ನಾಳೆಯದ್ದೇ ಚಿಂತೆ
ಮೊರಬ-ಆಹೆಟ್ಟಿಗಿಲ್ಲ ಬಸ್ | ಮನೆ-ಬೆಳೆ ಹೋಯ್ತು, ಮುಂದೇನು?
Team Udayavani, Aug 12, 2019, 12:11 PM IST
ನವಲಗುಂದ: ಗುಮ್ಮಗೋಳ ಗ್ರಾಮದಲ್ಲಿ ಅತಿವೃಷ್ಟಿಯಿಂದಾಗಿ ನೆಲಕ್ಕೊರಗಿದ ಮನೆಗಳು.
ಪುಂಡಲೀಕ ಮುಧೋಳೆ
ನವಲಗುಂದ: ಬೆಣ್ಣೆಹಳ್ಳ-ತುಪ್ಪರಿ ಹಳ್ಳಗಳು ಈ ಬಾರಿಯು ಜನರ ಭವಿಷ್ಯವನ್ನು ಆಪೋಶನ ತೆಗೆದುಕೊಂಡಿವೆ. 2009ರಲ್ಲಿ ಕಂಡರಿಯದಂತೆ ಒಮ್ಮೆಲೇ ಅಪ್ಪಳಿಸಿ ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿ ಇಂದಿಗೆ 10 ವರ್ಷಗಳೇ ಕಳೆದಿವೆ. ಮತ್ತೆ ತುಪ್ಪರಿ-ಬೆಣ್ಣೆಗಳು ತುಂಬಿ ಹರಿದು ನೆರೆಹಾವಳಿ ಸೃಷ್ಟಿಸಿದೆ.
ಒಂದು ವಾರದಿಂದ ತಾಲೂಕಿನಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಜೊತೆಗೆ ಮಹಾರಾಷ್ಟ್ರ, ಬೆಳಗಾವಿ, ಇತರೆ ಕಡೆಗಳಲ್ಲಿಯೂ ಮಳೆಯ ನೀರು ತುಪ್ಪರಿಹಳ್ಳ-ಬೆಣ್ಣೆಹಳ್ಳವನ್ನು ಸೇರಿ ತಾಲೂಕಿನ ಮೊರಬ, ಗುಮ್ಮಗೋಳ, ಶಿರಕೋಳ, ಶಿರೂರ, ಆಹೆಟ್ಟಿ, ಅಮರಗೋಳ, ಯಮನೂರ, ಪಡೇಸೂರ, ಬಳ್ಳೂರ, ಜಾವೂರ, ಹೆಬ್ಟಾಳ, ಹನಸಿ ಗ್ರಾಮಗಳಲ್ಲಿ ನೆರೆಹಾವಳಿ ಉಂಟಾಗಿ ಬದುಕು ದುಸ್ತರವಾಗಿವೆ.
ಆಯಾ ಭಾಗದಲ್ಲಿ ಗಂಜಿ ಕೇಂದ್ರಗಳು ಪ್ರಾರಂಭವಿದ್ದು, ವಿವಿಧ ಸಂಘಟನೆಗಳು ಸಂತ್ರಸ್ತರಿಗೆ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಸಂತ್ರಸ್ತರು ಚೇತರಿಸಿಕೊಂಡು ಪರಿಹಾರ ಕೇಂದ್ರಗಳಿಂದ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದರೂ ಭವಿಷ್ಯದ ಚಿಂತೆ ಕಾಡತೊಡಗಿದೆ. ಮನೆ-ಬೆಳೆ ಎಲ್ಲವೂ ಹೋಯ್ತು, ಮುಂದೇನು? ಎಂಬ ಪ್ರಶ್ನೆ ಎದುರಾಗಿದೆ. ಸಂಪೂರ್ಣ ಕುಸಿದ ಮನೆಗಳು ಒಂದೆಡೆಯಾದರೆ, ಮಳೆಯಲ್ಲಿ ನೆನೆದ ಮನೆಗಳು ಈಗ ಒಂದೊಂದಾಗಿ ಧರೆಗೊರಗುತ್ತಿವೆ.
