ಮಹಿಳಾ ಪೊಲೀಸರು ಪುರುಷರಷ್ಟೇ ಸಮರ್ಥರು
Team Udayavani, May 11, 2019, 3:00 AM IST
ಮೈಸೂರು: ಪೊಲೀಸ್ ಕೆಲಸ ಪುರುಷರಿಗೆ ಎಷ್ಟು ಸವಾಲಿದೆಯೋ ಅದರ ಎರಡರಷ್ಟು ಸವಾಲು ಮಹಿಳಾ ಪೋಲಿಸರಿಗಿದ್ದು, ಪೊಲೀಸ್ ಕೆಲಸದ ಜೊತೆಗೆ ಮನೆ, ಮಕ್ಕಳನ್ನು ಸಂಭಾಳಿಸಬೇಕಿದೆ. ಹೀಗಾಗಿ, ಎರಡನ್ನೂ ತಾಳ್ಮೆಯಿಂದ ನಿರ್ವಹಿಸಬೇಕು ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಶುಕ್ರವಾರ ನಗರದ ಜ್ಯೋತಿನಗರದಲ್ಲಿರುವ ಪೊಲೀಸ್ ಶಾಲೆಯ ಆವರಣದಲ್ಲಿ ಮೂರನೇ ತಂಡದ ಮಹಿಳಾ ಕಾನ್ಸಟೇಬಲ್ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ 217ಮಂದಿ ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದು ನಿರ್ಗಮನ ಪಥಸಂಚಲನ ನಡೆಸಿದರು. ಈ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿದ ಅವರು ಮಾತನಾಡಿದರು.
ಸುಮಾರು 40, 50 ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಮಹಿಳೆಯರು ಯಾಕೆ ಬೇಕು ಎಂಬ ಪ್ರಶ್ನೆಯಿತ್ತು. ಗೋಲಿಬಾರ್, ಲಾಠಿ ಚಾರ್ಜ್‌ನಂತಹ ಕೆಲಸಗಳು ಅವರಿಗೆ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೀಗ ಮಹಿಳಾ ಪೊಲೀಸರು ಪುರುಷರಷ್ಟೇ ಸಮರ್ಥರು ಎಂಬುದನ್ನು ನಿರೂಪಿಸುತ್ತಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ, ಹಿಂಸೆಗಳ ಕುರಿತು ಮಹಿಳಾ ಪೊಲೀಸರು ಸುಲಭವಾಗಿ ಅರ್ಥೈಸಿಕೊಳ್ಳುತ್ತಿದ್ದು, ಸಂವೇದನಾಶೀಲರಾಗಿರುತ್ತಾರೆ. ಅಲ್ಲದೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸುವುದರಿಂದ ಪೊಲೀಸ್ ಇಲಾಖೆಗೆ ಮಹಿಳಾ ಪೊಲೀಸರ ಅವಶ್ಯಕತೆಯಿದೆ ಎಂದರು.
ತರಬೇತಿ: ಮಹಿಳೆಯರಿಗೆ ಕಡಿಮೆ ಅವಧಿಯ ತರಬೇತಿ ಸಾಕು ಎನ್ನಲಾಗಿತ್ತು. ಆದರೆ ಪುರುಷರಿಗೆ ಎಷ್ಟು ತರಬೇತಿ ಬೇಕು, ಅದಕ್ಕೂ ಜಾಸ್ತಿ ಮಹಿಳೆಯರಿಗೆ ತರಬೇತಿಯ ಅವಶ್ಯಕತೆಯಿದೆ. ನಮ್ಮ ಸಮಾಜದಲ್ಲಿ ಎಷ್ಟು ಅಪರಾಧಗಳು ನಡೆಯುತ್ತವೆಯೋ ಅದರಲ್ಲಿ ಶೇ.50 ರಷ್ಟು ಪ್ರಕರಣಗಳು ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದ್ದೇ ಆಗಿದೆ. ಅವರ ಪರಿಸ್ಥಿತಿ, ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮಹಿಳೆಯರು ಸಮರ್ಥರು ಎಂದು ಹೇಳಿದರು.
ಕಿರುಕುಳ:
ಮಹಿಳೆಯರ ಕಷ್ಟಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮಹಿಳೆಯರಿಗೆ ಮಾತ್ರ ಸಾಧ್ಯ. ಈಗ ನೀವು ಸಮವಸ್ತ್ರ ಧರಿಸಿದ್ದೀರಿ, ಸಮವಸ್ತ್ರ ಧರಿಸದೇ ಬಸ್ಸಿನಲ್ಲೋ, ರೈಲಿನಲ್ಲೋ ಹೋದರೆ ಕಿರುಕುಳದ ಅನುಭವವಾಗತ್ತೆ. ಎಷ್ಟೋ ಮಂದಿ ಈಗಾಗಲೇ ಕಿರುಕುಳವನ್ನು ಅನುಭವಿಸಿದ್ದಿರಲೂಬಹುದು. ಅದಕ್ಕಾಗಿ ಅವರಿಗೆ ಮಹಿಳೆಯರಿಗಾಗುವ ಕಿರುಕುಳದ ಕುರಿತು ಅರಿಯುವ ಮನಸ್ಥಿತಿ ನಿಮಗಿರಲಿ ಎಂದರು.
