ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು
Team Udayavani, Jul 29, 2021, 10:45 PM IST
ಹುಣಸೂರು: ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಆಯ ತಪ್ಪಿ ಬಿದ್ದವನನ್ನು ರಕ್ಷಿಸಲು ಹೋದವ ಸೇರಿದಂತೆ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗುರುಪುರದಲ್ಲಿ ನಡೆದಿದೆ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗುರುಪುರ ಬಳಿಯ ಹಳೆ ವಾರಂಚಿಯ ಅನ್ವರ್ ಬೇಗ್ ಪುತ್ರ ಅಬ್ಜಲ್ (24) ಹಾಗೂ ರಜಾಕ್ ಖಾನ್ ಪುತ್ರ ರಾಜಿಕ್ ಖಾನ್ (30) ಮೃತರು. ಅಬ್ಜಲ್ ಅವಿವಾಹಿತನಾಗಿದ್ದು, ರಾಜಿಕ್ ಖಾನ್‌ರಿಗೆ ಪತ್ನಿ, ಮೂರು ವರ್ಷದ ಪುತ್ರಿ ಇದ್ದಾಳೆ..
ಆಗಿರೋದಿಷ್ಟು: ಹಳೆ ವಾರಂಚಿ ಗ್ರಾಮದ ಬಳಿಯ ಗುರುಪುರ ಕೆರೆಯಲ್ಲಿ ಗುರುವಾರ ಮದ್ಯಾಹ್ನ ಅಬ್ಜಲ್ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಹಗ್ಗ ಸಿಲುಕಿ ನೀರಿಗೆ ಎಳೆದೊಯ್ದಿದೆ. ನೀರಿಗೆ ಬೀಳುತ್ತಿದ್ದಂತೆ ರಾಜಿಕ್ ಖಾನ್ ಆತನನ್ನು ರಕ್ಷಿಸಲು ಹೋಗಿ ಸಾದ್ಯವಾಗದೇ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಶಿಲ್ಪಾ ಶೆಟ್ಟಿ
ಜಾನುವಾರುಗಳು ಮಾತ್ರ ಇದ್ದುದನ್ನು ಕಂಡ ಇತರೆ ದನಗಾಹಿಗಳು ಕೆರೆ ಬಳಿ ನೋಡಲಾಗಿ ಚಪ್ಪಲಿಗಳು ಇದ್ದುದ್ದನ್ನು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ ಮೇರೆಗೆ ಕೆರೆಗಿಳಿದು ಇಬ್ಬರ ಶವವನ್ನು ಹೊರ ತೆಗೆದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿ ಭೇಟಿ ನೀಡಿದ್ದರು. ಹುಣಸೂರಿನ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿದ್ದು, ಗುರುವಾರ ರಾತ್ರಿಯೇ ಹಳೇ ವಾರಂಚಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಇಬ್ಬರ ಸಾವಿಗೆ ಕಂಬನಿ ಮಿಡಿದಿರುವ ಶಾಸಕ ಎಚ್.ಪಿ.ಮಂಜುನಾಥ್ ಸಂತಾಪ ಸೂಚಿಸಿದರು.
ಮೃತರ ಎರಡು ಬಡ ಕುಟುಂಬಗಳಾಗಿದ್ದು, ಮಕ್ಕಳ ಸಾವಿನಿಂದ ಇಡೀ ಕುಟುಂಬದಲ್ಲಿ ದು:ಖ ಮಡುಗಟ್ಟಿದೆ. ಆಕ್ರಂದನ ಮುಗಿಲು ಮುಟ್ಟಿತ್ತು. ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಾವಿಗೆ ಗುಂಡಿ ಕಾರಣ;
ಕೆರೆಯಲ್ಲಿ ಮಣ್ಣಿಗಾಗಿ ಅಲ್ಲಲ್ಲಿ ದೊಡ್ಡ ಹೊಂಡಗಳನ್ನಾಗಿಸಿದ್ದು, ಈ ಸಾವಿಗೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದು, ಅಕ್ರಮವಾಗಿ ಮಣ್ಣು ತೆಗೆದು ಹೊಂಡ ಮಾಡಿರುವವರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.