ಕೊನೆ ಕ್ಷಣದಲ್ಲಿ ‘ಕೈ’ ತಪ್ಪಿದ ಹೊಂದಾಣಿಕೆ!
•ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಬಲಾಬಲ •ಉಭಯ ಪಕ್ಷಗಳು ಲೀಡ್ ಸಾಧಿಸಲು ಸೆಣಸಾಟ
Team Udayavani, Apr 28, 2019, 10:49 AM IST
ರಾಯಚೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಕಣಕ್ಕಿಳಿದರೂ ಬಿಜೆಪಿ ಸಮಬಲದ ಪೈಪೋಟಿ ನೀಡಿರುವುದು ವಿಶೇಷ. ಯಾರೇ ಗೆದ್ದರೂ ಬಹಳ ಅಂತರದ ಗೆಲುವಾಗಿರುವುದಿಲ್ಲ ಎನ್ನುವ ಚರ್ಚೆ ನಡೆದಿದೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ತಮ್ಮದೇ ಪ್ರಾಬಲ್ಯ ಸಾಧಿಸುವ ಯತ್ನ ಮಾಡಿವೆ. ಕೆಲವೆಡೆ ಮೈತ್ರಿ ಅಭ್ಯರ್ಥಿ ಪರ ಒಲವು ವ್ಯಕ್ತವಾಗಿದ್ದರೆ; ಕೆಲವೆಡೆ ಬಿಜೆಪಿ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಅದರಲ್ಲೂ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳನ್ನು ಹೆಚ್ಚಾಗಿ ಹೊಂದಿರುವ ರಾಯಚೂರು ನಗರ ಕ್ಷೇತ್ರ ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಗಳಿತ್ತು. ಚುನಾವಣೆ ಮುನ್ನ ಕೊನೆ ದಿನಗಳಲ್ಲಿ ಸ್ಥಳೀಯ ಮುಖಂಡರಲ್ಲಿ ಉಂಟಾದ ಅಸಮಾಧಾನ, ಭಿನ್ನಾಭಿಪ್ರಾಯಗಳಿಂದ ಮತಗಳು ಕೈ ತಪ್ಪುವ ಆತಂಕ ಎದುರಿಸಿದ್ದಾರೆ.
ರಾಯಚೂರು ನಗರ ಕ್ಷೇತ್ರದಲ್ಲಿ 2,17,287 ಮತದಾರರ ಪೈಕಿ 1,26,583 ಜನ ಹಕ್ಕು ಚಲಾಯಿಸಿದ್ದಾರೆ. ಅದರಲ್ಲಿ ಒಂದು ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತ ಮತ್ತು ದಲಿತ ಮತಗಳಿವೆ. ಒಂದು ವೇಳೆ ಈ ಮತಗಳಲ್ಲಿ ಶೇ.50-60ರಷ್ಟು ಮತ ಚಲಾವಣೆಯಾಗಿದ್ದು, ಅದರಲ್ಲೂ ಕಾಂಗ್ರೆಸ್‌ಗೆ ಒಲವು ತೋರಿದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವುದು ಖಚಿತ. ಆದರೆ, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಮುಖಂಡರು, ನಗರಸಭೆ ಸದಸ್ಯರ ಮಧ್ಯೆ ಮನಸ್ತಾಪ ಏರ್ಪಟ್ಟು ಮತದಾರರನ್ನು ಓಲೈಸುವಲ್ಲಿ ನಿರೀಕ್ಷಿತ ಮಟ್ಟದ ಗುರಿ ತಲುಪಿಲ್ಲ ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದ ಮಾಜಿ ಶಾಸಕ ಸೈಯ್ಯದ್ ಯಾಸಿನ್ ಕೂಡ ಅಲ್ಪಸಂಖ್ಯಾತರ ಮನವೊಲಿಸುವ ಯತ್ನ ಮಾಡಿದ್ದಾರೆ. ಕಳೆದ ಬಾರಿ ಅವರು 44 ಸಾವಿರ ಮತ ಪಡೆದು ಪರಾಭವಗೊಂಡಿದ್ದರು. ಈ ಬಾರಿಯೂ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಒಲವು ತೋರಿದ್ದು, ಶೇ.80ರಷ್ಟು ಜನ ಕಾಂಗ್ರೆಸ್ ಕೈ ಹಿಡಿದಿರುವ ಸಾಧ್ಯತೆಗಳಿವೆ. ದಲಿತರು ಕೂಡ ಬಿಜೆಪಿಗಿಂತ ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ದಲಿತ ಮತಗಳ ಮೇಲೆ ಕಣ್ಣು: ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಲು ಕಡ್ಡಾಯ ವಾಗಿ ಕಾಂಗ್ರೆಸ್ ಗೆಲ್ಲಿಸಬೇಕು ಎನ್ನುವ ರೀತಿ ಸಾಕಷ್ಟು ದಲಿತ ಸಂಘಟನೆಗಳ ಮುಖಂಡರು, ಹೋರಾಟಗಾರರು ಕೊನೆಗಳಿಗೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಆ ಮೂಲಕ ಕಾಂಗ್ರೆಸ್ ದಲಿತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಯತ್ನ ಮಾಡಿತು. ಬಿಜೆಪಿಯಿಂದ ದಲಿತರಿಗೆ ಉಳಿಗಾಲವಿಲ್ಲ. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎನ್ನುವ ವಿಚಾರವಾಗಿ ಮುಖಂಡರು ಕರೆ ನೀಡಿದ್ದರು.
ವಿದ್ಯಾವಂತರು ಬಿಜೆಪಿಗೆ ಒಲವು: ನಗರ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿರುವ ಶಿಕ್ಷಿತರು ಈ ಬಾರಿ ಬಿಜೆಪಿಯತ್ತ ಒಲವು ತೋರಿದ್ದಾರೆ. ನರೇಂದ್ರ ಮೋದಿ ಅಲೆ ಕೆಲಸ ಮಾಡಿದ್ದು, ಯುವ ಸಮೂಹ ಹೆಚ್ಚಾಗಿ ಕಮಲದ ಗುಂಡಿ ಒತ್ತಿರುವ ಸಾಧ್ಯತೆಗಳಿವೆ. ಅದರ ಜತೆಗೆ ಲಿಂಗಾಯತರ ಮತಗಳು, ಮಾರವಾಡಿ, ರಜಪೂತ್ ಸಮಾಜದ ಮತಗಳು ಹೆಚ್ಚಾಗಿ ಬಿಜೆಪಿ ಪಾಲಾಗಿವೆ ಎನ್ನಲಾಗುತ್ತಿದೆ. ಶಾಸಕ ಡಾ| ಶಿವರಾಜ ಪಾಟೀಲ ತಮ್ಮ ಎಂದಿನ ತಂತ್ರಗಾರಿಕೆ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲ ಅಂಶಗಳು ಬಿಜೆಪಿಗೆ ವರವಾಗಿವೆ.
