ಗಾಂಧಿಯ ಸಮಷ್ಟಿ ಪ್ರಜ್ಞೆ ಇಂದಿನ ಸಮಾಜದ ಅಗತ್ಯ
Team Udayavani, Feb 18, 2020, 3:00 AM IST
ಮೈಸೂರು: ಗಾಂಧೀಜಿಯನ್ನು ತಪ್ಪು-ಸರಿ ಎಂದು ಬಂಧಿಸಿದಷ್ಟು ಹಾಗೂ ಪ್ರಶ್ನೆ ಮಾಡಿದಷ್ಟು ನಾವುಗಳು ಮತ್ಯಾರನ್ನೂ ಪ್ರಶ್ನೆ ಮಾಡಿಲ್ಲ ಎಂದು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎ. ನಾರಾಯಣ ಅಭಿಪ್ರಾಯಪಟ್ಟರು.
ಕಲಾಮಂದಿರದ ಕಿರುರಂಗ ಮಂದಿರದ ಆವರಣದಲ್ಲಿ 20ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಸೋಮವಾರ ನಡೆದ “ಗಾಂಧಿ ಪಥ’ ವಿಚಾರ ಸಂಕಿರಣದ ಮೂರನೇ ಗೋಷ್ಠಿಯಲ್ಲಿ ಗಾಂಧಿ-ಧರ್ಮ, ಸತ್ಯ, ಅಹಿಂಸೆ ವಿಷಯದ ಕುರಿತು ಮಾತನಾಡಿದರು.
ಗಾಂಧಿ ಯಾರಿಗೂ ಅರ್ಥವಾಗಿಲ್ಲ: ಗಾಂಧಿಯನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲೂ ನಾವಿಲ್ಲ. ಮತ್ತೆ ಗಾಂಧಿ ಯಾವಹೊತ್ತಿಗೂ ಅರ್ಥವಾಗುವುದಿಲ್ಲ. ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವವರು ಮತ್ತೆ ಹುಟ್ಟಿ ಬರುತ್ತಾರೆ ಎಂಬ ಯಾವ ಖಾತ್ರಿಯೂ ಇಲ್ಲ. ಇಷ್ಟಾದರೂ, ಅವರನ್ನು, ಅವರ ತತ್ವ ಮತ್ತು ಸಿದ್ಧಾಂತಗಳನ್ನು ಪ್ರಶ್ನಿಸಿದಷ್ಟೂ ಮತ್ಯಾರನ್ನೂ ಪ್ರಶ್ನಿಸಿಲ್ಲ.
ನಾವು ಈ ಸೀಮಿತ ಚೌಕಟ್ಟನ್ನು ಮೀರಿ ಹೋಗಬೇಕು ಎಂದು ಹೇಳಿದರು. ನಾವು ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಮುಂಚೆ, ಅವರು ಯಾವ ಕಾಲಘಟ್ಟದಲ್ಲಿ ಇದ್ದರು ಎಂಬುದನ್ನು ಮನಗಾಣಬೇಕು. ಗಾಂಧೀಜಿಯವರ ರಾಜಕಾರಣ ಧರ್ಮಾಧಾರಿತವಾಗಿತ್ತು. ಗಾಂಧಿಗೆ ಧರ್ಮ ಎಂದರೆ ಸತ್ಯ ಮತ್ತು ಅಹಿಂಸೆ. ಸತ್ಯ ಎಂದರೆ ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಧರ್ಮಗಳು ಒಂದೇ ಎಂದು ಭಾವಿಸುವುದು.
ಇದರ ಅಮೂರ್ತ ರೂಪವೇ ಅಹಿಂಸೆ ಎಂದು ಭಾವಿಸಿದ್ದರು. ಅವರ ಈ ಸಮಷ್ಟಿ ಪ್ರಜ್ಞೆ ಇಂದಿನ ಸಮಾಜಕ್ಕೆ ಈಗ ಅರ್ಥವಾಗುತ್ತಿದೆ ಎಂದು ವಿಶ್ಲೇಷಿಸಿದರು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲಕ್ಕೆ ಗಾಂಧಿ ಅವರು ಒಂದು ಕಾಲದಲ್ಲಿನ ಘಟನೆ ಇಟ್ಟುಕೊಂಡು, ಗಾಂಧಿ ಹೆಸರನ್ನು ತಳುಕು ಹಾಕುತ್ತಾರೆ. ಎಲ್ಲದಕ್ಕು ಗಾಂಧಿ ಮಾಡಿದ ನಿರ್ಧಾರಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗಾಂಧೀಜಿಯವರು ಅಧುನೀಕರಣ ಮತ್ತು ಯಾಂತ್ರಿಕತೆಯನ್ನು ಪ್ರಭಲವಾಗಿ ವಿರೋಧಿಸಿದ್ದರು. ವ್ಯಕ್ತಿಯ ಕೆಲಸ ಕಿತ್ತುಕೊಳ್ಳಬಹುದಾದ ತಂತ್ರಜ್ಞಾನ ಮತ್ತು ಯಂತ್ರಗಳು ನಮಗೆ ಬೇಕಿಲ್ಲ ಎಂದು ಹೇಳಿದ್ದರು. ಅಂದು ಗಾಂಧಿ ವಾದವನ್ನು ಜನರು ಲೇವಡಿ ಮಾಡಿದ್ದರು. ಆದರೆ ನಿಧಾನವಾಗಿ ಗಾಂಧಿ ಹೇಳಿದ ಮಾತು ಇಂದು ಅರ್ಥವಾಗುತ್ತಿದೆ ಎಂದರು.
