ಕುಕ್ಕರಹಳ್ಳಿಕೆರೆ ಪೋಷಕ ಕಾಲುವೆಗಳ ಕಾಮಗಾರಿ ಆರಂಭ
Team Udayavani, Jul 29, 2017, 12:16 PM IST
ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಯ ಪೋಷಕ ಕಾಲುವೆಗಳಿಗೆ ಮರುಜೀವ ನೀಡಲು ನಗರಪಾಲಿಕೆ ಹಾಗೂ ಜಿಲ್ಲಾಡಳಿತ ಮುಂದಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಶುಕ್ರವಾರ ಕುಕ್ಕರಹಳ್ಳಿಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಹಲವು ವರ್ಷದಿಂದ ಪೋಷಕ ಕಾಲುವೆಗಳ ಮೂಲಕ ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಕೆಯಾಗುತ್ತಿತ್ತು. ಆದರೆ ನಗರದ ಬೆಳವಣಿಗೆಯಾದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಈ ಪೋಷಕ ಕಾಲುವೆಗಳು ಕಣ್ಮರೆಯಾಗಿದ್ದು, ಈ ನಿಟ್ಟಿನಲ್ಲಿ ಕುಕ್ಕರಹಳ್ಳಿಕೆರೆಯ ಪೋಷಕ ಕಾಲುವೆಗಳ ದುರಸ್ತಿಗೊಳಿಸುವ ಕಾಮಗಾರಿ ಆರಂಭಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ, ನಗರದ ಕುದುರೆಮಾಳದ ಬಳಿಯ ಪೂರ್ಣಯ್ಯ ನಾಲೆಯಲ್ಲಿ ನಡೆಯುತ್ತಿದ್ದ ಹೂಳೆತ್ತುವ ಕಾಮಗಾರಿ ಸೇರಿದಂತೆ ಇನ್ನಿತರ ಕಾಲುವೆಗಳ ದುರಸ್ತಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಗರಕ್ಕೆ ಹೊಂದಿಕೊಂಡಂತಿರುವ, ವಾಯುವಿಹಾರಿಗಳ ನೆಚ್ಚಿನ ತಾಣವಾಗಿರುವ ಕುಕ್ಕರಹಳ್ಳಿಕೆರೆಗೆ ಮಳೆ ನೀರನ್ನು ಪೂರೈಕೆ ಮಾಡುವ 13 ಪೋಷಕ ಕಾಲುವೆಗಳಿವೆ. ಆದರೆ ಈ ಪೋಷಕ ಕಾಲುವೆಗಳು ಹಲವು ವರ್ಷದಿಂದ ಮಣ್ಣು ತುಂಬಿಕೊಂಡು ಮುಚ್ಚಿ ಹೋಗಿರುವ ಪರಿಣಾಮ ಕೆರೆಗೆ ಮಳೆ ನೀರಿನ ಪೂರೈಕೆಯಾಗುತ್ತಿರಲಿಲ್ಲ.
ಬದಲಿಗೆ ಚರಂಡಿಗಳಿಂದ ಬರುವ ಕಲುಷಿತ ನೀರು ಕೆರೆಗೆ ಪೂರೈಕೆಯಾಗಿ, ಕೆರೆಯ ನೀರು ಸಹ ಕಲುಷಿತಗೊಳ್ಳುತ್ತಿತ್ತು. ಇದನ್ನು ಮನಗಂಡ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಕುಕ್ಕರಹಳ್ಳಿ ಕೆರೆಯ ಪೋಷಕ ಕಾಲುವೆಗಳಿಗೆ ಮರುಜೀವ ನೀಡಲು ಮುಂದಾಗಿದ್ದು, ಇದಕ್ಕಾಗಿ ಕೆರೆಯ ನಕ್ಷೆ ಪರಿಶೀಲಿಸಿ, ಇದರಲ್ಲಿ ಕಂಡುಬರುವ ಪೋಷಕ ಕಾಲುವೆಗಳಿಗೆ ಪುನರುಜ್ಜೀವನ ನೀಡುವ ಕೆಲಸ ಈಗಾಗಲೇ ಕೈಗೆತ್ತಿಕೊಂಡಿದೆ.
ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಡಿ. ಜಿಲ್ಲಾಧಿಕಾರಿ ರಂದೀಪ್ ಮಾತನಾಡಿ, ಕುಕ್ಕರಹಳ್ಳಿಕೆರೆ ಹಲವು ವರ್ಷದಿಂದ ನೀರು ಪೂರೈಕೆಗೆ ಕಾರಣವಾಗಿದ್ದ ಪೋಷಕ ಕಾಲುವೆಗಳು ಮುಚ್ಚಿ ಹೋಗಿದ್ದು, ಇವುಗಳಿಗೆ ಮರುಜೀವ ನೀಡಿದರೆ ಕೆರೆಗೆ ಶುದ್ಧವಾದ ನೀರು ಪೂರೈಕೆಯಾಗಲಿದೆ. ಹೀಗಾಗಿ ಪೋಷಕ ಕಾಲುವೆಗಳ ದುರಸ್ತಿ ಕಾಮಗಾರಿ ಆರಂಭಿಸಲಾಗಿದ್ದು, ಕಾಮಗಾರಿ ಉತ್ತಮವಾಗಿ ಸಾಗುತ್ತಿದೆ.
ಕಾಮಗಾರಿಯಲ್ಲಿ ಪೋಷಕ ಕಾಲುವೆಗಳಲ್ಲಿ ತುಂಬಿರುವ ಮಣ್ಣನ್ನು ತೆಗೆಯುವುದು ಮಾತ್ರವಲ್ಲದೆ, ಕಾಲುವೆ ಇಕ್ಕೆಲೆಗಳಲ್ಲಿ ಕಲ್ಲುಗಳನ್ನು ಜೋಡಣೆ ಮಾಡಲು ಸೂಚಿಸಲಾಗಿದೆ. ಇದಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಬಂದಿರುವ 1.35 ಕೋಟಿ ರೂ. ಹಣದಲ್ಲಿ ಕೆರೆಯ ಏರಿ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಗಿಡಗಂಟಿಗಳ ತೆರವುಗೊಳಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಸಹ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆ ಆಯುಕ್ತ ಜಿ.ಜಗದೀಶ್, ನರ್ಮ್ ಯೋಜನಾಧಿಕಾರಿ ಸುರೇಶ್ ಬಾಬು ಇತರರು ಇದ್ದರು.