ಅತಿವೃಷ್ಟಿ ಹಾನಿಗೆ 10.50 ಕೋಟಿ ಪರಿಹಾರ
Team Udayavani, Jan 2, 2022, 5:44 PM IST
ಮಸ್ಕಿ: ಕಳೆದ ನವೆಂಬರ್ ತಿಂಗಳಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ಕೊನೆಗೂ ಪರಿಹಾರ ದಕ್ಕಿದೆ!.
ಅತಿವೃಷ್ಟಿ ಹಾನಿ ಪರಿಹಾರವಾಗಿ ಮಸ್ಕಿ ತಾಲೂಕಿಗೆ ಬರೋಬ್ಬರಿ 10,50,61,400 ರೂ. ಬಿಡುಗಡೆಯಾಗಿದ್ದು, ನಷ್ಟಕ್ಕೆ ಒಳಗಾದ ರೈತರ ಖಾತೆಗೆ ತಾಲೂಕು ಆಡಳಿತ ನೇರವಾಗಿ ಹಣ ಜಮಾ ಮಾಡಿದೆ.
ತಾಲೂಕಿನಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿತ್ತು. ಬಿಟ್ಟು ಬಿಡದೇ ಸತತವಾಗಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿತ್ತು. ನವೆಂಬರ್ ತಿಂಗಳಲ್ಲಿ ವಾಡಿಕೆಗಿಂತಲೂ ಅಧಿಕವಾಗಿ ಮಳೆ ಸುರಿದಿದ್ದರಿಂದ ಬಿತ್ತನೆ ಮಾಡಿ, ಫಸಲಿಗೆ ಬಂದಿದ್ದ ಕೃಷಿ ಬೆಳೆಗಳೆಲ್ಲ ಸಂಪೂರ್ಣ ನೀರಿಗೆ ಕೊಚ್ಚಿ ಹೋಗಿದ್ದವು.
ವಿಶೇಷವಾಗಿ ಭತ್ತ, ತೊಗರೆ, ಕಡಲೆ, ಜೋಳ, ಸೂರ್ಯಕಾಂತಿ ಸೇರಿ ಇತರೆ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದವು. ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಅಧಿಕಾರಿಗಳ ತಂಡ ಸರ್ವೇ ನಡೆಸಿ, ಮಸ್ಕಿ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳ ಅಂಕಿ-ಸಂಖ್ಯೆ ಕಲೆ ಹಾಕಿ ವರದಿ ಸಲ್ಲಿಸಿದ್ದರು.
17 ಸಾವಿರ ಹೆಕ್ಟೇರ್ ನಷ್ಟ
ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 17 ಸಾವಿರ ಹೆಕ್ಟೇರ್ (42,500 ಎಕರೆ) ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಬೆಳೆ ನಾಶವಾಗಿರುವುದು ಸರ್ವೇಯಿಂದ ಗೊತ್ತಾಗಿತ್ತು. ಅಲ್ಲದೇ ಸ್ವಯಂ ಆಗಿ ರೈತರೇ ಪರಿಹಾರಕ್ಕೆ ಕೋರಿದ್ದ ಅರ್ಜಿಗಳನ್ನು ಪರಿಶೀಲಿಸಿ, ಹಾನಿಯ ವರದಿಯನ್ನು ಕಂದಾಯ ಇಲಾಖೆಯಿಂದ ತಾಳೆ ಹಾಕಲಾಗಿತ್ತು. ಈ ಪ್ರಕಾರವಾಗಿ ತಾಲೂಕು ಆಡಳಿತಕ್ಕೆ ಸಲ್ಲಿಕೆಯಾಗಿದ್ದ 16,672 ರೈತರ ಅರ್ಜಿಗಳು ಮಾತ್ರ ಪರಿಹಾರಕ್ಕೆ ಪುರಸ್ಕಾರವಾಗಿದ್ದು, ಇಷ್ಟು ರೈತರ ಖಾತೆಗಳಿಗೆ ಮಾತ್ರ ಆನ್‌ಲೈನ್ ಮೂಲಕ ಹಣ ಜಮೆಯಾಗಿದೆ. ಆಯಾ ರೈತರ ಬೆಳೆಯ ಹಾನಿಯ ಪ್ರಮಾಣ (ಪೂರ್ಣ, ಇಲ್ಲವೇ ಭಾಗಶಃ)ಕ್ಕೆ ತಕ್ಕಂತೆ ಒಟ್ಟು 10,06,80,000 ರೂ. ಹಣ ಜಮೆಯಾಗಿದೆ.
