ಹುಲಿ ಸಂಖ್ಯೆಯಷ್ಟು ಬೇಕಿದೆ ಸರಹದ್ದು ವೃದ್ಧಿ
ಸುಧಾರಣೆಯತ್ತ ಹುಲಿ ಸಂತತಿ • ನಾಲ್ಕು ವರ್ಷಗಳಿಂದೀಚೆಗೆ 116 ಹುಲಿಗಳ ಹೆಚ್ಚಳ • ಸಂರಕ್ಷಣೆಗೆ ಮತ್ತಷ್ಟು ಬೇಕು ಬಿಗಿ ಕ್ರಮ
Team Udayavani, Jul 30, 2019, 3:04 PM IST
ಮೈಸೂರು: ಕಳೆದ ಮೂರು ಬಾರಿಯ ಹುಲಿ ಗಣತಿಯಲ್ಲಿ ಅಗ್ರ ಪಂಕ್ತಿ ಕಾಯ್ದುಕೊಂಡಿದ್ದ ಕರ್ನಾಟಕ ಈ ಬಾರಿ 2ನೇ ಸ್ಥಾನಕ್ಕೆ ಬಂದರೂ ರಾಜ್ಯದಲ್ಲಿ ಹುಲಿಗಳ ಸಂತಾನ ವೃದ್ಧಿ ಸಕರಾತ್ಮಕವಾಗಿದ್ದು, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಮುಂದಿನ ಸವಾಲಾಗಿದೆ.
1973ರಲ್ಲಿ ಹುಲಿ ಯೋಜನೆ ಕೈಗೆತ್ತಿಕೊಂಡ ನಂತರ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಕರ್ನಾಟಕದಲ್ಲಿ ಇನ್ನು ಹೆಚ್ಚಿನ ಹುಲಿಗಳು ವಾಸಿಸುವಷ್ಟು ಅರಣ್ಯ ಪ್ರದೇಶ ವಿದ್ದು, ಅವುಗಳನ್ನು ಸಂರಕ್ಷಣೆ ಮಾಡಬೇಕಾದ ತುರ್ತು ಅಗತ್ಯವಿದೆ.
ರಾಜ್ಯದ ಅರಣ್ಯ ಪ್ರದೇಶದಲ್ಲಿ ಇಲಾಖೆ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕಳೆದ ಅವಧಿಯಲ್ಲಿ 406 ಇದ್ದ ಹುಲಿಗಳ ಸಂಖ್ಯೆ ಈ ವರ್ಷ 524ಕ್ಕೆ ಏರಿಕೆ ಕಂಡಿದೆ. ಮಧ್ಯಪ್ರದೇಶದಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚಿನ ಅರಣ್ಯ ಪ್ರದೇಶವಿದ್ದು, ಬಫರ್ ಜೋನ್, ಸಂರಕ್ಷಿತ ವನ್ನು ಹೆಚ್ಚು ಮಾಡಿದ್ದಾರೆ. ಅವರು ಕೈಗೊಂಡ ಸಂರಕ್ಷಣ ಕ್ರಮ ಮತ್ತು ಅಧ್ಯಯನದಿಂದಾಗಿ ಹುಲಿ ಗಳನ್ನು ಹೆಚ್ಚು ಸಂಖ್ಯೆಯಲ್ಲಿ ಗುರುತಿಸಲು ಸಾಧ್ಯವಾ ಗಿದೆ ಎಂಬುದು ವನ್ಯಪ್ರೇಮಿಗಳ ಅಭಿಪ್ರಾಯ.
ಮಾನವ ಹಸ್ತಕ್ಷೇಪ, ಕಾಡುಗಳ ಒತ್ತುವರಿ, ಅಭಿವೃದ್ಧಿ ಚಟುವಟಿಕೆಗಳು, ಪ್ರವಾಸಿಗರ ಭೇಟಿ, ಕಳ್ಳಬೇಟೆ, ಸರಹದ್ದು ಕೊರತೆ ಮುಂತಾದ ಅಂಶಗಳಿಂದ ಹುಲಿಗಳ ಸಂಖ್ಯೆ ಕಡಿಮೆಯಾಗುವ ಅಪಾಯವಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಮಾನವ ಹಸ್ತಕ್ಷೇಪ ತಗ್ಗಿಸಿ: ಜೀವ ವೈವಿಧ್ಯ ತಾಣ, ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿ ಧಾಮಗಳಲ್ಲಿ ಇಂದಿಗೂ ಆದಿವಾಸಿ ಸಮುದಾಯ ವಾಸಿಸುತ್ತಿರು ವುದು ಹುಲಿಗಳ ಸುಗಮ ಜೀವನಕ್ಕೆ ಸಮಸ್ಯೆಯಾಗಿದೆ. ತನ್ನ ಸರಹದ್ದಿನಲ್ಲಿ ಹುಲಿ ಸ್ವಚ್ಛಂದವಾಗಿ ಬದುಕಲು ಮಾನವನ ಹಸ್ತಕ್ಷೇಪ ಅಡ್ಡಿಯಾಗಿದೆ. ಜೊತೆಗೆ ಒತ್ತಡ ಉಂಟಾಗುತ್ತಿರುವುದು ಹುಲಿಗಳ ವಂಶಾಭಿವೃದ್ದಿಗೆ ಮಾರಕವಾಗಿದೆ. ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕಾಡಿನಲ್ಲಿರುವವರಿಗೆ ಅಗತ್ಯ ಸೌಲಭ್ಯ ನೀಡಿ ಕಾಡಿ ನಿಂದ ಹೊರಗಿಡುವ ಪ್ರಯತ್ನ ಮಾಡಬೇಕು ಎಂಬುದು ಹಿರಿಯ ನಿವೃತ್ತ ಅರಣ್ಯಾಧಿಕಾರಿಗಳ ಸಲಹೆ.
