ನೀರು-ಮೇವು ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ
ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ನಿರ್ದೇಶನ
Team Udayavani, Jun 8, 2019, 3:11 PM IST
ಕಲಬುರಗಿ: ಕಲಬುರಗಿ ಜಿಲ್ಲೆ ಸೇರಿದಂತೆ ವಿಭಾಗದ ಜಿಲ್ಲೆಗಳಲ್ಲಿ ಮೇ 2019ರ ಅಂತ್ಯದ ವರೆಗೆ ವಾಡಿಕೆಗಿಂತ ಶೇ. 40 ರಿಂದ 60ರಷ್ಟು ಮಳೆ ಕಡಿಮೆಯಾಗಿದೆ. ಹೀಗಾಗಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇನ್ನಿತರ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಲಬುರಗಿ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ ಹೈ.ಕ. ಭಾಗದ ಬಹುತೇಕ ತಾಲೂಕುಗಳಲ್ಲಿ ಬರ ಕಾಮಗಾರಿಗಳು ಎಲ್ಲೆಡೆ ಭರದಿಂದ ಸಾಗಿವೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿರುವ ಗ್ರಾಮೀಣ ಭಾಗದ 212 ಗ್ರಾಮಗಳಿಗೆ 197 ಟ್ಯಾಂಕರ್ ಮತ್ತು 121 ಖಾಸಗಿ ಬೋರವೆಲ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ 24 ಗ್ರಾಮಗಳಿಗೆ 31 ಟ್ಯಾಂಕರ್ ಮತ್ತು 25 ಖಾಸಗಿ ಬೋರವೆಲ್ಗಳಿಂದ ಮತ್ತು ಬೀದರ ಜಿಲ್ಲೆಯ 112 ಗ್ರಾಮಗಳಿಗೆ 126 ಟ್ಯಾಂಕರ್ ಮತ್ತು 295 ಖಾಸಗಿ ಬೋರವೆಲ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಮೂರು ಜಿಲ್ಲೆಗಳ ಪಟ್ಟಣ ಪ್ರದೇಶದ 77 ವಾರ್ಡುಗಳಿಗೆ ಪ್ರತಿನಿತ್ಯ 27 ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಇದೂವರೆಗೆ 20.71 ಕೋಟಿ ರೂ. ಖರ್ಚು ಮಾಡಲಾಗಿದೆ. ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಿಲ್ಲ ಎಂದು ತಿಳಿಸಿದರು.
ವಾಣಿಜ್ಯ ಬ್ಯಾಂಕುಗಳಿಗೆ ಸಾಲ ಮನ್ನಾದ 516.80 ಕೋಟಿ ರೂ. ಪಾವತಿ: ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದ ಕಲಬುರಗಿ ಜಿಲ್ಲೆಯ 155986 ರೈತ ಫಲಾನುಭವಿಗಳ 659.29 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಈ ಪೈಕಿ 247.29 ಕೊಟಿ ರೂ.ಗಳನ್ನು ಬ್ಯಾಂಕುಗಳಿಗೆ ಸರ್ಕಾರದಿಂದ ಪಾವತಿ ಮಾಡಲಾಗಿದೆ.
ಬೀದರ ಜಿಲ್ಲೆ 53521 ಫಲಾನುಭವಿಗಳ 428.17 ಕೋಟಿ ರೂ. ಸಾಲ ಮನ್ನಾ ಮೊತ್ತದಡಿ 65.51 ಕೊಟಿ ರೂ. ಹಾಗೂ ಯಾದಗಿರಿ ಜಿಲ್ಲೆಯ 69965 ಫಲಾನುಭವಿಗಳ 528 ಕೋಟಿ ರೂ. ಸಾಲ ಮನ್ನಾ ಮೊತ್ತದಡಿ 204 ಕೊಟಿ ರೂ. ಹಣ ಬ್ಯಾಂಕುಗಳಿಗೆ ಪಾವತಿ ಮಾಡಲಾಗಿದೆ.
ಸಹಕಾರಿ ಬ್ಯಾಂಕುಗಳಿಗೆ 218.45 ಕೋಟಿ ರೂ. ಬಿಡುಗಡೆ: ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದ ಕಲಬುರಗಿ ಜಿಲ್ಲೆಯ 51672 ರೈತ ಫಲಾನುಭವಿಗಳ 145.21 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಈ ಪೈಕಿ 61.74 ಕೊಟಿ ರೂ.ಗಳನ್ನು ಬ್ಯಾಂಕುಗಳಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.
