ಮೈಸೂರು ಜಿಪಂನಲ್ಲಿ ಜೆಡಿಎಸ್ ದೋಸ್ತಿ ಯಾರು?
Team Udayavani, Jan 11, 2019, 6:10 AM IST
ಮೈಸೂರು: ಕಡೆಗೂ ನಯಿಮಾ ಸುಲ್ತಾನ ರಾಜೀನಾಮೆ ಅಂಗೀಕಾರವಾಗಿ ಹಂಗಾಮಿ ಅಧ್ಯಕ್ಷರ ಅಧಿಕಾರ ಸ್ವೀಕಾರದೊಂದಿಗೆ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಮತ್ತೂಂದು ಸುತ್ತಿನ ರಾಜಕೀಯ ಪ್ರಹಸನಕ್ಕೆ ವೇದಿಕೆ ಸಜ್ಜಾಗಿದೆ. 49 ಸದಸ್ಯ ಬಲದ ಮೈಸೂರು ಜಿಪಂನಲ್ಲಿ 23 ಸದಸ್ಯ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಿಡಿಯಲು ಬೇಕಾದ ಬಹುಮತ ಇಲ್ಲ.
2016ರ ಮೇ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ 18 ಸದಸ್ಯರನ್ನು ಹೊಂದಿರುವ ಜೆಡಿಎಸ್ ಮತ್ತು 8 ಸದಸ್ಯರನ್ನು ಹೊಂದಿರುವ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳುವ ಮೂಲಕ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಜಿಪಂ ಅಧಿಕಾರ ಸಿಗದಂತೆ ನೋಡಿಕೊಂಡಿದ್ದರು. ಜಿಪಂ ಅಧ್ಯಕ್ಷರಾಗಿ ಜೆಡಿಎಸ್‌ನ ನಯಿಮಾ ಸುಲ್ತಾನ, ಉಪಾಧ್ಯಕ್ಷರಾಗಿ ಬಿಜೆಪಿಯ ಜಿ.ನಟರಾಜ್ ಅಧಿಕಾರವಹಿಸಿಕೊಂಡಿದ್ದರು.
ಈ ಮಧ್ಯೆ ಜಿಪಂ ಸದಸ್ಯರಾಗಿದ್ದ ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್ ಶಾಸಕರಾಗಿ ಚುನಾಯಿತರಾಗಿರುವುದರಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಅನಿಲ್ ಚಿಕ್ಕಮಾದು ತೆರವು ಮಾಡಿದ ಹನಗೋಡು ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದರೆ, ಅಶ್ವಿನ್‌ಕುಮಾರ್ ಪ್ರತಿನಿಧಿಸಿದ್ದ ಸೋಮನಾಥ ಪುರ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಸಂಖ್ಯಾಬಲ 23ಕ್ಕೇರಿದರೆ, ಜೆಡಿಎಸ್ ಸದಸ್ಯ ಬಲ 17ಕ್ಕೆ ಇಳಿದಿದೆ. ಪಕ್ಷೇತರ ಸದಸ್ಯರಾಗಿದ್ದ ದಯಾನಂದ ಮೂರ್ತಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ.
ಮೊದಲ 20 ತಿಂಗಳ ಅವಧಿಗೆ ನಯಿಮಾ ಸುಲ್ತಾನ, ನಂತರದ 40 ತಿಂಗಳು ಪರಿಮಳಾ ಶ್ಯಾಂ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದು ಎಂದು ಜೆಡಿಎಸ್ ಪಕ್ಷದೊಳಗಿನ ಆಂತರಿಕ ಒಪ್ಪಂದವಾಗಿತ್ತು. ಆದರೆ, ಬೇರೆ ಬೇರೆ ಚುನಾವಣೆಗಳು ಎದುರಾಗಿದ್ದರಿಂದ ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಐದಾರು ತಿಂಗಳ ಕಾಲ ನಾನು ಕಾರ್ಯಭಾರ ಮಾಡಲಾಗಲಿಲ್ಲ ಎಂಬ ಕಾರಣಗಳನ್ನು ಮುಂದಿಟ್ಟು, ಪಕ್ಷದ ನಾಯಕರ ಮಾತಿಗೂ ಜಗ್ಗದೆ ನಯಿಮಾ ಸುಲ್ತಾನ ಅಧಿಕಾರದಲ್ಲಿ ಮುಂದುವರಿದಿದ್ದರು.
