ಐಐಟಿ ಬಳಿಕ ಏಮ್ಸ್ ಗೂ ಎಳ್ಳು ನೀರು?
Team Udayavani, Mar 19, 2022, 1:07 PM IST
ರಾಯಚೂರು: ಮಹತ್ವದ ಯೋಜನೆಗಳ ವಿಚಾರದಲ್ಲಿ ಜಿಲ್ಲೆಯ ಜನರ ನಿರೀಕ್ಷೆಗಳು ಹುಸಿಯಾಗುತ್ತಲೇ ಬಂದಿದ್ದು, ಈಗ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ವಿಚಾರದಲ್ಲೂ ಅಂಥದ್ದೇ ಸನ್ನಿವೇಶ ಏರ್ಪಟ್ಟಿದೆ.
ಐಐಟಿಯಂಥ ಮಹತ್ವದ ಸಂಸ್ಥೆಯಂತೆ ಏಮ್ಸ್ ಕೂಡ ಧಾರವಾಡ ಪಾಲಾಗುವ ಲಕ್ಷಣಗಳು ದಟ್ಟವಾಗಿದ್ದು, ಜಿಲ್ಲೆಗೆ ಮತ್ತೊಮ್ಮೆ ಅನ್ಯಾಯವಾಗುತ್ತಿದೆ. ಶತಾಯ ಗತಾಯ ಜಿಲ್ಲೆಗೆ ಏಮ್ಸ್ ತಂದೇ ತರುತ್ತೇವೆ ಎಂದು ಜಂಬ ಕೊಚ್ಚಿಕೊಂಡಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಅನಗತ್ಯ ಕಾಲಕ್ಷೇಪ ಮಾಡಿದ್ದು, ಸದ್ದಿಲ್ಲದೇ ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ತಜ್ಞರ ತಂಡ ಸ್ಥಳ ಪರಿಶೀಲನೆ ಮಾಡಿದೆ ಎಂದು ತಿಳಿದು ಬಂದಿದೆ. ಆ ಮೂಲಕ ಜಿಲ್ಲೆಯ ಜನತೆಗೆ ಜನ ನಾಯಕರ ನಯವಂಚನೆ ಮುಂದುವರಿದಿದೆ.
ರಾಜ್ಯಸಭೆ ಸದಸ್ಯ ಕೆ.ನಾರಾಯಣ ಸದನದಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ| ಭಾರತಿ ಪವಾರ್ ಉತ್ತರ ನೀಡಿದ್ದು, ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದೆ ಎಂದಿದ್ದಾರೆ.
ರಾಯಚೂರು ಜಿಲ್ಲೆ ಈ ವಿಚಾರದಲ್ಲಿ ಲೆಕ್ಕಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂಥದ್ದೇ ಸನ್ನಿವೇಶ ಐಐಟಿ ಸ್ಥಾಪನೆ ವಿಚಾರದಲ್ಲೂ ರಾಯಚೂರಿಗೆ ಏಮ್ಸ್ ನೀಡುವ ಭರವಸೆಯನ್ನು ಬಿಜೆಪಿ ನಾಯಕರು ಹೇಳಿದ್ದರು.
ಸಚಿವ ಸ್ಥಾನ ನೀಡುವ ವಿಚಾರದಿಂದ ಹಿಡಿದು ಅಡಿಗಡಿಗೆ ಜಿಲ್ಲೆಗೆ ವಂಚನೆಯಾಗುತ್ತಲೇ ಬರುತ್ತಿದ್ದು, ಮಹತ್ವದ ಯೋಜನೆಗಳ ವಿಚಾರದಲ್ಲಿ ರಾಯಚೂರು ಗಣನೆಗೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಬೇಡವಾದದ್ದು ಮಾತ್ರ ಲಭ್ಯ
ಈ ಹಿಂದೆ ಐಐಟಿ ಸಂಸ್ಥೆಯನ್ನು ಜಿಲ್ಲೆಗೆ ನೀಡಬೇಕು ಎನ್ನುವ ಕುರಿತು ದೊಡ್ಡ ಹೋರಾಟ ನಡೆಸಲಾಗಿತ್ತು. ಆಗಿನ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಮೂರು ಜಿಲ್ಲೆಗಳ ಹೆಸರು ಶಿಫಾರಸು ಮಾಡಿದ್ದರಿಂದ ಅದು ಧಾರವಾಡ ಪಾಲಾಯಿತು. ಆಗ ಜಿಲ್ಲೆಗೆ ಅನ್ಯಾಯವಾಗಿದ್ದು, ಏಮ್ಸ್ ನೀಡುವ ಮೂಲಕ ನ್ಯಾಯ ನೀಡಲಾಗುವುದು ಎಂದು ಜನಪ್ರತಿನಿಧಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.