ಗೋಳಿನ ಬಾಳು: ಮೊರಬ, ಶಿರಕೋಳ, ಹನಸಿ, ಹೆಬ್ಟಾಳ ಗ್ರಾಮದಲ್ಲಿ ಪ್ರವಾಹದಿಂದ ಸಂತ್ರಸ್ತರು ನಲುಗಿ ಹೋಗಿದ್ದಾರೆ. ಆಯಾ ಸರಕಾರಿ ಶಾಲೆಗಳಲ್ಲಿಯೇ ಗಂಜಿ ಕೇಂದ್ರದಲ್ಲಿ ಊಟ ಮಾಡಿ ಆಶ್ರಯ ಪಡೆದಿದ್ದಾರೆ. ಜಾನುವಾರಗಳನ್ನು ಕಟ್ಟಲು ಜಾಗೆ ಇಲ್ಲದೆ ಶಾಲೆಯ ಆವರಣದಲ್ಲಿಯೇ ಕಟ್ಟಿದ್ದಾರೆ.
ಶನಿವಾರ ಮೊರಬ ಗ್ರಾಮದಲ್ಲಿ 25 ಮನೆಗಳು ಬಿದ್ದಿದ್ದು, ನಾಲ್ಕು ಮನೆಗಳು ಸಂಪೂರ್ಣ ನೆಲಕ್ಕೊರಗಿವೆ. ಮಂಜುಳಾ ಯಾದವಾಡ ಹಾಗೂ ಕುಟುಂಬದವರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಅಮರಗೋಳದಲ್ಲಿಯೂ ಪ್ರವಾಹದಿಂದ ಹಲವಾರು ಕುಟುಂಬಗಳು ನಿರಾಶ್ರಿತರಾಗಿವೆ. ಆಯುಷ್ ಇಲಾಖೆ ವತಿಯಿಂದ ಹರಿಜನ ಕೇರಿಯ ಕುಟುಂಬಗಳಿಗೆ ಡಾ| ಬಿ.ಎಸ್. ಶಿವನಗೌಡ್ರ ಅವರು ಉಚಿತವಾಗಿ ಚಿಕಿತ್ಸೆ ನೀಡಿ ಔಷಧೋಪಚಾರ ಮಾಡಿದ್ದಾರೆ.
ಬೆಳೆ ನೀರಲ್ಲಿ ಹೋಮ: ತಾಲೂಕಿನ ತುಪ್ಪರಿಹಳ್ಳ ಹಾಗೂ ಬೆಣ್ಣೆಹಳ್ಳಕ್ಕೆ ಹೊಂದಿಕೊಂಡಂತೆ ಸುಮಾರು 5000 ಸಾವಿರ ಹೆಕ್ಟೇರ್ ಜಮೀನುಗಳು ಇದ್ದು ರೈತರು ಬಿತ್ತಿದ ಈರುಳ್ಳಿ, ಗೋವಿನಜೋಳ, ಹತ್ತಿ ಬೆಳೆಗಳು ಕೈಗೆ ಬರದಂತಾಗಿ ತುಂಬಾ ನಷ್ಟ ಅನುಭವಿಸಿದ್ದಾರೆ. ಸತತ ಬರಗಾಲ ಎದುರಿಸಿದ್ದ ರೈತನಿಗೆ ನೆರೆಯು ಬರಸಿಡಿಲಿನಂತೆ ಅಪ್ಪಳಿಸಿದೆ. ಆರೇಕುರಹಟ್ಟಿಯಲ್ಲಿ ಪ್ರವಾಹಕ್ಕೆ ಸಿಲುಕಿ ಜಾನುವಾರು ಸಾವನ್ನಪ್ಪಿದೆ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೊರಬ, ಗುಮ್ಮಗೋಳ, ಆಹೆಟ್ಟಿ ಗ್ರಾಮಗಳಿಗೆ ರವಿವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.