![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 24, 2018, 11:51 AM IST
ಮೈಸೂರು: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷ, ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಮುಂದಾಗಿದೆ.
ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಂಸದ ಆರ್.ಧ್ರುವನಾರಾಯಣ ಅಖಾಡಕ್ಕೆ ಇಳಿದಿದ್ದು, ಜಿಪಂ ಕಾಂಗ್ರೆಸ್ ಸದಸ್ಯರ ಸಭೆ ನಡೆಸಿ ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಶನಿವಾರ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡುವಂತೆ ನೋಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಹಿಂದಿನ ಐದು ವರ್ಷ ಹಾಗೂ ಕಳೆದ ಎರಡು ವರ್ಷಗಳಿಂದ ಮೈತ್ರಿ ಆಡಳಿತ ನೀಡಿದ್ದ ಜೆಡಿಎಸ್-ಬಿಜೆಪಿ ದೋಸ್ತಿ ಕೊನೆಗೊಳ್ಳಲಿದೆ.
ಜಿಪಂನಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಧರ್ಮಸ್ಥಳಕ್ಕೆ ತೆರಳಿ ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಚಿವ ಸಾ.ರಾ.ಮಹೇಶ್ ಒಲವು ತೋರಿದ್ದಾರೆ ಎಂದು ಹೇಳಲಾಗಿದ್ದು, ಎರಡು ದಿನಗಳ ಹಿಂದಷ್ಟೇ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿರುವ ಜಿ.ಟಿ.ದೇವೇಗೌಡ ಇನ್ನೂ ಮೈಸೂರಿಗೆ ಭೇಟಿ ನೀಡಿಲ್ಲ.
ಸಿದ್ದರಾಮಯ್ಯ ಅವರೂ ಇನ್ನೂ ಒಂದು ವಾರ ಕಾಲ ಪ್ರಕೃತಿ ಚಿಕಿತ್ಸೆ ಪಡೆಯಲಿರುವುದರಿಂದ ಆ ನಂತರವೇ ಮೈಸೂರು ಜಿಪಂನಲ್ಲಿ ಹೊಸ ದೋಸ್ತಿಗಳ ಚರ್ಚೆ ನಡೆಯಲಿದೆ. 49 ಸದಸ್ಯ ಬಲದ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ 22, ಜೆಡಿಎಸ್ 16, ಬಿಜೆಪಿ 8 ಹಾಗೂ ಓರ್ವ ಪಕ್ಷೇತರ ಸೇರಿದಂತೆ 47 ಸದಸ್ಯರಿದ್ದಾರೆ.
ಹುಣಸೂರು ತಾಲೂಕು ಹನಗೋಡು ಜಿಪಂ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಅನಿಲ್ ಚಿಕ್ಕಮಾದು, ತಮ್ಮ ತಂದೆ ಶಾಸಕ ಎಸ್.ಚಿಕ್ಕಮಾದು ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ಎಚ್.ಡಿ.ಕೋಟೆ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಈ ಮೊದಲೇ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿ ಶಾಸಕರಾಗಿ ಚುನಾಯಿತರಾಗಿದ್ದಾರೆ.
ತಿ.ನರಸೀಪುರ ತಾಲೂಕು ಸೋಮನಾಥಪುರ ಜಿಪಂ ಕ್ಷೇತ್ರದ ಜೆಡಿಎಸ್ ಸದಸ್ಯರಾಗಿದ್ದ ಅಶ್ವಿನ್‌ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದರಿಂದ ಎರಡು ಸ್ಥಾನಗಳು ಖಾಲಿ ಇವೆ. ಈ ಪೈಕಿ ಹನಗೋಡು ಜಿಪಂ ಕ್ಷೇತ್ರಕ್ಕೆ ಇತ್ತೀಚೆಗೆ ಉಪ ಚುನಾವಣೆ ನಡೆದು ಕಾಂಗ್ರೆಸ್‌ನ ಕಟ್ಟನಾಯಕ ಚುನಾಯಿತರಾಗಿದ್ದರೂ ಇನ್ನೂ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ.
