ಅಬ್ಬೂರಿನಲ್ಲಿ ಮುಂದುವರೆದ ವ್ಯಾಘ್ರನ ಉಪಟಳ; ಸಾಕು ಪ್ರಾಣಿಗಳು ಬಲಿ
ವಾರದ ಅಂತರದಲ್ಲಿ ಮೂರು ಹಸು ಬಲಿ
Team Udayavani, Nov 17, 2022, 8:58 PM IST
ಹುಲಿಯ ಸಾಂದರ್ಭಿಕ ಚಿತ್ರ ಮಾತ್ರ
ಹುಣಸೂರು: ಹಾಡು ಹಗಲೇ ನಾಗರಹೊಳೆ ಉದ್ಯಾನವನದಂಚಿನ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದೆಯಲ್ಲದೆ ಮೇಕೆಯೊಂದನ್ನು ಹೊತ್ತೊಯ್ದಿರುವ ಘಟನೆ ತಾಲೂಕಿನ ಅಬ್ಬೂರಿನಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದ ತಿಮ್ಮೇಗೌಡರಿಗೆ ಸೇರಿದ ಹಸು ಹಾಗೂ ಮೇಕೆಯಾಗಿದ್ದು, ಗುರುವಾರದಂದು ಶೆಟ್ಟಹಳ್ಳಿಯ ಅರಣ್ಯದಂಚಿನಲ್ಲಿರುವ ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಕೊಂದು ಹಾಕಿದೆಯಲ್ಲದೆ ಪಕ್ಕದಲ್ಲೇ ಮೇಯುತ್ತಿದ್ದ ಮೇಕೆಯನ್ನು ಹೊತ್ತೊಯ್ದಿದೆ.
ತಿಂಗಳಲ್ಲಿ ಐದು ಜಾನುವಾರುಗಳ ಸಾವು
ವಾರದ ಹಿಂದಷ್ಟೇ ಗೌಡಿಕೆರೆ ಗ್ರಾಮದ ಶೇಖರ್ ರವರಿಗೆ ಸೇರಿದ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿತ್ತು. ಅಲ್ಲದೆ ಮೂರು ದಿನಗಳ ಹಿಂದೆ ಸಮೀಪದ ಬೀರತಮ್ಮನಹಳ್ಳಿಯಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿತ್ತು.
ಘಟನ ಸ್ಥಳಕ್ಕೆ ಹುಣಸೂರು ವಲಯದ ಡಿ.ಆರ್.ಎಫ್.ಓ.ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿ ಇಲಾಖೆಯಿಂದ ಬರುವ ಪರಿಹಾರ ನೀಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಭಯಭೀತರಾದ ಜನತೆ: ಇತ್ತೀಚಿನ ದಿನಗಳಲ್ಲಿ ಹುಲಿಯು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಆತಂಕಗೊಂಡಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕೂಲಿ- ಕಾರ್ಮಿಕರು ಭಯಭೀತರಾಗಿದ್ದಾರೆ. ಅರಣ್ಯದಂಚಿನ ಗ್ರಾಮಗಳಾದ ಬಿಲ್ಲೆನಹೊಸಹಳ್ಳಿ, ನೇರಳಕುಪ್ಪೆ, ಕಚುವಿನಹಳ್ಳಿ, ಶೆಟ್ಟಹಳ್ಳಿ, ಕೊಳವಿಗೆ, ನೇಗತ್ತೂರು ಸುತ್ತಮುತ್ತಲಿನ ಜಮೀನಿನಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು. ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಹುಲಿ ಸೆರೆಗೆ ಆಗ್ರಹ
ತಕ್ಷಣ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮವಹಿಸಬೇಕೆಂದು ನೇರಳಕುಪ್ಪೆ ಮಹದೇವ್ ಹಾಗೂ ಗ್ರಾ.ಪಂ.ಸದಸ್ಯ ಕುಮಾರ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.