ಗಾಂಧೀಜಿಗಿದೆ ಎರಡು ರೀತಿಯ ಶಿಷ್ಯ ಪರಂಪರೆ: ಗಾಂಧಿ-ಅರ್ಥಶಾಸ್ತ್ರ ವಿಷಯದ ಕುರಿತು ಪತ್ರಕರ್ತ ಜಗದೀಶ್ ಕೊಪ್ಪ ಮಾತನಾಡಿ, ಗಾಂಧೀಜಿಯವರಿಗೆ ಎರಡು ರೀತಿಯ ಶಿಷ್ಯ ಪರಂಪರೆಯಿದೆ. ಒಂದು ಗಾಂಧಿಯನ್ನು ಹೆತ್ತ ತಾಯಿಯಂತೆ ಕಾಣುವ ಮೂಲಕ ಸಲಹುವ ಪರಂಪರೆ. ಇದರಲ್ಲಿ ಅಬ್ದುಲ್ ಗಫರ್‌ಖಾನ್, ನೆಹರು, ಸರ್ಧಾರ್ ವಲ್ಲಬಾಯಿ ಪಟೇಲ್ ಮತ್ತಿತರರು ಇದ್ದಾರೆ.
ಮತ್ತೂಂದು ಶಿಷ್ಯ ಪರಂಪರೆ ಎಂದರೆ ಗಾಂಧಿಯನ್ನು ಪ್ರಶ್ನಿಸುತ್ತಲೆ, ಪ್ರತಿಕ್ಷಣ ಅಗ್ನಿ ಪರೀಕ್ಷಗೆ ಒಳಪಡಿಸುತ್ತಲೆ ನೇಣುಗಂಬಕ್ಕೇರಿಸಿ ಗಾಂಧಿಯನ್ನು ಬೆಳೆಸಿದರು. ಜೊತೆಗೆ ತಾವು ಬೆಳೆದರು. ಈ ಶಿಷ್ಯ ಪರಂಪರೆಯಲ್ಲಿ ಲೋಹಿಯಾ, ಗೋ. ರಾಮಚಂದ್ರ ಮೂರ್ತಿ, ಜೆ.ಸಿ. ಕುಮಾರಪ್ಪ ಅವರು ಎಂದು ಹೇಳಿದರು.
ಜೆೆ.ಸಿ. ಕುಮಾರಪ್ಪ, ಭಾರತದ ಹಣಕಾಸು ವ್ಯವಸ್ಥೆ ಬಗ್ಗೆ ಬರೆದಿದ್ದ ಪ್ರಬಂಧವನ್ನು ಪುಸ್ತಕವನ್ನಾಗಿ ಪ್ರಕಟಿಸಲು ಗಾಂಧಿಯವರಿಂದ ಮುನ್ನುಡಿ ಬರೆಸುತ್ತಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಕ್ಷೇತ್ರ ಕಾರ್ಯ ಮಾಡಿ, ಗ್ರಾಮೀಣ ಬದುಕನ್ನು ಕಂಡು ನೈಜ್ಯ ಅಂಶಗಳನ್ನು ದಾಖಲಿಸಿದಾಗ ಬದಲವಾಣೆ ಕಂಡುಕೊಳ್ಳಲು ಸಾಧ್ಯ ಎಂಬ ಸಲಹೆ ನೀಡಿದರು. ಇದಾದ ನಂತರ ಕುಮಾರಪ್ಪ ದೇಶಾದ್ಯಂತ ಸಂಚರಿಸಿ ಕ್ಷೇತ್ರಾಧ್ಯನ ಮಾಡಿ ಗಾಂಧಿ ಅರ್ಥಶಾಸ್ತ್ರವನ್ನು ರಚಿಸುತ್ತಾರೆ ಎಂದು ಹೇಳಿದರು.