ಪಕ್ಷದ ಆಂತರಿಕ ತೀರ್ಮಾನವನ್ನು ಉಲ್ಲಂ ಸಿ ಅಧಿಕಾರದಲ್ಲಿ ಮುಂದುವರಿದಿರುವ ನಯಿಮಾ ಸುಲ್ತಾನ ವಿರುದ್ಧ ಸ್ವಪಕ್ಷೀಯ ಜೆಡಿಎಸ್ ಸದಸ್ಯರೇ ತಿರುಗಿಬಿದ್ದು, ಜಿಪಂ ಸಾಮಾನ್ಯ ಸಭೆಗಳಲ್ಲೇ ಅಧ್ಯಕ್ಷರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೂ ನಯಿಮಾ ಸುಲ್ತಾನ ಜಗ್ಗದಿದ್ದಾಗ ಜೆಡಿಎಸ್ ಸದಸ್ಯರ ಆಕ್ರೋಶಕ್ಕೆ ತುತ್ತಾಗಿ ಕಳೆದ ಆಗಸ್ಟ್ ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಯಿಮಾ ಸುಲ್ತಾನ, ಅಂಗೀಕಾರಕ್ಕೂ ಮುನ್ನವೇ ರಾಜೀನಾಮೆ ಪತ್ರ ವಾಪಸ್ ಪಡೆದು ಸಡ್ಡು ಹೊಡೆದಿದ್ದರು.
ಆದರೂ ಪಟ್ಟು ಬಿಡದ ಜೆಡಿಎಸ್ ಸದಸ್ಯರು, ಡಿಸೆಂಬರ್ 21ರಂದು ಸಾಮಾನ್ಯ ಸಭೆ ಕರೆದಿದ್ದ ನಯಿಮಾಸುಲ್ತಾನ ಅವರನ್ನು ಸಭೆ ನಡೆಸಲು ಬಿಡದೆ ರಾಜೀನಾಮೆ ಪತ್ರ ಬರೆಸಿಕೊಂಡು, 22ರಂದು ತಾವೇ ಬೆಂಗಳೂರಿಗೆ ಕರೆದೊಯ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಡಿಸುವಲ್ಲಿ ಸಫಲರಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದು ಅಧಿಕಾರದಲ್ಲಿ ಮುಂದುವರಿದಿದ್ದ ಜಿ.ನಟರಾಜ್ ಅವರು ಎರಡನೇ ಬಾರಿಗೆ ರಾಜೀನಾಮೆ ಕೊಟ್ಟಿದ್ದಾರೆ.
ಜನವರಿ 5ರಂದು ಕಡೆಯದಾಗಿ ಜಿಪಂ ಸಾಮಾನ್ಯ ಸಭೆ ನಡೆಸಿ ನಯಿಮಾಸುಲ್ತಾನ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದರಿಂದ ತೆರವಾದ ಸ್ಥಾನಕ್ಕೆ ಪಂಚಾಯತ್ ರಾಜ್ ಇಲಾಖೆ ನಿಯಮಾವಳಿಯಂತೆ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಸಹೋದರ ಸಾ.ರಾ.ನಂದೀಶ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸುವವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ವಿರೋಧ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯಮಟ್ಟದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿರುವ ಜೊತೆಗೆ ಬಿಬಿಎಂಪಿ, ಮೈಸೂರು ಮಹಾ ನಗರಪಾಲಿಕೆಯಲ್ಲೂ ಮೈತ್ರಿ ಮಾಡಿಕೊಂಡಿರುವಂತೆ ಜಿಪಂನಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಬೇಕು ಎಂಬ ಹೊಸ ದೋಸ್ತಿ ಲೆಕ್ಕಾಚಾರಗಳು ನಡೆದಿವೆ.
ಆದರೆ, ಜಿಪಂನ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಸಿದ್ಧರಿಲ್ಲ. ಬದಲಿಗೆ ಬಿಜೆಪಿ ಜೊತೆಗಿನ ಹೊಂದಾಣಿಕೆಯನ್ನೇ ಮುಂದುವರಿಸಿಕೊಂಡು ಹೋಗುವಂತೆ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳುತ್ತಾರೆ. ಜಿಪಂ ಅಧ್ಯಕ್ಷರ ಅವಧಿ ಇನ್ನು 28 ತಿಂಗಳು ಮಾತ್ರ ಉಳಿದಿದೆ. ಈ ಎಲ್ಲಾ ರಾಜಕೀಯ ಪ್ರಹಸನಗಳು ಮುಗಿದು ಹೊಸದಾಗಿ ಅಧ್ಯಕ್ಷರಾಗುವವರಿಗೆ ಎಷ್ಟು ತಿಂಗಳ ಅಧಿಕಾರ ಅವಧಿ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮೈಸೂರು ಮಹಾ ನಗರಪಾಲಿಕೆಯಂತೆ ಜಿಲ್ಲಾ ಪಂಚಾಯ್ತಿಯಲ್ಲೂ ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ. ಬಿಜೆಪಿ ಜೊತೆಗೇ ಮೈತ್ರಿ ಮುಂದುವರಿಸಿಕೊಂಡು ಹೋಗಲು ಜೆಡಿಎಸ್ ಸದಸ್ಯರೆಲ್ಲರ ಒಮ್ಮತ ಅಭಿಪ್ರಾಯವಿದೆ. ಪಕ್ಷದ ನಾಯಕರಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡುತ್ತೇವೆ.
-ಸಾ.ರಾ.ನಂದೀಶ್, ಜಿಪಂ ಹಂಗಾಮಿ ಅಧ್ಯಕ್ಷ
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.