ನಿವೇದನೆ ಮಾಡಿಕೊಳ್ಳಲು ಸಹಕಾರ ಸಂಸ್ಥೆಗಳಿಗೆ ಅವಕಾಶ
Team Udayavani, Dec 1, 2018, 1:11 PM IST
ಸಿಂಧನೂರು: ನೀತಿ ಆಯೋಗ ಸಹಕಾರ ಸಂಸ್ಥೆಗಳಿಗೆ ನಿವೇದನೆ ಮಾಡಿಕೊಳ್ಳಲು ಒಂದು ಅವಕಾಶ ಮಾಡಿಕೊಟ್ಟಿದೆ. ಅದರಂತೆ ಸಹಕಾರ ಸಂಸ್ಥೆಗಳು ತಮಗೆ ಆಗುವ ಕಷ್ಟಗಳು ಹಾಗೂ ಕಿರುಕುಳ ಮತ್ತು ರಾಜ್ಯ ಸರಕಾರಗಳ ಹಸ್ತಕ್ಷೇಪದ
ಬಗ್ಗೆ ವಿವರಿಸಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಸಂಸ್ಥೆಗಳ ನಿರ್ದೇಶಕ ಆರ್ .ತಿಮ್ಮಯ್ಯ ಹೇಳಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು, ಶಾಸನಬದ್ಧ ಸಹಕಾರ ಸಂಸ್ಥೆ ರಾಯಚೂರು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಾಲ ವಸೂಲಾತಿ ಮತ್ತು ದಾವೆ ದಾಖಲಾತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಆದಾಯ ತೆರಿಗೆ ಅಧಿಕಾರಿಗಳು ಡಿ.15ರೊಳಗೆ ಹಣ ಕಟ್ಟುವಂತೆ ಸಹಕಾರಿ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದರು. ಇದರ ವಿರುದ್ಧ ಉದಯ ಸಹಕಾರಿ ಸಂಘ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಕೋರ್ಟ್ ಆದೇಶ ಬಂದ ನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಜನರ ಸಹಕಾರದೊಂದಿಗೆ ಸಹಕಾರ ಸಂಸ್ಥೆಗಳು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.
ಸಹಕಾರ ಸಂಸ್ಥೆಗಳ ನಿರ್ದೇಶಕ ರಾಜಶೇಖರ ಮಾತನಾಡಿ, ಇಡೀ ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸೇರಿದಂತೆ ಎಲ್ಲ ರೀತಿಯ ಬ್ಯಾಂಕ್‌ಗಳು ಕಷ್ಟದಲ್ಲಿವೆ. ಕಾನೂನುಬದ್ಧವಾಗಿ ಸಹಕಾರ ಸಂಘಗಳು ಸಾಲ ಕೊಡುವ ಜತೆಗೆ ಯಾರು ಸೇವೆ ಕೊಡಲಾರದಿದ್ದರೂ ನಾವು ಜನರಿಗೆ ಸೇವೆ ಕೊಡುತ್ತಿದ್ದರೂ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ತಪ್ಪಿಲ್ಲ ಎಂದು ಹೇಳಿದರು.
ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದರೂ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳು ತಮ್ಮದೆ ಆದ ಗುರಿ ಮುಟ್ಟುವ ಸಲುವಾಗಿ ಕಿರುಕುಳ ನೀಡುತ್ತ ಬಂದಿದ್ದು, ಇದು ನಿಲ್ಲದಿದ್ದರೆ ಮುಂದಿನ ಹಂತದಲ್ಲಿ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ದತ್ತು ಜೋಷಿ, ರಾಜಶೇಖರ ಹೂಗಾರ ಸೇರಿದಂತೆ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳ ಸಹಕಾರಿ ಸಿಬ್ಬಂದಿ ಕಾರ್ಯ ನಿರ್ವಾಹಕ ಅಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.