ರಂಗಾಯಣದಲ್ಲಿ ಕಲಾಕೃತಿಗಳ ಅನಾವರಣ
Team Udayavani, Nov 16, 2018, 12:09 PM IST
ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ ರಂಗಾಯಣದ ಆವರಣದಲ್ಲಿ ಕಲಾವಿದರ ಕೈಚಳಕದಲ್ಲಿ ಅರಳಿರುವ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯಿತು.
ರಂಗಾಯಣದಲ್ಲಿ ನಡೆಯುವ ರಾಮಾಯಣ ದರ್ಶನಂ ನಾಟಕ ಪ್ರದರ್ಶನದ ಪ್ರಯುಕ್ತ ರಂಗಾಯಣಕ್ಕೆ ಬರುವ ಕಲಾಸಕ್ತರನ್ನು ಆಕರ್ಷಿಸುವ ಸಲುವಾಗಿ ರಾಮಾಯಣದ ದೃಶ್ಯಗಳನ್ನು ಕಟ್ಟಿಕೊಡುವಂತಹ 12 ಕಲಾಕೃತಿಗಳನ್ನು ರಂಗಾಯಣದ ಅಂಗಳದಲ್ಲಿ ಅನಾವರಣ ಮಾಡಲಾಗಿದೆ.
ಅಂತಾರಾಷ್ಟ್ರೀಯ ಬಿಲ್ವಿದ್ಯೆಪಟುಗಳಾದ ದೀಕ್ಷಿತ್ ರಾಜ್ ಹಾಗೂ ವೆಂಕಟೇಶ್ವರ ಪ್ರಸಾದ್, ಬಾಣ ಬಿಡುವ ಮೂಲಕ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕಲಾವಿದ ರಘುಪತಿ ಭಟ್ ಕೈಚಳಕದಲ್ಲಿ ಗಂಜೀಫ ಕಲೆಯಲ್ಲಿ ಮೂಡಿಬಂದಿದ್ದ ಕಲಾಕೃತಿಗಳಲ್ಲಿ ದಶರಥ ಮಕ್ಕಳನ್ನು ಪಡೆಯುವ ಸಲುವಾಗಿ ನಡೆಸಿದ ಪುತ್ರ ಕಾಮಿಷ್ಠಯಾಗ,
ಸೀತಾ ಸ್ವಯಂವರದಲ್ಲಿ ಬಿಲ್ಲು ಮುರಿಯುತ್ತಿದ್ದ ರಾಮನನ್ನು ಜನಕರಾಜ, ಲಕ್ಷ್ಮಣ, ಶತಾನಂದ, ವಿಶ್ವಾಮಿತ್ರರು ವೀಕ್ಷಿಸುತ್ತಿರುವುದು. ಜತೆಗೆ ರಾಮ, ಲಕ್ಷ್ಮಣ, ಸೀತೆ ಒಟ್ಟಾಗಿ ವನವಾಸಕ್ಕೆ ಹೋಗುವಾಗ ನಾವಿಕನೊಬ್ಬ ದೋಣಿಯಲ್ಲಿ ಗಂಗಾನದಿ ದಾಟಲು ಕರೆದೊಯ್ಯುತ್ತಿದ್ದ ದೃಶ್ಯಗಳ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಇದರೊಂದಿಗೆ ನೈಜ ಬದುಕಿನಲ್ಲಿ ರಾಮನನ್ನು ನಾವು ಸಾಧಾರಣ ಮನುಷ್ಯನಾಗಿ, ಬಡಗಿಯಾಗಿ, ಶೇಷನಾಗಿ, ರಾಜನಾಗಿ ಕಾಣುವಾಗ ರಾಮ ಹೇಗಿರುತ್ತಾನೆ ಎಂಬುದು ಕಲಾವಿದ ದ್ವಾರಕಿ ಅವರ ಚಿತ್ರಕಲೆಯಲ್ಲಿ ಮೂಡಿಬಂದಿತು. ನೇಪತ್ಯ ರಾಮಾಯಣ ಚಿತ್ರಕಲಾ ಪ್ರದರ್ಶನಕ್ಕೆ ಛಾಯಾಗ್ರಾಹಕ ನೇತ್ರರಾಜು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಜಂಟಿ ಕಾರ್ಯದರ್ಶಿ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಬಿಲ್ವಿದ್ಯೆ ತರಬೇತುದಾರ ಅನಿಲ್ ಕುಮಾರ್, ರಂಗಭೂಮಿ ಕಲಾವಿದ ಪ್ರಶಾಂತ್ ಹಿರೇಮಠ, ಕಲಾವಿದ ದ್ವಾರಕಿ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.