ವಿದೇಶಿ ಹಾಲು ಬಂದರೆ ಮಹಿಳೆಯರೂ ಆತ್ಮಹತ್ಯೆ
Team Udayavani, Oct 24, 2019, 3:00 AM IST
ಮೈಸೂರು: ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳ ಹಾಲು ಮತ್ತು ಹಾಲಿನ ಉತ್ಪನ್ನಗಳು ಭಾರತಕ್ಕೆ ದಾಳಿ ಮಾಡಲಿದ್ದು, ಈ ಹಾಲಿನ ಯುದ್ಧದಲ್ಲಿ ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ನಾಶವಾಗಿ, ಮಹಿಳೆಯರೂ ಆತ್ಮಹತ್ಯೆಗೆ ಶರಣಾಗತೊಡಗುತ್ತಾರೆ ಎಂದು ಸಾಹಿತಿ ದೇವನೂರ ಮಹಾದೇವ ಆತಂಕ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರು ಮಾತ್ರ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಸರ್ಕಾರ ಚಿಂತಿಸಿ ಈ ಒಪ್ಪಂದಕ್ಕೆ ಸಹಿ ಹಾಕುತ್ತಿರಬಹುದೇ ಎಂದು ಪ್ರಶ್ನಿಸಿದರು.
ಆರ್ಥಿಕತೆ ಕುಸಿತ: ಮನುಷ್ಯನ ಕೃತ್ಯದ ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿ ಕುಪಿತಗೊಂಡು ನೆರೆ, ಪ್ರವಾಹದಿಂದ ಜನರ ಬದುಕು ಮುಳುಗಡೆಯಾಗುತ್ತಿದೆ. ಪಕ್ಕದಲ್ಲೇ ಮಳೆ ಇಲ್ಲದೆ ಬೆಳೆ, ಜನ ಒಣಗಿ ಹೋಗುತ್ತಿದ್ದಾರೆ, ಸಾಯುತ್ತಿದ್ದಾರೆ. ಜೊತೆಗೆ ಭಾರತದ ಆರ್ಥಿಕತೆ ಕುಸಿಯುತ್ತಿದೆ.
ಉದ್ಯೋಗಗಳು ಕುಸಿಯುತ್ತಿವೆ. ಈ ಕುಸಿಯುತ್ತಿರುವ ಭಾರತದ ಮೇಲೆ ಮೋದಿ-ಶಾ ದ್ವಯರು ಪೂತನಿ ಬಂಡವಾಳಶಾಯಿ ಜೊತೆಗೂಡಿಕೊಂಡು ಕುಣಿದು ಕುಪ್ಪಳಿಸಿ ತುಳಿದು ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಾಟ ಮಾಡಿಕೊಂಡು ಸರ್ಕಾರದ ಜೀವನ ಸಾಗಿಸುವುದು ಹೆಚ್ಚುತ್ತಿದೆ. ಇದರಿಂದಲೂ ಉದ್ಯೋಗ ಉದುರಿ ಹೋಗುತ್ತಿದೆ. ಆತ್ಮಹತ್ಯೆ ಹೆಚ್ಚುತ್ತಿದೆ.
ಕೇಂದ್ರ ಸರ್ಕಾರ 16 ದೇಶಗಳ ನಡುವೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರಕ್ಕೆ ಹೆಬ್ಬೆಟ್ಟು ಒತ್ತಲು ಸಿದ್ಧವಾಗಿದೆ. ಸಂಸತ್ತಿನ ಮುಂದೆ ಇಡದೆ, ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗುಟ್ಟಾಗಿ ಈ ಕೊಲೆ ಸಂಚು ಜರುಗುತ್ತಿದೆ. ಭಾರತದಲ್ಲಿ ಸಣ್ಣ ಸಣ್ಣ ರೈತರು ಮತ್ತು ಕೆಲವು ಜನರು ಹಾಲು ಉತ್ಪಾದನೆಯಲ್ಲಿ ತೊಡಗಿ ಇದನ್ನೆ ತಮ್ಮ ಜೀವನಧಾರ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ಮಹಿಳೆಯರ ಬದುಕು ಇದನ್ನು ಅವಲಂಬಿಸಿಯೇ ಉಸಿರಾಡುತ್ತಿದೆ ಎಂದರು.