ಬಹುಮಾನ: ಕಾರ್ಯಕ್ರಮದಲ್ಲಿ ಅತ್ಯತ್ತಮ ಪ್ರಶಿಕ್ಷಣಾರ್ಥಿಯಾಗಿ ಎ.ತಾರಾ ಶಿವಮೊಗ್ಗ ಜಿಲ್ಲೆ, ಒಳಾಂಗಣ ಪ್ರಶಸ್ತಿಯಲ್ಲಿ ಎಚ್.ಎನ್.ಗೀತಾ ತುಮಕೂರು ಪ್ರಥಮ, ಉತ್ತರ ಕನ್ನಡದ ಸಕ್ಕಿಪಾಟೀಲ್ ದ್ವಿತೀಯ, ಬೆಳಗಾವಿಯ ಪ್ರಭಾವತಿ ರಾಮಪ್ಪ ಸುಳ್ಳನವರ ತೃತೀಯ, ಹೊರಾಂಗಣ ಪ್ರಶಸ್ತಿಯಲ್ಲಿ ಎ.ತಾರಾ ಪ್ರಥಮ, ರಾಮನಗರದ ಎಂ.ಇ.ರಶ್ಮಿ ದ್ವಿತೀಯ, ಮಂಗಳೂರಿನ ಶಹಜಾನ ದ್ವಿತೀಯ, ಕೊಪ್ಪಳದ ವಿಜಯಲಕ್ಷ್ಮೀ ತೃತೀಯ, ಫೈರಿಂಗ್‌ನಲ್ಲಿ ಮೈಸೂರಿನ ಎಚ್.ಜಿ.ಶಿಲ್ಪ ಪ್ರಥಮ, ಉತ್ತರ ಕನ್ನಡದ ಎಂ.ಪೂಜಶ್ರೀ ದ್ವಿತೀಯ, ಮಂಗಳೂರಿನ ಎಂ.ಜಯಶೀಲ ತೃತೀಯ, ಉತ್ತರ ಕನ್ನಡದ ಎನ್. ಶೈಲಶ್ರೀ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ತರಬೇತಿ ವಿಭಾಗದ ಪೊಲೀಸ್ ಮಾಹಾನಿರೀಕ್ಷಕ ಎಸ್.ರವಿ, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉನ್ನತ ಹುದ್ದೆ ಅವಕಾಶ: ಈಗ ತರಬೇತಿ ಪಡೆದವರಲ್ಲಿ ಪದವೀಧರರೂ, ಸ್ನಾತಕೋತ್ತರರೂ ಇದ್ದೀರಿ. ನಿಮ್ಮ ಹತ್ತಿರ ಒಳ್ಳೆಯ ಪದವಿಯಿದೆ. ಒಳ್ಳೆಯ ಕೆಲಸಗಳನ್ನು ಮಾಡಿ ಉತ್ತಮ ಹೆಸರು ಗಳಿಸಿ. ಇನ್ನೂ ಮೇಲಿನ ಹುದ್ದೆಗೆ ನೀವು ಇಷ್ಟಪಟ್ಟರೆ ಪಿಎಸ್‌ಐ, ಎಸ್‌ಐ, ಆಗುವ ಅವಕಾಶಗಳೂ ನಿಮಗಿವೆ. 8 ತಿಂಗಳು ಕಷ್ಟಪಟ್ಟು ತರಬೇತಿ ಪಡೆದಿದ್ದೀರಿ. ಪೊಲೀಸ್ ಕೆಲಸ 24 ಗಂಟೆಯದ್ದಾಗಿದೆ.
ಇದಕ್ಕೆ ನೀವು ಸಿದ್ಧರಾಗಬೇಕು. ಪುರುಷರಿಗೆ ಎಷ್ಟು ಸವಾಲಿದೆಯೋ ಅದರ ಎರಡು ಪಟ್ಟು ಸವಾಲು ಮಹಿಳೆಯರಿಗಿದೆ. ಅವರು ಮನೆ, ಮಕ್ಕಳನ್ನೂ ಸಂಬಾಳಿಸಬೇಕು. ಹೀಗಾಗಿ, ಎರಡನ್ನೂ ತಾಳ್ಮೆಯಿಂದ ನಿರ್ವಹಿಸಬೇಕು. ಪುರುಷರೂ ಕೂಡ ಅವರನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕಿವಿಮಾತು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.