ಈಶಾನ್ಯ ಸಾರಿಗೆಗೆ 104 ಕೋಟಿ ರೂ. ನಷ್ಟ
ಕೋವಿಡ್ ಕರಿಛಾಯೆಗೆ ತತ್ತರಿಸಿದ ನಿಗಮ ,ಸಂಕಷ್ಟದಲ್ಲೂ ನಿಂತಿಲ್ಲ ಸಾರಿಗೆ ಸಿಬ್ಬಂದಿಗೆ ವೇತನ
Team Udayavani, Nov 14, 2020, 7:21 PM IST
ರಾಯಚೂರು: ಕೋವಿಡ್ ಕರಿಛಾಯೆ ಪರಿಣಾಮಗಳು ಇಂದಿಗೂ ಮುಂದುವರಿದಿದ್ದು, ಈಶಾನ್ಯ ಸಾರಿಗೆ ಸಂಸ್ಥೆ ರಾಯಚೂರು ವಿಭಾಗಕ್ಕೆ ಬರೋಬ್ಬರಿ 104.54 ಕೋಟಿ ರೂ. ನಷ್ಟ ಉಂಟಾಗಿದೆ. ಇದರಿಂದ ಸಂಕಷ್ಟದಲ್ಲಿಯೇ ನಿಗಮ ನಡೆಸುವ ಸ್ಥಿತಿ ಎದುರಾಗಿದೆ. ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸಾರಿಗೆ ಸಂಚಾರ ನಿಲ್ಲಿಸಲಾಯಿತು. ತುರ್ತು ಸೇವೆಗಳು ಹೊರತಾಗಿಸಿ ಯಾವುದೇ ಸಾರಿಗೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆದರೆ, ನಿತ್ಯ ಬರುವ ಆದಾಯದಿಂದಲೇ ನಿರ್ವಹಣೆ ಸೇರಿದಂತೆ ಖರ್ಚು ತೂಗಿಸುತ್ತಿದ್ದ ನಿಗಮಕ್ಕೆ ಹೆಚ್ಚಿನ ಹೊರೆಯಾಗಿದೆ. ಆದರೆ, ಈಗ ಹಂತ ಹಂತವಾಗಿ ಬಸ್ ಸಂಚಾರ ಆರಂಭವಾಗಿದ್ದು, ತುಸು ಆದಾಯ ಬರುತ್ತಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿಲ್ಲ.
65 ಲಕ್ಷ ಬದಲಿಗೆ 35 ಲಕ್ಷ ರೂ.: ಲಾಕ್‌ಡೌನ್ ಪೂರ್ವದಲ್ಲಿ ಜಿಲ್ಲೆಯ ಏಳು ಡೀಪೊಗಳಿಂದ ಸುಮಾರು 600ಕ್ಕೂ ಅ ಧಿಕ ಬಸ್ ಓಡಿಸಲಾಗುತ್ತಿತ್ತು. ಆದರೆ, ಈಗ 485 ಬಸ್ ಓಡಿಸಲಾಗುತ್ತಿದೆ. ಆದರೆ, ಈ ಮುಂಚೆ ಒಂದು ಬಸ್ ಓಡಿಸಿದರೆ ನಿರೀಕ್ಷಿತ ಆದಾಯ ಬರುತ್ತಿತ್ತು. ಈಗ ನಿರ್ವಹಣೆಗೆ ಬೇಕಾದಷ್ಟು ಬಂದರೆ ಸಾಕು ಎನ್ನುವ ಸ್ಥಿತಿ ಇದೆ ಎನ್ನುತ್ತಾರೆ ಅಧಿ ಕಾರಿಗಳು. ಗ್ರಾಮೀಣ ಭಾಗದಲ್ಲೂ 230 ಬಸ್ ಓಡಿಸಲಾಗುತ್ತಿತ್ತು. ಈಗ 130 ಬಸ್ ಮಾತ್ರ ಓಡಿಸಲಾಗುತ್ತಿದೆ. ಕೋವಿಡ್ ಪೂರ್ವದಲ್ಲಿ ನಿತ್ಯ 65 ಲಕ್ಷ ರೂ. ಆದಾಯವಿತ್ತು. ಆದರೆ, ಈಗ ನಿತ್ಯ 35 ಬರುತ್ತಿದೆ. ಇನ್ನೂ ಯಾವ ಊರುಗಳಿಂದ ಬಸ್ ಓಡಿಸಲು ಬೇಡಿಕೆ ಬರುತ್ತಿದೆಯೋ ಅಲ್ಲಿಗೆ ಮಾತ್ರ ಬಸ್ ಬಿಡಲಾಗುತ್ತಿದೆ. ಆದಾಯ ಬರುವ ಮಾರ್ಗಗಳಲ್ಲೇ ಹೆಚ್ಚಿನ ಬಸ್‌ಗಳ ಸಂಚಾರ ಆಗದಿರುವುದು ಆದಾಯ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ.