ಮಾನವೀಯ ಸ್ಪಂದನೆ: ಇಥಿಯೋಪಿಯಾದ ಪ್ರಧಾನಿ ಅಹಮದ್, ಹಸಿವಿನಿಂದ ಎಲುಬಿನ ಗೂಡಾಗಿದ್ದ ದೇಶವನ್ನು ಎರಡೇ ವರ್ಷದಲ್ಲಿ ಯುದ್ಧವಿಲ್ಲದೆ ಎಲ್ಲವನ್ನು, ಎಲ್ಲರನ್ನೂ ಗೆದ್ದುಕೊಳ್ಳುತ್ತಾರೆೆ. ಇದಕ್ಕೆ 52 ಇಂಚಿನ ಎದೆಯಲ್ಲ, ಆ ಎದೆ ಒಳಗಿರುವ ಹೃದಯದೊಳಗೆ ಮಾನವೀಯ ಸ್ಪಂದನೆಗಳು ಬೇಕು ಅಷ್ಟೇ ಎಂದು ಹೇಳಿದರು.
ಆಹಾರ ಭದ್ರತೆ ಮೇಲೆ ಪರಿಣಾಮ: ಜನಾಂದೋಲನ ಮಹಾ ಮೈತ್ರಿಯ ಎಸ್.ಆರ್.ಹಿರೇಮಠ ಮಾತನಾಡಿ, ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಕೈಗಾರಿಕಾ ವಲಯ, ಆಹಾರ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ. ಪ್ರಧಾನಿ ನರೇಂದ್ರ ಮೋದಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ವಿಷಯದಲ್ಲಿ ಸಮಗ್ರ ಪರಿಕಲ್ಪನೆ ಮೂಡಿದಂತಿಲ್ಲ ಎಂದರು.
ಅನುಮಾನಾಸ್ಪದ ನಡೆ: ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮುಕ್ತ ವ್ಯಾಪಾರವನ್ನು ಅಂತಾರಾಷ್ಟ್ರೀಯ ಒಪ್ಪಂದವನ್ನು ಸಂಸತ್ತಿನಲ್ಲಿ ಚರ್ಚೆ ಮಾಡದೆ ಕಂಪನಿ ವ್ಯವಹಾರದಂತೆ ಮಾಡಿಕೊಳ್ಳುತ್ತಿರುವುದು ಪ್ರಜಾತಾಂತ್ರಿಕ ನಡೆಯಲ್ಲ. ಆರೆಸ್ಸೆಸ್, ಸ್ವದೇಶಿ ಜಾಗರಣ ಮಂಚ್‌ನವರು ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಅನುಮಾನ ಮೂಡಿಸಿದೆ. ಅವರಿಗೆ ನಿಜವಾದ ಕಾಳಜಿ ಇದ್ದಲ್ಲಿ ಬೀದಿಗಿಳಿದು ಹೋರಾಡಬೇಕಿತ್ತು ಎಂದರು.
ಎಐಡಿವೈಒನ ಚಂದ್ರಶೇಖರ ಮೇಟಿ, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಅಭಿರುಚಿ ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಇಂದು ದನಗಳ ನೇತೃತ್ವದಲ್ಲಿ ಪ್ರತಿಭಟನೆ
ಮೈಸೂರು: ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಗುರುವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದನಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರಿನಲ್ಲಿ ಬೆಳಗ್ಗೆ 11ಗಂಟೆಗೆ ನಗರದ ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ದನಗಳ ಮೆರವಣಿಗೆ ನಡೆಸಿ ಪ್ರತಿಭಟನಾ ಸತ್ಯಾಗ್ರಹ ನಡೆಸಲಾಗುವುದು, ನಮ್ಮ ಈ ಹೋರಾಟಕ್ಕೆ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಕೂಡ ಕೈಜೋಡಿಸಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.