ಕುಮಾರಪ್ಪ ರೂಪಿಸಿದ ಗಾಂಧಿ ಅರ್ಥಶಾಸ್ತ್ರ ಜಗತ್ತಿನ ಎಲ್ಲಾ ಭಾಗಗಳನ್ನು ಮುಟ್ಟಿತು. ಜೊತೆಗೆ ಗಾಂಧಿ ಅರ್ಥಶಾಸ್ತ್ರವನ್ನು ಓದಿ ಬದುಕು ರೂಪಿಸಿಕೊಂಡ ಅರ್ಥಶಾಸ್ತ್ರಜ್ಞರಿಗೆಲ್ಲರಿಗೂ ನೋಬೆಲ್ ಸಿಕ್ಕಿದೆ. ಇದು ಗಾಂಧಿ ಅರ್ಥಶಾಸ್ತ್ರದ ಸಾಮರ್ಥ್ಯ. ಇನ್ನೂ ವಿಶೇಷ ಎಂದರೆ ಕುಮಾರಪ್ಪನವರು ಗಾಂಧಿ ಅರ್ಥಶಾಸ್ತ್ರಕ್ಕೆ ಅಧ್ಯಾತ್ಮಿಕ ಸ್ಪರ್ಶ ನೀಡಿರುವುದು ಮಹತ್ವದ ಸಂಗತಿ.
ನಾವು ನಿಸರ್ಗದಿಂದ ಏನನ್ನು ಪಡೆಯುತ್ತೇವೆಯೋ ಪ್ರತಿಯಾಗಿ ನಿಸರ್ಗಕ್ಕೆ ಏನಾದರೂ ನೀಡಬೇಕು. ಒಂದು ಮರ ಕಡೆದರೆ, ನಾಲ್ಕು ಗಿಡಗಳನ್ನು ನೆಡಬೇಕು ಎಂಬ ಪರಿಕಲ್ಪನೆ ಗಾಂಧಿಯವರ ಅಹಿಂಸೆ ಮತ್ತು ಸರಳತೆಯಿಂದ ಪ್ರಭಾವಿತವಾದುದು. ನಿಯಂತ್ರಿತ ಮತ್ತು ಚಾಲ್ತಿ ಆರ್ಥಿಕತೆಯ ಮಿಶ್ರ ಅಂಶಗಳು ಗಾಂಧಿ ಅರ್ಥಶಾಸ್ತ್ರ ಒಳಗೊಂಡಿದೆ ಎಂದರು.
ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತವನ್ನು ನೆಹರು ಮತ್ತು ಡಾ.ಅಂಬೇಡ್ಕರ್ ತಿರಸ್ಕರಿಸಿದರು. ಆದರೆ ತಮ್ಮ ತತ್ವ ಮತ್ತು ಸಿದ್ಧಾಂತವನ್ನು ಎಂದಿಗೂ ಬದಲಿಸಿಕೊಳ್ಳದೇ ಕೊನೆವರೆಗೆ ಗಾಂಧಿ ನಂಬಿಕೆ ಇರಿಸಿಕೊಂಡಿದ್ದರು. ಆಧುನಿಕ ತಂತ್ರಜ್ಞಾನವನ್ನು ಎಷ್ಟು ಅಗತ್ಯವೋ ಅಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂಬುದು ಗಾಂಧಿ ನಿಲುವಾಗಿತ್ತು.
ಬೇಡಿಕೆಗೆ ಅಗತ್ಯದಷ್ಟು ಮಾತ್ರ ಉತ್ಪಾದನೆ ಮಾಡಬೇಕು. ಒಂದು ವೇಳೆ ಉತ್ಪಾದನೆ ಹೆಚ್ಚಾದರೆ ಕೊಳ್ಳುಬಾಕ ಸಂಸ್ಕೃತಿ ಉದ್ಭವಿಸುತ್ತದೆ ಎಂದು ಕುಮಾರಪ್ಪ ಬಹಳ ಹಿಂದಯೇ ಎಚ್ಚರಿಸಿದ್ದರು. ಆದರೆ ಇಂದು ನಾವು ಮಾಡುತ್ತಿರುವುದು ಅದೇ ತಪ್ಪು ಕೆಲಸ. ಜಾಹಿರಾತು ಮೂಲಕ ಮಿದುಳು ತೊಳೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ವರ್ಷಕ್ಕೆ ಒಂದು ಮೊಬೈಲ್, ಕಾರು, ಮನೆ, ಬಟ್ಟೆ ಬದಲಿಸುತ್ತಿದ್ದೇವೆ.
ಕಟ್ಟಿಕೊಂಡ ಪತ್ನಿ ಬಿಟ್ಟು ಎಲ್ಲವನ್ನೂ ಬದಲಿಸುತ್ತಿದ್ದೇವೆ. ಇದು ನಮ್ಮ ಕೊಳ್ಳುಬಾಕ ಸಂಸ್ಕೃತಿಯ ಪ್ರತಿಫಲ ಎಂದು ಬೇಸರ ವ್ಯಕ್ತಪಡಿಸಿದರು. ಮೈಸೂರು ವಿವಿ ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್. ಶೇಖರ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಾವಿದ ನಾ. ಶ್ರೀನಿವಾಸ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.