ಇಂದಿಗೂ ಬರುತ್ತಿಲ್ಲ ಬೇಡಿಕೆ: ಈಗ ಎಲ್ಲೆಡೆ ಜನಜೀವನ ಮೊದಲಿನಂತೆ ಆಗಿದ್ದರೂ ಸಾರಿಗೆ ಬಸ್‌ಗಳಿಗೆ ಮಾತ್ರ ಇಂದಿಗೂ ಬೇಡಿಕೆ ಬರುತ್ತಿಲ್ಲ. ಜಿಲ್ಲೆಯಿಂದ ಬೆಂಗಳೂರಿಗೆ ವಾರದ ರಜೆಗಳು ಮಾತ್ರ ಬಸ್‌ಗಳ ಬೇಡಿಕೆ ಇದೆ. ಪ್ರತಿನಿತ್ಯ ರಾಜಧಾನಿಗೆ 45 ಬಸ್ ಓಡಿಸಲಾಗುತ್ತಿದೆ. ಅದರಲ್ಲಿ ನಿತ್ಯ 18-20 ಬಸ್‌ಗಳು ಮಾತ್ರ ಓಡುತ್ತಿದ್ದು, ಉಳಿದ ಬಸ್‌ಗಳನ್ನು ರದ್ದು ಮಾಡಲಾಗುತ್ತಿದೆ. ಹೈದರಾಬಾದ್ ಸೇರಿದಂತೆ ಅಂತಾರಾಜ್ಯಗಳಿಗೆ ಮುಂಚೆಯಂತೆಯೇ ಬಸ್‌ಗಳನ್ನು ಓಡಿಸುತ್ತಿದ್ದರೂ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ಇದೆ.
ಹಾಳಾದ ರಸ್ತೆಗಳಲ್ಲಿ ಓಡದ ಬಸ್: ಈ ಬಾರಿ ಮಳೆ ಭಾರೀ ಪ್ರಮಾಣದಲ್ಲಿ ಸುರಿದ ಪರಿಣಾಮ ಜಿಲ್ಲೆಯ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಸಾರಿಗೆ ಬಸ್‌ಗಳು ಓಡಾಡುವುದರಿಂದ ಹಾಳಾಗುತ್ತಿದ್ದು, ನಿರ್ವಹಣೆ ಸವಾಲು ಎದುರಾಗುತ್ತಿದೆ. ಅದರ ಜತೆಗೆ ಹಳ್ಳಿ ಜನರಿಂದ ಕೂಡ ಬಸ್ ಸಂಚಾರಕ್ಕೆ ಒತ್ತಾಯ ಕೇಳಿ ಬರುತ್ತಿಲ್ಲ. ಮೊದಲಿನಂತೆ ಬಸ್ ಓಡಿಸಿದಲ್ಲಿ ನಿರೀಕ್ಷಿತ ಆದಾಯ ಬಾರದಿದ್ದಲ್ಲಿ ನಿಗಮಕ್ಕೆ ಇನ್ನಷ್ಟು ನಷ್ಟ ಎದುರಾಗುವ ಆತಂಕವಿದೆ ಎನ್ನುತ್ತಾರೆ ಅಧಿಕಾರಿಗಳು.
ಈಶಾನ್ಯ ಸಾರಿಗೆ ನಿಗಮವೇ ಉತ್ತಮ : ರಾಜ್ಯದ ನಾಲ್ಕು ನಿಗಮಗಳು ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಿದ್ದು, ಈಶಾನ್ಯ ಸಾರಿಗೆ ನಿಗಮವೇ ಆರ್ಥಿಕವಾಗಿ ಉತ್ತಮ ಚೇತರಿಕೆ ಕಂಡಿದೆ ಎನ್ನುವುದು ಮೂಲಗಳ ಮಾಹಿತಿ. ಬೇರೆ ನಿಗಮಗಳು ಇಂದಿಗೂ ಸಾಕಷ್ಟು ಪ್ರಯಾಸ ಪಡುತ್ತಿದ್ದರೆ ಈಶಾನ್ಯ ಸಾರಿಗೆ ಸಂಸ್ಥೆ ಮಾತ್ರ ಸಹಜ ಸ್ಥಿತಿಗೆ ಮರಳುವ ಹಂತಕ್ಕೆ ಬಂದಿದೆ. ಮುಂಚೆಗೆ ಹೋಲಿಸಿದರೆ ಆದಾಯ ಕುಗ್ಗಿದ್ದರೂ ಬೇರೆ ನಿಗಮಗಳಿಗಿಂತ ಉತ್ತಮ ಎನ್ನುವಂತಿದೆ.
ಈಶಾನ್ಯ ಸಾರಿಗೆ ಸಂಸ್ಥೆ ರಾಯಚೂರು ವಿಭಾಗ ಈಗ ಆರ್ಥಿಕವಾಗಿ ಚೇತರಿಕೆ ಕಾಣುತ್ತಿದೆ. ಕಳೆದ ತಿಂಗಳುಗಳಿಗೆ ಹೋಲಿಸಿದರೆ ಈಗ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಲಾಕ್‌ಡೌನ್ ಪೂರ್ವದಲ್ಲಿ ಬರುತ್ತಿದ್ದ ಆದಾಯಕ್ಕೆ ಹೋಲಿಸಿದರೆ ಶೇ.40 ಕಡಿಮೆ ಇದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್‌ಗಳ ಸಂಚಾರ ಆರಂಭಿಸಿಲ್ಲ. ಬೇಡಿಕೆ ಬಂದ ಕಡೆ ಬಸ್ ಓಡಿಸಲು ನಿಗಮ ಸಿದ್ಧವಿದೆ. –ವೆಂಕಟೇಶ, ವಿಭಾಗೀಯ ನಿಯಂತ್ರಣಾಧಿಕಾರಿ, ಈಶಾನ್ಯ ಸಾರಿಗೆ ಸಂಸ್ಥೆ, ರಾಯಚೂರು
ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.