮಹಿಳೆಯರನ್ನು ಕೆಲಸಕ್ಕೆ ಸಿದ್ಧಗೊಳಿಸಿ: ರಾಜಕೀಯ ಕ್ಷೇತ್ರದಲ್ಲಿ ಈಗ ಮಹಿಳೆಯರಿಗೆ ಅವಕಾಶ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಮಗಾಗಿ ಸೌಲಭ್ಯಗಳು ಬಂದರೆ, ಅದನ್ನು ಅವರೇ ಬಳಸಿಕೊಳ್ಳುತ್ತಾರೆ. ಮನೆ, ಹೊಲ-ಗದ್ದೆಯಲ್ಲಿ ಕೆಲಸ ಮಾಡುವ ಹೆಣ್ಣನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಕೆಲಸ ಮಾಡಿ ಎಂದರೆ ಹೇಗೆ?
ಯಾವುದೇ ಕ್ಷೇತ್ರದಲ್ಲಿ ಮಹಿಳೆ ಕೆಲಸ ಮಾಡುವಂತೆ ಮೊದಲು ಅವರನ್ನು ಸಿದ್ಧಗೊಳಿಸಬೇಕು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶ ನೀಡುವುದು ಒಂದು ರೀತಿಯ ಸ್ವಾರ್ಥವಿದೆ. ರಾಜಕೀಯ ಜ್ಞಾನವಿರುವವರಿಗೆ ಯಾರೂ ಅವಕಾಶ ನೀಡುವುದಿಲ್ಲ. ಬದಲಿಗೆ ಜನಪ್ರತಿನಿಧಿ ತೀರಿಕೊಂಡ ಬಳಿಕ ಆ ಸ್ಥಾನಕ್ಕೆ ಆತನ ಹೆಂಡತಿಯನ್ನು ನಿಲ್ಲಿಸಿ, ವೋಟನ್ನು ಪಡೆಯಬಹುದು ಎಂಬ ಸ್ವಾರ್ಥ ಅಡಗಿದೆ ವಿಷಾದ ವ್ಯಕ್ತಪಡಿಸಿದರು.
ಸ್ತ್ರೀ ವಾದ ವಿಸ್ಮತಿಗೆ ತಳ್ಳುವ ಕೆಲಸವಾಗುತ್ತಿದೆ: ಪುಸ್ತಕ ಕುರಿತು ಮಾತನಾಡಿದ ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ, ಸ್ತ್ರೀವಾದ ಕುರಿತು ಪೂರ್ವಗ್ರಹ ಹೊಂದಿರುವವರ ಹಾಗೂ ಸ್ತ್ರೀವಾದ ಪದ ಕೇಳುತ್ತಿದ್ದಂತೆ ನಾಪತ್ತೆಯಾಗುವವರ ಸಂಖ್ಯೆ ನಮ್ಮ ನಡುವೆ ಹೆಚ್ಚಿದೆ. ಸ್ತ್ರೀಯರೇ ಸ್ತ್ರೀ ವಾದವನ್ನು ವಿಸ್ಮತಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಎಚ್ಚರವಹಿಸಬೇಕಿದೆ.
ಕೃತಿಯ ಕತೃ ಶ್ರೀಮತಿಯವರು ತಮ್ಮ ತಜ್ಞತೆ ದಾಖಲಿಸಲು ಬರೆಯುತ್ತಿಲ್ಲ. ಹೆಣ್ಣು ಮತ್ತು ಗಂಡಿನ ಸಂಬಂಧಗಳಲ್ಲಿ ಆವರಿಸಿರುವ ಸಿಕ್ಕುಗಳನ್ನು ಬಿಡಿಸಿಕೊಂಡು ಬೆರೆಯಲು ಬೇಕಿರುವ ಹದಕ್ಕಾಗಿ ಬರೆಯುತ್ತಿದ್ದಾರೆ. ಈ ಕಾರಣದಿಂದಲೇ ಸ್ತ್ರೀವಾದದ ಮೇಲೆ ನಮಗೆ ನಂಬಿಕೆ ಇದೆ ಎಂದು ವಿಶ್ಲೇಷಿಸಿದರು. ಕೃತಿಯ ಕತೃ ಶ್ರೀಮತಿ ಎಚ್.ಎಸ್.ಮಾತನಾಡಿ, ಪಾಶ್ಚಾತ್ಯ ಸ್ತ್ರೀವಾದಿಗಳು ತಮ್ಮ ಚಿಂತನೆಯಲ್ಲಿ ಮೂರ್‍ನಾಲ್ಕು ಹಂತದಲ್ಲಿ ಬೆಳೆದಿದ್ದಾರೆ.
ಭಾರತದಲ್ಲಿ ಒಂದು ಹಂತದ ಚಿಂತನೆಯೂ ಸರಿಯಾಗಿ ಆಗಿಲ್ಲ. ಇಂದಿಗೂ ನಾವು ಹಕ್ಕುಗಳಿಗಾಗಿ ಅಹವಾಲು ಸಲ್ಲಿಸುತ್ತಾ, ಜಗಳವಾಡುವ ಹಂತದಲ್ಲೇ ಇದ್ದೇವೆ. ಬೀದಿಗಿಳಿದು ಹೋರಾಟ ನಡೆಸುವಷ್ಟೇ ತಾತ್ವಿಕ ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ, ಸಮತಾ ಅಧ್ಯಯನ ಕೇಂದ್ರದ ಚಂದ್ರಮತಿ ಸೋಂದಾ, ಪ್ರಕಾಶಕ ಅಭಿರುಚಿ ಗಣೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.