ಜನಸೇವೆಯಲ್ಲೇ ಶಿವಪೂಜೆ ಕಂಡವರು ವಿಭೂತಿ ಪುರುಷರು
Team Udayavani, Feb 4, 2019, 7:24 AM IST
ಮೈಸೂರು: ಜನಸೇವೆಯಲ್ಲೇ ಶಿವಪೂಜೆಯನ್ನು ಕಂಡ ವಿಭೂತಿ ಪುರುಷರು ಈ ನೆಲದಲ್ಲಿ ದೇವರಾದರು, ನರ ನಾರಾಯಣನಾಗುವ ಸಾಧ್ಯತೆ ಇದ್ದರೆ ಅದು ಭಾರತದಲ್ಲಿ ಮಾತ್ರ. ಅದಕ್ಕೇ ಭಾರತವನ್ನು ಕರ್ಮಭೂಮಿ ಎಂದು ಕರೆಯಲಾಗುತ್ತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗ್ಡೆ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಸುತ್ತೂರಿನ ಈ ನೆಲದಲ್ಲಿ ವಿಭೂತಿ ಪುರುಷರು ನಡೆದಾಡುತ್ತಿದ್ದರು ಎಂಬುದೇ ಭಕ್ತಿ. ಭಾರತೀಯರಿಗೆ ಇಂದು ಸಭ್ಯತೆಯ ಪಾಠ ಹೇಳಿಕೊಡುವ ಪುಸ್ತಕಗಳ್ಯಾವುವು ಅಂದು ಬಿಡುಗಡೆಯಾಗಿರಲಿಲ್ಲ. ಆ ಸಂದರ್ಭದಲ್ಲೇ ಈ ನೆಲದಲ್ಲಿ ದೈವಿಕ ಪುರುಷರಿದ್ದರು, ಇತಿಹಾಸದ ಪುಟಗಳಿಗೇ ನನ್ನ ಬದುಕು ಬರೆದುಕೊಳ್ಳುವಂತೆ ಹೇಳಿದರು. ಇದೇ ಭಾರತದ ಹಿರಿಮೆ. ಈ ಪವಿತ್ರ ನೆಲದಲ್ಲಿ ಮಕ್ಕಳಾಗಿ ಹುಟ್ಟಿರುವ ನಾವು ಈ ನೆಲಕ್ಕೆ ಹಣೆಯನ್ನು ಸ್ಪರ್ಶ ಮಾಡುವುದೇ ಜೀವನದ ಧನ್ಯತೆ ಎಂದರು.
ಜಾತ್ರೆ ಎಂದರೆ ಮನರಂಜನೆ, ಉತ್ಸುಕತೆ, ಸಂಭ್ರಮ, ಸಡಗರ ಕೆಲವರಿಗೆ. ಆದರೆ ನಮ್ಮ ಹಿರಿಯರು ಸಾವಿರಾರು ಜನರು ಒಟ್ಟಿಗೆ ಸೇರಿಸಲು ಜಾತ್ರೆಗಳನ್ನು ಆರಂಭಿಸಿದರು. ಈ ರೀತಿ ಸಾವಿರಾರು ಜನರು ಒಟ್ಟಾಗಿ ಸೇರಿ ಆಚರಿಸುವುದೇ ಶಿವತ್ವ ಎಂದು ಅವರು ಹೇಳಿದರು. ಚಿತ್ರಗಳಲ್ಲಿ ಕಾಣುವ ಶಿವನಿಗೆ ರೂಪ ಕೊಟ್ಟಿರುವುದು ನಾವು. ಆದರೆ, ಶಿವನ ರೂಪ ಗಂಧ, ರಸವನ್ನೂ ಮೀರಿದ್ದು, ಧನಾತ್ಮಕವಾದ ಮಂಗಲಮಯವಾದ ಶಕ್ತಿಯೇ ಶಿವತ್ವ. ಧನಾತ್ಮಕತೆಯೆಡೆಗೆ ಹೆಜ್ಜೆ ಇಡುವುದು, ಧ್ಯಾನಸ್ಥ ಸ್ಥಿತಿಯಲ್ಲಿರುವುದೇ ಶಿವಪೂಜೆ.
