ಗ್ರಾಮಕ್ಕೆ ನುಗ್ಗಿ ಜನರನ್ನು ಅಟ್ಟಾಡಿಸಿದ ಕಾಡಾನೆ
Team Udayavani, May 18, 2019, 3:00 AM IST
ಎಚ್.ಡಿ.ಕೋಟೆ: ಕಾಡಾನೆಗಳು ಕಾಡಿನಿಂದ ನಾಡಿನತ್ತ ಮುಖ ಮಾಡಿ ಜನರು ವಾಸಿಸುವ ಗ್ರಾಮಗಳತ್ತ ಧಾವಿಸುತ್ತಿದ್ದು, ಜನರನ್ನು ಭಯಭೀತರನ್ನಾಗಿಸಿವೆ. ಶುಕ್ರವಾರ ಬೆಳಗಿನ ಜಾವ ಕಬಿನಿ ಜಲಾಶಯ ಸಮೀಪದ ಬೀಚನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಕಾಡಾನೆ (ಒಂಟಿ ಸಲಗ) ಕಾಣಸಿಕೊಂಡು ಗ್ರಾಮದ ಜನರನ್ನು ಅಟ್ಟಾಡಿಸಿ ದಾಂದಲೆ ನಡೆಸಿದೆ. ಓರ್ವ ಮಹಿಳೆ ಸೇರಿದಂತೆ ಹಲವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ 15 ದಿನಗಳ ಹಿಂದೆ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಕಾಣಿಸಿಕೊಂಡ ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡಿಗೆ ವಾಪಸ್ ಕಳುಹಿಸಲು ಕಾರ್ಯಾಚರಣೆ ಕೈಗೊಂಡಿದ್ದ ಮರು ದಿನವೇ ಪಡುಕೋಟೆ ಗ್ರಾಮದಲ್ಲಿ ಕಾಣಿಸಿಕೊಂಡು ನಂತರ ಮೇ 5 ರಂದು ಮಾದಾಪುರ ಗ್ರಾಮದಲ್ಲಿ ಕಾಣಸಿಕೊಂಡು ಒರ್ವ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
ನಂತರ ಹೆಚ್ಚಿನ ಸಿಬ್ಬಂದಿ ಕರೆಸಿಕೊಂಡು 4 ದಸರಾ ಆನೆಗಳ ಸಹಾಯದಿಂದ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವಲ್ಲಿ ಅರಣ್ಯಾಧಿಕಾರಿಗಳ ತಂಡ ಯಶಸ್ವಿಯಾಗಿ, ಚಿಕ್ಕದೇವಮ್ಮನ ಬೆಟ್ಟದ ಕಾಡಿಗೆ ಸೇರಿಸಿದ್ದರು.
ಭಯಭೀತಿಯಲ್ಲಿ ಜನರು: ಘಟನೆ ಮರೆಯಾಗುವ ಮುನ್ನವೇ ಮತ್ತೆ ಕಾಡಿನಿಂದ ಹೊರ ಬಂದು ಪ್ರತಿದಿನ ಒಂದಲ್ಲ ಒಂದು ಗ್ರಾಮಗಳ ಬಳಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಹಾಗೂ ಹೊಲ ಗದ್ದೆಗಳಲ್ಲಿ ಕೃಷಿಯಲ್ಲಿ ತೊಡಗುವ ರೈತರು, ಕೂಲಿ ಕಾರ್ಮಿಕರನ್ನು ಭಯಭೀತರನ್ನಾಗಿಸಿವೆ.
ರೊಚ್ಚಿಗೆದ್ದ ಸಲಗ: ಶುಕ್ರವಾರ ಬೆಳಗಿನ ಜಾವ ತುಂಬಸೋಗೆ ಗ್ರಾಮದಲ್ಲಿ ಒಂಟಿ ಸಲಗ ಕಾಣಿಸಿಕೊಂಡು ವಾಯುವಿಹಾರಕ್ಕೆ ತೆರಳಿದ್ದ ಜನರ ಕಣ್ಣಿಗೆ ಬಿದ್ದ ಆನೆ ಹೊಲ ಗದ್ದೆಗಳ ಮೂಲಕ ನಡೆದು 6.30 ರಲ್ಲಿ ಬೀಚನಹಳ್ಳಿ ಗ್ರಾಮದ ಮಧ್ಯೆಯೇ ಕಾಣಿಸಿಕೊಂಡಿದೆ. ಆನೆ ಗ್ರಾಮಕ್ಕೆ ಬಂದಿರುವ ಸುದ್ದಿ ತಿಳಿದು ಜನರು ಆನೆಯನ್ನು ಹಿಂಬಾಲಿಸಿ ಗಲಾಟೆ ಮಾಡಿದ್ದರಿಂದ ರೊಚ್ಚಿಗೆದ್ದ ಸಲಗ ಸಿಕ್ಕ ಸಿಕ್ಕವರನ್ನು ಅಟ್ಟಾಡಿಸಿದೆ. ಈ ಸಂದರ್ಭದಲ್ಲಿ ಮನೆಯ ಮುಂದೆ ಕುಳಿತಿದ್ದ ಕಮಲಮ್ಮ ಅವರ ಮೇಲೆ ದಾಳಿ ಮಾಡಿ ಸೊಂಡಲಿನಿಂದ ಎಸೆದಿದೆ.