ಸಂರಕ್ಷಣೆ ಹೆಚ್ಚಬೇಕು: ನಾವುಗಳು ಹುಲಿ ಗಣತಿಯ ಅಂಕಿಅಂಶಗಳನ್ನು ನೋಡಿ ತೃಪ್ತಿಪಡುವಂತಿಲ್ಲ. ಪ್ರಸ್ತುತ ರಾಜ್ಯದಲ್ಲಿ 524 ಹುಲಿಗಳಿವೆ ಎಂದು ಹೇಳಲಾಗಿದೆ. ಆದರೆ, ಅವುಗಳಿಗೆ ಅಗತ್ಯವಿರುವಷ್ಟು ಜಾಗ ಇದೆಯೇ ಎಂಬುದನ್ನು ನಾವು ಗಮನಿಸಬೇಕಿದೆ. ಒಂದು ಹುಲಿ ವಾಸಿಸಲು ನಿರ್ದಿಷ್ಟ ಆಹಾರ ಮತ್ತು ಸ್ಥಳ ಬೇಕು. ಜೊತೆಗೆ ಒಂದು ಹುಲಿಗೆ ಕನಿಷ್ಠ 50 ರಿಂದ 60 ಕಿ.ಮೀ. ವಿಸ್ತೀರ್ಣದ ಕಾಡು ಅಗತ್ಯ. ಅಲ್ಲಿ ಅವುಗಳಿಗೆ ಬದುಕು ನಡೆಸಲು ಸಾಧ್ಯವಾಗುವಷ್ಟು ಆಹಾರವೂ ಬೇಕು. ಆದರೆ, ಈಗಿರುವ ಹುಲಿಗಳಿಗೆ ಸರಹದ್ದು ಸಾಲದಾ ಗಿದೆ. ಪರಿಣಾಮ ಅಕ್ಕಪಕ್ಕದ ಹುಲಿಗಳೊಂದಿಗೆ ಸೆಣಸಾಡಿ ಸಾಯುವಂತಹ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ಹುಲಿ ಸಂರ ಕ್ಷಣೆಯೊಂದಿಗೆ, ಅರಣ್ಯ ಸಂರಕ್ಷಣೆಯೂ ಆಗಬೇಕಿದೆ.
ಅಭಿವೃದ್ಧಿ ಚಟುವಟಿಕೆ ನಿಲ್ಲಿಸಿ: ಸರ್ಕಾರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದ್ದರೂ, ಮಾನವರ ಓಡಾಟ, ಯಂತ್ರಗಳ ಬಳಕೆ ನಿಂತಿಲ್ಲ. ಜೊತೆಗೆ ರಸ್ತೆ ಅಭಿವೃದ್ಧಿಯಂತಹ ಕಾರ್ಯಗಳನ್ನು ನಿಲ್ಲಿಸಬೇಕಿದೆ. ಜೊತೆಗೆ ತಪಾಸಣಾ ಕೇಂದ್ರ, ಗಸ್ತು ವ್ಯವಸ್ಥೆ ಹೆಚ್ಚಿಸುವ ಅಗತ್ಯವಿದೆ.
ಕಾಳ್ಗಿಚ್ಚು ನಿಯಂತ್ರಿಸಿ: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಆಗಾಗ್ಗೆ ಕಾಳ್ಗಿಚ್ಚು ಮತ್ತು ಮಾನವ ನಿರ್ಮಿತ ಬೆಂಕಿಗಳು ಕಾಣಿಸಿಕೊಳ್ಳುತ್ತಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಾಡಿಗೆ ಬೆಂಕಿ ಬಿದ್ದ ಸಂದರ್ಭ ಹುಲಿಗಳು ಮೃತಪಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಬಗ್ಗೆ ಇಲಾಖೆ ಜಾಗ್ರತೆ ವಹಿಸಬೇಕಿದೆ.
ಸಮುದಾಯ ಪಾಲ್ಗೊಳ್ಳುವಿಕೆ: ಜನಸಾಮಾನ್ಯರಲ್ಲಿ ಹುಲಿಯ ಬಗ್ಗೆ ಭೀತಿಯಿದೆ. ಈ ನಿಟ್ಟಿನಲ್ಲಿ ಇಲಾಖೆ ಮತ್ತು ಸರ್ಕಾರ ಹುಲಿಗಳ ಬಗ್ಗೆ ಮತ್ತು ಅದರ ಜೀವನ ಶೈಲಿಯ ಬಗ್ಗೆ ತಿಳಿವಳಿಕೆ ನೀಡಬೇಕು. ಜೊತೆಗೆ ಹುಲಿ ಸಂರಕ್ಷಣೆಯಲ್ಲಿ ಜನ ಸಮುದಾಯವೂ ಪಾಲ್ಗೊಳ್ಳು ವಂತೆ ಮಾಡಬೇಕಿದೆ.
● ಸತೀಶ್ ದೇಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.