ಬಿಎಸ್‌ವೈ ಸಂಪುಟದಲ್ಲಿ ಯಾರಿಗೆ ಮಂತ್ರಿಗಿರಿ?
Team Udayavani, Aug 18, 2019, 4:22 PM IST
ಮೈಸೂರು: ಮಂತ್ರಿ ಮಂಡಲ ರಚನೆಗೆ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನಿಲ್ಲದ ಕಸರತ್ತು ನಡೆಸಿರುವ ಬೆನ್ನಲ್ಲೇ ಹಳೇ ಮೈಸೂರು ಭಾಗದಿಂದ ಬಿಎಸ್‌ವೈ ಸಂಪುಟಕ್ಕೆ ಯಾರು ಸೇರ್ತಾರೆ ಎಂಬ ಚರ್ಚೆಗಳು ಗರಿಗೆದರಿವೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 23 ದಿನಗಳಾದರೂ ಈವರೆಗೆ ಮಂತ್ರಿ ಮಂಡಲ ರಚನೆಯಾಗಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರಾಜ್ಯದ ಜನತೆ ಸಂಕಷ್ಟ ದಲ್ಲಿರುವಾಗ ಅವರ ನೆರವಿಗೆ ಬರಲು ಸರ್ಕಾರವೇ ಇಲ್ಲ. ಯಡಿಯೂರಪ್ಪ ಒಬ್ಬರೇ ಏಕಚಕ್ರಾಧಿಪತ್ಯ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸುತ್ತಿವೆ. ಇದರ ಮಧ್ಯೆಯೇ ಮಂತ್ರಿ ಮಂಡಲ ರಚನೆಗಾಗಿ ಸಂಭಾವ್ಯ ಸಚಿವರ ಪಟ್ಟಿಗೆ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆಯಲು ದೆಹಲಿ ಭೇಟಿ ಕೈಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ನೆರೆ ಹಾನಿ ಪರಿಹಾರಕ್ಕೆ ಅನುದಾನ ಕೋರಿದ್ದಲ್ಲದೆ, ಮಂತ್ರಿ ಮಂಡಲ ರಚನೆ ಬಗ್ಗೆಯೂ ಚರ್ಚಿಸಿದ್ದಾರೆ. ಜೊತೆಗೆ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದವರೇ ಆದ ಆರೆಸ್ಸೆಸ್ ನಾಯಕ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಜೊತೆಗೂ ಮಾತುಕತೆ ನಡೆಸಿ, ಮೊದಲ ಹಂತದಲ್ಲಿ 16 ಶಾಸಕರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಪಟ್ಟಿ ಸಿದ್ಧಗೊಳಿಸಿಕೊಂಡು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಅಂಕಿತ ಪಡೆಯಲು ಅವರ ಭೇಟಿಯನ್ನು ಎದುರು ನೋಡುತ್ತಿದ್ದಾರೆ. ಅಮಿತ್ ಶಾ ಅವರ ಒಪ್ಪಿಗೆ ಸಿಕ್ಕಲ್ಲಿ ಮಂಗಳವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹಳೇ ಮೈಸೂರು ಭಾಗ: ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಹಳೇ ಮೈಸೂರು ಭಾಗದಿಂದ ಯಾರಾಗ್ತಾರೆ ಮಂತ್ರಿ ಎನ್ನುವ ಚರ್ಚೆಗಳು ನಡೆದಿವೆ. ಹಳೆ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು, ಹಾಸನ ಜಿಲ್ಲೆಗಳ ಪೈಕಿ ಮೈಸೂರು ನಗರ ಮತ್ತು ಕೊಡಗು ಜಿಲ್ಲೆಗಳನ್ನು ಹೊರತುಪಡಿಸಿದರೆ, ಉಳಿದೆಡೆ ಬಿಜೆಪಿಯ ಸಂಘಟನೆ ಅಷ್ಟೇನು ಪ್ರಬಲವಾಗಿಲ್ಲ. ಹೀಗಾಗಿಯೇ ಕೊಡಗು ಜಿಲ್ಲೆಯಲ್ಲಿನ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಗಟ್ಟಿಯಾಗಿರುವುದರಿಂದ ಅಲ್ಲಿನ ಎರಡೂ ಸ್ಥಾನಗಳನ್ನೂ ತನ್ನದಾಗಿಸಿಕೊಂಡಿದ್ದರೆ, ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ಪ್ರಾತಿನಿಧ್ಯವೇ ಇಲ್ಲ. ಹಾಸನ, ಚಾಮರಾಜ ನಗರ ಜಿಲ್ಲೆಗಳಲ್ಲಿ ಶಾಸಕರ ಸಂಖ್ಯೆ ಒಂದಂಕಿಯನ್ನು ದಾಟಿಲ್ಲ. ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಗೆದ್ದಿದ್ದರೆ, ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಬಿ. ಹರ್ಷವರ್ಧನ ಅವರು ಇದೇ ಮೊದಲ ಬಾರಿಗೆ ಕಮಲ ಅರಳಿಸಿದ್ದಾರೆ.
ಮೊದಲ ಬಾರಿ ಶಾಸಕರು: ಹಾಸನದ ಪ್ರೀತಂ ಗೌಡ, ಗುಂಡ್ಲುಪೇಟೆ ಕ್ಷೇತ್ರದ ಸಿ.ಎಸ್. ನಿರಂಜನ್‌ಕುಮಾರ್ ಹಾಗೂ ಮೈಸೂರಿನ ಚಾಮರಾಜ ಕ್ಷೇತ್ರದ ಎಲ್. ನಾಗೇಂದ್ರ ಇದೇ ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಮಂತ್ರಿ ಮಂಡಲಕ್ಕೆ ಸೇರುವ ಸಾಧ್ಯತೆಗಳಿಲ್ಲ. ಮೈಸೂರಿನ ಕೆ.ಆರ್.ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆದ್ದು, ಈ ಭಾಗದಲ್ಲಿ ಬಿಜೆಪಿಯ ಹಿರಿಯ ಶಾಸಕರಾಗಿರುವ, ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಹಿಂದೆ ವೈದ್ಯಕೀಯ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರಾಮದಾಸ್ ಅವರಿಗೆ ಈ ಬಾರಿಯೂ ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಪರಿಹಾರದ ಹೊಣೆ: ವಿಶ್ವವಿಖ್ಯಾತ ದಸರಾ ಮಹೋತ್ಸವ ಸಮೀಪಿಸಿರುವುದರಿಂದ ಮೊದಲ ಹಂತದಲ್ಲಿ ಎಸ್.ಎ.ರಾಮದಾಸ್ ಸಂಪುಟ ಸೇರ್ಪಡೆ ಪಕ್ಕಾ ಎನ್ನಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಇತ್ತೀಚೆಗೆ ನೆರೆ ಹಾವಳಿ ಉಂಟಾದ ಸಂದರ್ಭದಲ್ಲಿ ಸ್ವತಃ ಮುಖ್ಯ ಮಂತ್ರಿ ಯಡಿಯೂರಪ್ಪ ಅವರೇ ರಾಮದಾಸ್ ಅವರಿಗೆ ಜಿಲ್ಲೆಯ ವಿವಿಧೆಡೆ ಪರಿಹಾರ ಕಾರ್ಯದಲ್ಲಿ ತೊಡಗುವಂತೆ ಸೂಚನೆ ನೀಡಿದ್ದರು. ಇದು ರಾಮದಾಸ್‌ಗೆ ಮಂತ್ರಿ ಸ್ಥಾನ ಪಕ್ಕಾ ಎನ್ನುವುದರ ಸೂಚನೆ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಮುಖಂಡರು.
● ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.