ಬಿತ್ತನೆ ಶೇಂಗಾ ಪೂರೈಕೆಗೆ ಆಗ್ರಹ
ಕೃಷಿ ಇಲಾಖೆ ನಿರ್ಲಕ್ಷ್ಯದಿಂದ ಪ್ರತಿ ದಿನ ರೈತರಿಗೆ ಅಲೆದಾಟ ತಪ್ಪುತ್ತಿಲ್ಲ: ಕಾಕಸೂರಯ್ಯ
Team Udayavani, Jul 5, 2019, 3:28 PM IST
ನಾಯಕನಹಟ್ಟಿ: ಬಿತ್ತನೆ ಶೇಂಗಾ ಬೀಜ ಪೂರೈಕೆ ಮಾಡುವಂತೆ ಆಗ್ರಹಿಸಿ ರೈತರು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು
ನಾಯಕನಹಟ್ಟಿ: ಬಿತ್ತನೆ ಶೇಂಗಾ ಬೀಜವನ್ನು ತಕ್ಷಣ ಪೂರೈಕೆ ಮಾಡುವಂತೆ ಆಗ್ರಹಿಸಿ ರೈತರು ಗುರುವಾರ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಾಕಸೂರಯ್ಯ, ರೈತರಿಗೆ ಬಿತ್ತನೆ ಶೇಂಗಾ ವಿತರಿಸುವಲ್ಲಿ ಕೃಷಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಶೇಂಗಾ ಪ್ರಮುಖವಾದ ಬೆಳೆಯಾಗಿದ್ದು, ರಾಸುಗಳಿಗೆ ಮೇವು ಹಾಗೂ ಜನರಿಗೆ ಆದಾಯವನ್ನು ದೊರಕಿಸಿಕೊಡುತ್ತಿದೆ. ಒಂದೆರಡು ದಿನಗಳ ಕಾಲ ಬಿತ್ತನೆ ಬೀಜ ವಿತರಿಸಲಾಗಿದೆ. ನಂತರ ದಿಢೀನೇ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ರೈತರು ಬಿತ್ತನೆ ಕಾರ್ಯಗಳನ್ನು ಬಿಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುವಂತಾಗಿದೆ. ಒಂದು ವಾರದಿಂದ ದಾಸ್ತಾನು ಇಲ್ಲ ಎಂಬ ಸಿದ್ಧ ಉತ್ತರನ್ನು ಇಲಾಖೆ ಸಇಬ್ಬಂದಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಸಹಕಾರ ಸಂಘದ ಅಧ್ಯಕ್ಷ ಕಾಟಯ್ಯ ಮಾತನಾಡಿ, ನಾಲ್ಕೈದು ದಿನಗಳ ಕಾಲ ಬಿತ್ತನೆ ಬೀಜ ವಿತರಿಸಿ ಇದೀಗ ಸ್ಥಗಿತಗೊಳಿಸಲಾಗಿದೆ. ಕೆಲವು ರಾಜಕೀಯ ಮುಖಂಡರಿಗೆ ಕೃಷಿ ಇಲಾಖೆಯವರು ಗುಟ್ಟಾಗಿ ಬಿತ್ತನೆ ಶೇಂಗಾ ವಿತರಿಸಿದ್ದಾರೆ. ಆದರೆ ಸಾಮಾನ್ಯ ರೈತರು ನಸುಕಿನ ನಾಲ್ಕು ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರೂ ಬಿತ್ತನೆ ಬೀಜ ನೀಡುತ್ತಿಲ್ಲ. ದಾಸ್ತಾನು ಇಲ್ಲ ಎಂಬ ಉತ್ತರ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಮಳೆಗಾಲಕ್ಕೆ ಮುಂಚೆ ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ಸಿದ್ಧಗೊಳಿಸಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿತನದಿಂದ ರೈತರು ಪರದಾಡುವಂತಾಗಿದೆ. ತಡವಾಗಿ ಬೀಜ ವಿತರಿಸಿದರೆ ಬಿತ್ತನೆಯೂ ತಡವಾಗುತ್ತದೆ. ಇದರಿಂದ ಇಳುವರಿ ಕುಸಿತ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಬಿತ್ತನೆ ಶೇಂಗಾ ಬೆಲೆಯನ್ನು ಏಕಾಏಕಿ ಏರಿಸಲಾಗಿದೆ. ದರ ಏರಿಕೆಗೆ ಇಲಾಖೆ ಕಾರಣವನ್ನೂ ನೀಡಿಲ್ಲ. ಪ್ರತಿ ದಿನ ಒಂದು ಗ್ರಾಪಂದಂತೆ ಬಿತ್ತನೆ ಶೇಂಗಾ ವಿತರಣೆ ಮಾಡಬೇಕು. ಏಕೆಂದರೆ ಎಲ್ಲ ರೈತರು ಒಮ್ಮೆಲೆ ಬಂದಾಗ ವಿತರಣೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲ ಗ್ರಾಪಂಗಳಿಗೆ ವೇಳಾಪಟ್ಟಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಜಂಬಯ್ಯ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಪಾಪಮ್ಮ, ಸುಶೀಲಮ್ಮ, ಪ್ರಕಾಶ್, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.