ಧರ್ಮ ಎಂಬುದು ಅರ್ಥವಾಗದ ಶಬ್ದ, ನಿಘಂಟಲ್ಲ. ಅದೊಂದು ಬದುಕಿನ ಶೈಲಿ. ಬದುಕಿನ ಶೈಲಿ ಸಮಗ್ರವಾಗಿರುವುದೇ ಧರ್ಮ. ಇಂತಹ ಧರ್ಮದ ಹಾದಿಯಲ್ಲಿ ನಡೆದವರನ್ನು ವಿಭೂತಿ ಪುರುಷರೆಂದು ಗೌರವಿಸುತ್ತೇವೆ. ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಬದುಕಿದ್ದಾಗ ನಾವು ಇದ್ದೆವು ಎಂಬುದೇ ನಮ್ಮ ಜೀವನದ ಧನ್ಯತೆ ಎಂದು ಹೇಳಿದರು.
ದಯೆ ಧರ್ಮದ ಮೂಲ: ಉಪನ್ಯಾಸ ನೀಡಿದ ಮೈಸೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ರೆ.ಲೆಸ್ಲಿ ಮೊರಾಸ್, ದಯೆಯೇ ಧರ್ಮದ ಮೂಲವಯ್ಯ ಎಂದು ವಚನಕಾರರು ಹೇಳಿದ್ದಾರೆ. ಎಲ್ಲಾ ಧರ್ಮಗಳ ಸಾರವು ಇದೆ. ಈ ಪ್ರಪಂಚದಲ್ಲಿ ನಾವೆಲ್ಲರೂ ಯಾತ್ರಿಗಳು, ಹೀಗಾಗಿ ಪ್ರೀತಿ ಎಲ್ಲರಿಗೂ ಅಗತ್ಯ. ಧರ್ಮ, ಭಾಷೆ, ಸಂಸ್ಕೃತಿಗಳು ನಮ್ಮನ್ನು ವಿಭಜಿಸುತ್ತವೆ. ಸನ್ಮಾರ್ಗದಲ್ಲಿ ನಡೆದು ಪರೋಪಕಾರದಿಂದ ಕೈಲಾಸವನ್ನು ಕಾಣಬಹುದು. ಈ ಮೂಲಕ ಸಮಾಜವನ್ನು ಬೆಸೆಯಬಹುದು ಎಂದರು.
ಕೇಡು ಬಯಸಬೇಡಿ: ಕುಂದೂರು ಮಠದ ಡಾ.ಶರತಶ್ಚಂದ್ರ ಸ್ವಾಮೀಜಿ ಮಾತನಾಡಿ, ಧರ್ಮ ಎಂಬುದು ನಮ್ಮನ್ನು ಸುಮ್ಮನಿರಿಸುವ ಸಾಧನವಾಗದೆ ನಮ್ಮನ್ನು ಒಡೆದು ಜಗಳಗಳನ್ನು ತಂದಿಟ್ಟಿದೆ. ವಿಘಟನೆ ಇದ್ದ ಕಡೆ ಧರ್ಮ ಇರಲ್ಲ. ವಾದ-ವಿವಾದಗಳಿಂದ ಮೀರಿದ್ದು ಧರ್ಮ, ಮತ್ತೂಬ್ಬರಿಗೆ ಕೆಡಕು ಬಯಸಿದಿರುವುದೇ ಧರ್ಮ. ಆದರೆ, ಇಂದು ಧರಿಸಿದ ವೇಷದಂತೆ ಆಚರಣೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಕಾಷಾಯ ಧರಿಸಿದವರೆಲ್ಲ ಸನ್ಯಾಸಿಗಳಾಗಿರಲ್ಲ. ಖಾದಿ ಧರಿಸಿದವರೆಲ್ಲ ರಾಜಕಾರಣಿಗಳಾಗಿಲ್ಲದಿರುವುದು ದುರಂತ ಎಂದು ಅವರು ತಿಳಿಸಿದರು.
ಸುತ್ತೂರು ಶ್ರೀ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹುಬ್ಬಳ್ಳಿ ವರೂರಿನ ಶ್ರೀಕ್ಷೇತ್ರ ನವಗ್ರಹ ತೀರ್ಥ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ನ್ಯೂಜೆರ್ಸಿಯ ಅಂತಾರಾಷ್ಟ್ರೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಹಿರಿಯ ಉಪಾಧ್ಯಕ್ಷ ಡಾ.ಜೇಮ್ಸ್ ಸಿ.ಗ್ರಿಪಿಥ್ಸ್, ಶಾಸಕ ಅಮರೇಗೌಡ ಬಯ್ನಾಪುರ, ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಸಂಸದ ಎಲ್.ಆರ್.ಶಿವರಾಮೇಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿವರಾತ್ರೀಶ್ವರ ಪಂಚಾಗವನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.