ಅಶ್ವಿನ್‌ಕುಮಾರ್, ಶಾಸಕರಾಗಿ ಆಯ್ಕೆಯಾದ ನಂತರ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದರಿಂದ ಸೋಮನಾಥ ಪುರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿಲ್ಲ. ಜಿಪಂ ಚುನಾವಣೆಯಲ್ಲಿ ಪಕ್ಷೇತರರಾಗಿ ಚುನಾಯಿತರಾಗಿದ್ದ ದಯಾನಂದಮೂರ್ತಿ, ಜೆಡಿಎಸ್ ಸೇರಿ ನಂಜನಗೂಡು ಕ್ಷೇತ್ರದಿಂದ ವಿಧಾನಸಭಾ ಚುನಾವಣೆ ಎದುರಿಸಿದ್ದರೆ, ಕಾಂಗ್ರೆಸ್ ಚಿಹ್ನೆಯಡಿ ಗೆದ್ದಿರುವ ಅಮಿತ್ ವಿ.ದೇವರಹಟ್ಟಿ, ತಮ್ಮ ತಂದೆ ಜೆಡಿಎಸ್ ಸೇರಿ ಶಾಸಕರಾಗಿರುವುದರಿಂದ ತಾಂತ್ರಿಕವಾಗಿ ಕಾಂಗ್ರೆಸ್‌ನಲ್ಲಿದ್ದರೂ ಮಾನಸಿಕವಾಗಿ ಜೆಡಿಎಸ್‌ನಲ್ಲಿದ್ದಾರೆ.
ರಾಜೀನಾಮೆ ಸಾಧ್ಯತೆ: ಆರಂಭದಲ್ಲೇ ಜೆಡಿಎಸ್ ನಾಯಕರ ನಡುವೆ ಆದ ಆಂತರಿಕ ಒಪ್ಪಂದದಂತೆ ಮೊದಲ 20 ತಿಂಗಳು ನಯಿಮಾ ಸುಲ್ತಾನ, ನಂತರದ 40 ತಿಂಗಳು ಪರಿಮಳಾ ಶ್ಯಾಂ ಅಧ್ಯಕ್ಷರಾಗಿರಬೇಕಿತ್ತು. ಆದರೆ, ಈಗಾಗಲೇ 24 ತಿಂಗಳು ಅಧಿಕಾರ ಅನುಭವಿಸಿರುವ ನಯಿಮಾ ಸುಲ್ತಾನ ಅವರು, ನನ್ನ ಅವಧಿಯಲ್ಲಿ ಮೂರ್‍ನಾಲ್ಕು ತಿಂಗಳು ಚುನಾವಣಾ ನೀತಿ ಸಂಹಿತೆ ಎದುರಾಗಿದ್ದರಿಂದ 30 ತಿಂಗಳ ನಂತರ ಅಧಿಕಾರ ಬಿಟ್ಟುಕೊಡುವುದಾಗಿ ಹೇಳುತ್ತಿದ್ದರು, ಸ್ವಪಕ್ಷಿಯರೇ ಒಪ್ಪದೇ ಅವಿಶ್ವಾಸ ಗೊತ್ತುವಳಿ ತಂದು ಅಧ್ಯಕ್ಷರನ್ನು ಕೆಳಗಿಳಿಸಲು ಮಾತುಕತೆ ನಡೆಸಿದ್ದಾರೆ.
ಹೊಸ ದೋಸ್ತಿ ಪ್ರಕ್ರಿಯೆ: ಇದೀಗ ಹೊಸ ದೋಸ್ತಿ ಪ್ರಕ್ರಿಯೆ ಆರಂಭವಾಗಿರುವುದರಿಂದ ಜೆಡಿಎಸ್ ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಮುಖ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಪಡೆದು ಹೆಚ್ಚು ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವುದಾದರೆ ನಯಿಮಾಸುಲ್ತಾನ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.