ವಾಹನಗಳು ಜಖಂ: ನಂತರ ಎರಡು ದ್ವಿಚಕ್ರ ವಾಹನ, ಒಂದು ಬೈಸಿಕಲ್ ಅನ್ನು ಜಖಂಗೊಳಿಸಿ ಕಬಿನಿ ಎಡದಂಡೆ ನಾಲೆ ಮೂಲಕ ಮಾಗುಡಿಲು ಗ್ರಾಮದ ಗದ್ದೆ ಮಾರ್ಗವಾಗಿ ಕಬಿನಿ ನದಿಯಲ್ಲಿ ಈಜಿಕೊಂಡು ಸರಗೂರು ಗ್ರಾಮದ ಹೊಸ ಬಡಾವಣೆ ಸಮೀಪದ ಗದ್ದೆಯಲ್ಲಿ ಬಿಡುಬಿಟ್ಟಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದಿರುವ ಕಾಡಾನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಹಾಸ ಪಡುತ್ತಿದ್ದಾರೆ. ಕಾಡಾನೆಯನ್ನು ನೋಡಲು ಹೆಚ್ಚಿನ ಜನರು ಸೇರುವುದರಿಂದ ಕಾರ್ಯಾಚರಣೆ ನಡೆಸಲು ತೊಂದರೆಯಾಗುತ್ತಿದೆ.
ಬೆಳೆಹಾನಿ: ಬೆಳ್ಳಂ ಬೆಳಗ್ಗೆಯೇ ಕಾಡಾನೆಗಳು ಹೊಲ ಗದ್ದೆಗಳಲ್ಲಿ ಕಾಣಿಸಿಕೊಂಡು ನಾಟಿ, ಬಿತ್ತನೆ ಮಾಡಿರುವ ಬೆಳೆಗಳನ್ನು ನಾಶಪಡಿಸುತ್ತಿದ್ದು, ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ನಷ್ಟ ಉಂಟಾಗಿದೆ. ಒಂದು ಕಡೆ ಸರಿಯಾದ ಕಾಲಕ್ಕೆ ಮಳೆಯಿಲ್ಲ. ಮುಂಗಾರು ಕೈಕೊಟ್ಟರು ಅಲ್ಪಸ್ವಲ್ಪ ಬಿದ್ದ ಮಳೆಗೆ ಹಾಗೂ ಪಂಪ್ ಸೆಟ್ ನೀರಿನಿಂದ ಬೆಳೆದ ಬೆಳೆಗಳನ್ನು ಕಾಡಾನೆಗಳು ದಾಳಿ ಮಾಡಿ ನಾಶಪಡಿಸುತ್ತಿರುವುದು ರೈತರನ್ನು ಚಿಂತೆಗಿಡುಮಾಡಿದೆ.
ಸರಗೂರು ಪಟ್ಟಣ ಸಮೀಪದ ಗದ್ದೆಯಲ್ಲಿ ಆನೆ ಬಿಡುಬಿಟ್ಟಿದೆ. ಹೆಚ್ಚಿನ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಳೆಯಿಂದಾಗಿ ಕಾರ್ಯಾಚರಣೆ ಕಷ್ಟವಾಗಿದೆ. ಆನೆಯನ್ನು ಇಂದು ರಾತ್ರಿಯೇ(ಶುಕ್ರವಾರ ) ಮುಳ್ಳೂರು ಅರಣ್ಯಕ್ಕೆ ಸೇರಿಸಲಾಗುವುದು.
-ಮೊಸೀನ್ ಬಾಷಾ, ಅರಣ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore: ಹಾಡಹಗಲೇ ಕಾರು ಅಡ್ಡಗಟ್ಟಿ ರಾಬರಿ; ಹಣದೊಂದಿಗೆ ಕಾರು ಕೂಡಾ ದೋಚಿದರು!
Hunasur: ಪ್ರೇಯಸಿಗೆ ಚಿನ್ನ ಖರೀದಿಸಲು ಎಟಿಎಂ ಗೆ ತುಂಬಬೇಕಿದ್ದ ಹಣ ಎಗರಿಸಿದ ಯುವಕ
Mysuru ಮುಟ್ಟುಗೋಲು: 142 ನಿವೇಶನ ಮಾಹಿತಿ ಬಹಿರಂಗಕ್ಕೆ ಸ್ನೇಹಮಯಿ ಕೃಷ್ಣ ಒತ್ತಾಯ
ತ್ರಿವೇಣಿ ಸಂಗಮ ಕುಂಭಮೇಳಕ್ಕೆ 10 ಕೋಟಿ ರೂ. ಪ್ರಸ್ತಾವನೆ: ಸಚಿವ ಮಹದೇವಪ್ಪ
Mysuru: ಸಿದ್ದರಾಮಯ್ಯ ಹೆಸರು ದುರ್ಬಳಕೆಗೆ ಇ.ಡಿ. ಮೂಲಕ ಯತ್ನ; ಯತೀಂದ್ರ