ಬೀದರ ಜಿಲ್ಲೆ 117616 ಫಲಾನುಭವಿಗಳ 504 ಕೋಟಿ ರೂ. ಸಾಲ ಮನ್ನಾ ಮೊತ್ತದಡಿ 145.82 ಕೊಟಿ ರೂ., ಯಾದಗಿರಿ ಜಿಲ್ಲೆಯ 13944 ಫಲಾನುಭವಿಗಳ 30.41 ಕೋಟಿ ರೂ. ಸಾಲ ಮನ್ನಾ ಮೊತ್ತದಡಿ 10.89 ಕೊಟಿ ರೂ.ಗಳನ್ನು ಬ್ಯಾಂಕುಗಳಿಗೆ ಈಗಾಗಲೆ ಬಿಡುಗಡೆ ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟಂಬಕ್ಕೆ 5.80 ಕೋಟಿ ರೂ. ಪರಿಹಾರ ವಿತರಣೆ: 2018-19ನೇ ಆರ್ಥಿಕ ವರ್ಷ ಸೇರಿದಂತೆ ಮೇ-2019ರ ಅಂತ್ಯದ ವರೆಗೆ ಕಲಬುರಗಿ ಜಿಲ್ಲೆಯಲ್ಲಿ ವರದಿಯಾದ 48 ರೈತ ಆತ್ಮಹತ್ಯೆ ಪ್ರಕರಣದಲ್ಲಿ 42 ಕುಟಂಬಗಳಿಗೆ, ಬೀದರ ಜಿಲ್ಲೆಯ 51 ರೈತ ಆತ್ಮಹತ್ಯೆ ಪ್ರಕರಣದಲ್ಲಿ 37 ಕುಟಂಬಗಳಿಗೆ ಮತ್ತು ಯಾದಗಿರಿ ಜಿಲ್ಲೆಯ 48 ರೈತ ಆತ್ಮಹತ್ಯೆ ಪ್ರಕರಣದಲ್ಲಿ 37 ಕುಟಂಬಗಳಿಗೆ ತಲಾ 5 ಲಕ್ಷ ರೂ. ಗಳಂತೆ ಮೂರು ಜಿಲ್ಲೆಗಳಲ್ಲಿ ಒಟ್ಟು 5.80 ಕೋಟಿ ರೂ. ಪರಿಹಾರ ಮೊತ್ತವನ್ನು ಸಂತ್ರಸ್ತ ಕುಟಂಬಕ್ಕೆ ವಿತರಣೆ ಮಾಡಲಾಗಿದೆ.
ಕರ್ನಾಟಕ ಲ್ಯಾಂಡ್ ರೆವೆನ್ಯೂ ಕಾಯ್ದೆಯ ನಿಯಮ 94ರ ಪ್ರಕಾರ ಸಾಗುವಳಿ ಭೂಮಿ ಒತ್ತುವರಿ ಸಕ್ರಮಕ್ಕೆ ಕೋರಿ ಮೂರು ಜಿಲ್ಲೆಗಳಿಂದ ಸಲ್ಲಿಸಲಾದ 60872 ಅರ್ಜಿಗಳ ಪೈಕಿ ಮೇ-2019ರ ಅಂತ್ಯಕ್ಕೆ 56456 ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ.
ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸಿ ಕಾಯ್ದೆಯ 94(ಸಿ)ರನ್ವಯ ಸ್ವೀಕೃತ 36941ರಲ್ಲಿ 33596 ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕು ಚೀಟಿ ವಿತರಿಸಲಾಗಿದೆ. ಇನ್ನು ನಗರ-ಪಟ್ಟಣ ಪ್ರಕರಣಗಳಲ್ಲಿ ಕಾಯ್ದೆಯ 94(ಸಿಸಿ) ರ ಅನ್ವಯ ಸ್ವೀಕೃತ 3793ರಲ್ಲಿ 3428 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸರಾಸರಿ ಶೇ.90ರಷ್ಟು ಪ್ರಗತಿ ಸಾಧಿಸಿದೆ ಎಂದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಯಾದಗಿರಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಬೀದರ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಕಲಬುರಗಿ ಜಿ.ಪಂ ಸಿ.ಇ.ಒ ಡಾ| ಎ. ರಾಜಾ., ಯಾದಗಿರಿ ಜಿ.ಪಂ ಸಿ.ಇ.ಒ ಕವಿತಾ ಮನ್ನಿಕೇರಿ, ಬೀದರ ಜಿ.ಪಂ ಸಿ.ಇ.ಒ ಮಹಾಂತೇಶ ಬೀಳಗಿ, ಕಲಬುರಗಿ ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಬೀದರ ಸಹಾಯಕ ಆಯುಕ್ತ ಡಾ|ಶಂಕರ ವಣಿಕ್ಯಾಳ, ಬಸವಕಲ್ಯಾಣ ಸಹಾಯಕ ಆಯುಕ್ತ ಜ್ಞಾನೇಂದ್ರ ಗದ್ವಾರ, ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ. 12 ಮತ್ತು 13ರಂದು ಜಿಲ್ಲೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲು ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರ, ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ.ಗಳ ಸಭೆ ಕರೆದಿದ್ದು, ಎಲ್ಲ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. 2018-19ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ವಾರ್ಷಿಕ ಗುರಿಗೆ ಮೀರಿ ಸಾಧನೆ ಮಾಡಿದರೆ, ಯಾದಗಿರಿಯಲ್ಲಿ ಶೇ. 98.83 ಸಾಧನೆ ಸಾಧಿಸಿದೆ. 2019-20ನೇ ಸಾಲಿನಲ್ಲಿ ಇದೂವರೆಗೆ ಈ ಜಿಲ್ಲೆಗಳಲ್ಲಿ ಮಾನವ ಸೃಜನೆಯನ್ನು ಸರಾಸರಿ ಶೇ.15ಕ್ಕೂ ಹೆಚ್ಚು ಸಾಧನೆ ಮಾಡಲಾಗಿದೆ.
•ಸುಬೋಧ ಯಾದವ,
ಪ್ರಾದೇಶಿಕ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.