![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 7, 2022, 2:37 PM IST
ಸಿಂಧನೂರು: ಕೊರೊನಾ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಸಾಕಷ್ಟು ಕೆಲಸ ನಿರ್ವಹಿಸಿದೆ. ಮುಂದಿನ ದಿನಗಳಲ್ಲೂ ತುರ್ತು ನೆರವಿಗೆ ಧಾವಿಸಲು 15 ಸಾವಿರ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ನಗರದ ಸರ್ಕ್ನೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಲ್ಲ ತಾಲೂಕಿನಲ್ಲೂ ಸ್ವಯಂ ಸೇವಕ ಬಳಗವನ್ನು ಸನ್ನದ್ಧಗೊಳಿಸಲಾಗುತ್ತಿದೆ. ಕೊರೊನಾದಂತಹ ವಿಪತ್ತಿನ ಪರಿಸ್ಥಿತಿಯಲ್ಲಿ ನಮ್ಮ ತಂಡ ರಾಜ್ಯವ್ಯಾಪಿ ತನ್ನ ಸೇವೆಯನ್ನು ಒದಗಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿ ವಿಕೋಪ ಇಲ್ಲವೇ ಇತರೆ ಪರಿಸ್ಥಿತಿಯಲ್ಲಿ ದಿಢೀರ್ ಸೇವೆ ಪಡೆದುಕೊಳ್ಳಲು ರಾಜ್ಯ ಸರಕಾರದ ಸೂಚನೆಯ ಪ್ರಕಾರ ತಂಡವನ್ನು ಕಟ್ಟಲಾಗುತ್ತಿದೆ. ಸ್ವಯಂ ಸೇವಕರ ನೇಮಕವನ್ನು ಆರಂಭಿಸಲಾಗಿದೆ ಎಂದರು.
ವಿಶೇಷ ತರಬೇತಿ: ಅರಣ್ಯ ಇಲಾಖೆಯ ಸಹಕಾರದೊಂದಿಗೆ 1 ಲಕ್ಷ ಬೀಜದುಂಡೆಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬಳಗದಿಂದ 1 ಕೋಟಿ ಬೀಜದುಂಡೆ ತಯಾರಿಸಿ, ಪರಿಸರ ಬೆಳೆಸಲು ಶ್ರಮಿಸುವುದಕ್ಕೆ ನಿರ್ಧರಿಸಲಾಗಿದೆ. ಅಗ್ನಿಶಾಮಕ ದಳದೊಂದಿಗೆ ಕೈ ಜೋಡಿಸಿ ಕರ್ತವ್ಯ ನಿರ್ವಹಿಸಲು ವಿಪತ್ತು ನಿರ್ವಹಣಾ ತರಬೇತಿ ಒದಗಿಸಲು ಸರಕಾರ ಸಮ್ಮತಿ ಸೂಚಿಸಿದೆ. ಜಿಲ್ಲಾಮಟ್ಟದಲ್ಲಿ ಇದಕ್ಕಾಗಿ ತಂಡಗಳನ್ನು ರಚನೆ ಮಾಡಲಾಗಿದ್ದು, 35 ಶೈಕ್ಷಣಿಕ ಜಿಲ್ಲೆಗಳಲ್ಲೂ ಈ ಕಾರ್ಯ ಭರದಿಂದ ಸಾಗಿದೆ ಎಂದರು.
ಮನೆ-ಮನೆಯಲ್ಲೂ ತ್ರಿವರ್ಣ ಧ್ವಜ: ಆಗಸ್ಟ್ 17ರಿಂದ ರಾಜ್ಯದಲ್ಲಿ ಮನೆ-ಮನೆಯಲ್ಲೂ ತ್ರಿವರ್ಣ ಧ್ವಜ ಇಡುವ ಮೂಲಕ ರಾಷ್ಟ್ರಪ್ರೇಮವನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಉನ್ನತ ಶಿಕ್ಷಣ ಸಚಿವರು ಈ ಬಗ್ಗೆ ಚರ್ಚೆ ನಡೆಸಿದ್ದು, ರಾಷ್ಟ್ರೀಯತೆ ಪ್ರೇರೇಪಿಸಲು ಮತ್ತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ನಾಗೋಜಿರಾವ್ ಕರಾಡೆ, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಘವೇಂದ್ರ ರಾವ್ ಪವಾರ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.