ಗೊಂದಲ ಸೃಷ್ಟಿ: ನಗರದ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದು, ಮತಗಟ್ಟೆಗಳ ಸಂಖ್ಯೆಗಳನ್ನು ಬದಲಿಸಲಾಗಿದೆ ಎಂದು ಕೆಲವರು ದೂರಿದ್ದರು. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ವಾರ್ಡ್‌ಗಳಲ್ಲೇ ಈ ಸಮಸ್ಯೆ ಆಗಿದೆ. ಹೆಚ್ಚು ಮತ ಚಲಾವಣೆ ಆಗಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆ ಎಲ್ಲ ಕಡೆ ಆದಲ್ಲಿ ಮತದಾನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೈ ಕೊಟ್ಟ ನಾಯಕರು: ನಗರದಲ್ಲಿ ಅಲ್ಪಸಂಖ್ಯಾತ, ದಲಿತ ಮತಗಳು ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಆತ್ಮವಿಶ್ವಾಸದಲ್ಲಿತ್ತು. ಹೀಗಾಗಿ ಇಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಸ್ಥಳೀಯ ಮುಖಂಡರನ್ನೇ ನಂಬಿಕೊಳ್ಳಲಾಗಿತ್ತು. ಕೊನೆ ಗಳಿಗೆಯಲ್ಲಿ ಸ್ಥಳೀಯ ನಾಯಕರ ಮನಸ್ತಾಪದಿಂದ ಅವರು ತಳಮಟ್ಟದಲ್ಲಿ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಆದರೆ, ಕಾಂಗ್ರೆಸ್‌ಗೆ ಹೆಚ್ಚು ಮತ ಸಿಗದಿದ್ದಲ್ಲಿ ಬಿಜೆಪಿಗೆ ಅನುಕೂಲ ಆಗಲಿದೆ.
ಒಟ್ಟಾರೆ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಸಾಧಿಸಲು ಇದ್ದ ಅವಕಾಶವನ್ನು ಮೈತ್ರಿ ಅಭ್ಯರ್ಥಿ ಕಳೆದುಕೊಂಡಂತಾಗಿದೆ. ಆದರೂ ಅವರ ನಿರೀಕ್ಷೆಯಂತೆ ಅಲ್ಪಸಂಖ್ಯಾತ , ದಲಿತ ಮತಗಳು ಕೈ ಹಿಡಿದಿದ್ದೇ ಆದಲ್ಲಿ ಇಲ್ಲಿ ಬಿಜೆಪಿಗೆ ಹಿನ್ನಡೆ ಆಗುವುದು ಖಚಿತ.
ಈ ಬಾರಿ ಕಾಂಗ್ರೆಸ್ 15ರಿಂದ 20 ಸಾವಿರ ಲೀಡ್‌ಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳು ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾಸವಿದೆ. ರಾಯಚೂರು ಕ್ಷೇತ್ರ ಲೀಡ್ ಕೊಡುವ ವಿಶ್ವಾಸವಿದೆ.
•ರಾಮಣ್ಣ ಇರಬಗೇರಾ,
ಕಾಂಗ್ರೆಸ್ ಜಿಲ್ಲಾಧ್ಯಕ್ಷ
ರಾಯಚೂರು ನಗರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ಅಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಾಗಿದ್ದು, ನಮಗೆ ಲೀಡ್ ಸಿಗುವ ಸಾಧ್ಯತೆ ಕಡಿಮೆ. ಆದರೂ ಸಮಬಲ ಸಾಧಿಸಿರುವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಸಾಕಷ್ಟು ತಳಮಟ್ಟದಿಂದ ಶ್ರಮಿಸಿದ್ದಾರೆ. ಮೋದಿ ಅಲೆ ಕೆಲಸ ಮಾಡುವ ವಿಶ್ವಾಸವಿದೆ.
•ಶರಣಪ್ಪಗೌಡ ಜಾಡಲದಿನ್ನಿ,
ಬಿಜೆಪಿ ಜಿಲ್ಲಾಧ್ಯಕ್ಷ
ನಾವು ಮೈತ್ರಿ ಧರ್ಮಕ್ಕನುಗುಣವಾಗಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದ್ದೇವೆ. ನಗರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಹೆಚ್ಚಾಗಿರುವ ಕಾರಣ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೆವು. ಕಾಂಗ್ರೆಸ್ ನಾಯಕರಲ್ಲಿನ ಭಿನ್ನಮತದಿಂದ ನಾವು ಸ್ವಲ್ಪ ಅಂತರ ಕಾಯ್ದುಕೊಳ್ಳುವಂತಾಯಿತು.
•ವಿರುಪಾಕ್ಷಿ,ಜೆಡಿಎಸ್ ಜಿಲ್ಲಾಧ್ಯಕ್ಷ
ಸಿದ್ದಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.