ಈಗ ಅದು ಕೂಡ ಕೈ ತಪ್ಪುವ ಹಂತದಲ್ಲಿದೆ. ಈಚೆಗೆ ಟೆಕ್ಸ್‌ಟೈಲ್ ಪಾರ್ಕ್ ವಿಚಾರದಲ್ಲೂ ವಿಜಯಪುರ, ಕಲಬುರಗಿ ಜಿಲ್ಲೆಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ, ಜಿಲ್ಲೆಗೆ ಬೇಡವಾದ ವೈಟಿಪಿಎಸ್ ಪವರ್ ಪ್ಲಾಂಟ್‌ನಂಥ ಯೋಜನೆಗಳು ನೀಡಲಾಗುತ್ತಿದೆ. ಇಎಸ್‌ಐ, ಜಯದೇವ ಹೃದ್ರೋಗ ಕೇಂದ್ರಗಳಂಥ ವೈದ್ಯಕೀಯ ಸಂಸ್ಥೆಗಳು ಮಾತ್ರ ಕಲಬುರಗಿ ಪಾಲಾಗುತ್ತಿವೆ.
ಇನ್ನೂ ಕಾಲ ಮಿಂಚಿಲ್ಲ
ರಾಜ್ಯ ಸರ್ಕಾರ ಶಿಫಾರಸು ಮಾಡಿದ ಮಾತ್ರಕ್ಕೆ, ಕೇಂದ್ರ ಸರ್ಕಾರ ಸ್ಥಳ ಪರಿಶೀಲನೆ ಮಾಡಿದ ತಕ್ಷಣ ಏಮ್ಸ್ ಸ್ಥಾಪನೆಯಾದಂತೆ ಅಲ್ಲ. ರಾಯಚೂರು ಜಿಲ್ಲೆಗೆ ಏಮ್ಸ್ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಟ್ಟಿ ನಿಲುವು ಪ್ರದರ್ಶಿಸಲು ಇನ್ನೂ ಕಾಲಾವಕಾಶ ಇದೆ. ಅದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಗಟ್ಟಿಯಾಗಿ ನಿಲ್ಲಬೇಕಿದೆ. ಧಾರವಾಡಕ್ಕೆ ಐಐಟಿ ನೀಡಿದ್ದು, ರಾಯಚೂರಿಗೆ ಏಮ್ಸ್ ಸ್ಥಳಾಂತರಿಸಲಿ ಎಂಬ ಹಕ್ಕೊತ್ತಾಯ ಮಾಡಬೇಕಿದೆ. ಸಂಸದರ ನೇತೃತ್ವದ ನಿಯೋಗ ಅವಿರತ ಶ್ರಮಿಸಬೇಕಿದೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳ ನೆಪ ಹೇಳುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಆ ಯೋಜನೆಗಳು ಜಾರಿಯಲ್ಲಿವೆ ಎಂದು ಮನವರಿಕೆ ಮಾಡಿಕೊಡಬೇಕಿದೆ. ಏಮ್ಸ್ ಕೇವಲ ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತೆಲಂಗಾಣದ ಗಡಿಭಾಗದ ಜನರಿಗೆ ಅನುಕೂಲವಾಗಲಿದೆ ಎಂಬ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಜಿಲ್ಲೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.