ಭತ್ತವೇ ಹೆಚ್ಚು
ಮಸ್ಕಿ ಹೋಬಳಿಯಲ್ಲಿ 2638 ಹೆಕ್ಟೇರ್, ಹಾಲಾಪೂರ ಹೋಬಳಿಯಲ್ಲಿ 4119 ಹೆಕ್ಟೇರ್, ಬಳಗಾನೂರು ಹೋಬಳಿಯಲ್ಲಿ 4140 ಹೆಕ್ಟೇರ್, ಗುಡದೂರು ಹೋಬಳಿಯಲ್ಲಿ 2920 ಹೆಕ್ಟೇರ್ ಸೇರಿ ಒಟ್ಟು 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾನಿಯಾಗಿತ್ತು. ವಿಶೇಷವಾಗಿ ತಾಲೂಕಿನ ಗುಡದೂರು, ಬಳಗಾನೂರು, ಹಾಲಾಪೂರ ಹೋಬಳಿಯಲ್ಲಿ ನಾಟಿ ಮಾಡಿದ್ದ ಭತ್ತವೇ ಅತಿವೃಷ್ಟಿಗೆ ಹೆಚ್ಚು ಹಾನಿಯಾಗಿತ್ತು. ಫಸಲು ಹಂತಕ್ಕೆ ಬಂದಿದ್ದ ಸೋನಾ, ಕಾವೇರಿ ಸೋನಾ, ಆರ್.ಎನ್.ಆರ್ ಮಾದರಿಯ ಭತ್ತ ನೆಲಕ್ಕೆ ಬಿದ್ದು ರೈತರಿಗೆ ನಷ್ಟ ಉಂಟು ಮಾಡಿತ್ತು. ಉಳಿದಂತೆ ತೊಗರಿ, ಕಡಲೆ, ಸೂರ್ಯಕಾಂತಿ ಬೆಳೆಯೂ ಹಾನಿಯಾಗಿದ್ದು, ಹಾನಿಗೆ ಒಳಗಾದ ಎಲ್ಲ ರೈತರಿಗೂ ಪರಿಹಾರ ದಕ್ಕಿದಂತಾಗಿದೆ.
ಮನೆ ಹಾನಿಗೂ ದುಪ್ಪಟ್ಟು
ಇನ್ನು ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ 75 ಮನೆಗಳು ನೆಲಸಮವಾಗಿವೆ. ಮನೆ ಹಾನಿಯ ಪ್ರಮಾಣ ಆಧರಿಸಿ, ಸರಕಾರದ ಹೊಸ ಪರಿಹಾರ ಮಾರ್ಗಸೂಚಿ ಅನ್ವಯ 75 ಕುಟುಂಬಗಳಿಗೆ ಒಟ್ಟು 43,81,400 ರೂ. ಹಣ ಸರಕಾರದಿಂದ ಪರಿಹಾರವಾಗಿ ಬಿಡುಗಡೆಯಾಗಿದೆ.
ಮಸ್ಕಿ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೆ ಒಳಗಾದ ಎಲ್ಲ ರೈತರಿಗೂ ಸರಕಾರದಿಂದ ಪರಿಹಾರ ಬಿಡುಗಡೆ ಮಾಡಲಾಗಿದೆ. ನೇರವಾಗಿ ರೈತರ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗಿದೆ. -ಕವಿತಾ ಆರ್., ತಹಶೀಲ್ದಾರ್, ಮಸ್ಕಿ
-ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.