ಕೇಳಿದ್ದು ಬೆಟ್ಟದಷ್ಟು: ಸಿಕ್ಕಿದ್ದು ಮುಷ್ಟಿಯಷ್ಟು
Team Udayavani, Feb 9, 2019, 9:57 AM IST
ರಾಯಚೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತ ಯೋಜನೆಗಳು ಸಿಗದಿರುವುದು ಜಿಲ್ಲೆಯ ಜನರ ಆಸೆಗೆ ಮಣ್ಣೆರಚಿದಂತಾಗಿದೆ. ಒಟ್ಟಾರೆ ಬಜೆಟ್ ನೋಡಿದಾಗ ಕೇಳಿದ್ದು ಬೆಟ್ಟದಷ್ಟಾದರೂ ಸಿಕ್ಕಿದ್ದು ಮುಷ್ಟಿಯಷ್ಟು ಎನ್ನುವಂತಾಗಿದೆ.
ನೀರಾವರಿ ವಲಯದ ಬಲವರ್ಧನೆಗೆ ಹೆಚ್ಚು ಒತ್ತು ನೀಡುವಲ್ಲಿ ಜಿಲ್ಲೆಗೆ ಭಾರೀ ಪ್ರಮಾಣದ ಯೋಜನೆಗಳ ನಿರೀಕ್ಷೆ ಇತ್ತು. ಅದರಲ್ಲಿ ಕೆಲ ಯೋಜನೆಗಳು ಹಲವು ವರ್ಷಗಳ ಬೇಡಿಕೆಗಳಾಗಿದ್ದವು. ಸಣ್ಣ ಪುಟ್ಟ ನೀರಾವರಿ ಯೋಜನೆಗಳು, ಕುಡಿಯುವ ನೀರು ಹಾಗೂ ಏತ ನೀರಾವರಿಗೆ ಒತ್ತು ನೀಡಲಾಗಿದೆ. ಜಲಧಾರೆ ಯೋಜನೆಯಡಿ ನಾಲ್ಕು ಜಿಲ್ಲೆಗಳಿಗೆ 4000 ಕೋಟಿ ಮೀಸಲಿಟ್ಟಿದ್ದು, ಅದರಲ್ಲಿ ಜಿಲ್ಲೆಯೂ ಸೇರಿದೆ ಎನ್ನುವುದು ಸಮಾಧಾನಕರ ಸಂಗತಿ. ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ಸಿಕ್ಕಿದೆ.
ಆದರೆ, ತುಂಗಭದ್ರಾ ಹೂಳಿನ ಸಮಸ್ಯೆ ಪರ್ಯಾಯ ಜಲಾಶಯ ನಿರ್ಮಾಣದ ವಿಚಾರವಾಗಲಿ, ಎನ್‌ಆರ್‌ಬಿಸಿ ಕಾಲುವೆಗಳ ಆಧುನೀಕರಣವಾಗಲಿ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. ಹೀಗಾಗಿ ಜಿಲ್ಲೆಯ ರೈತರ ಗೋಳಿನ ಬಾಳು ಈ ವರ್ಷವೂ ಹೀಗೆ ಸಾಗಲಿದೆ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಒದಗಿಸಲು ಗಣೆಕಲ್ ಜಲಾಶಯಕ್ಕೆ ನೀರು ಪೂರೈಸಲು 140 ಕೋಟಿ, ತುಂಗಭದ್ರಾ ನದಿಯಿಂದ ಗುಂಜಳ್ಳಿ ಬಸಪ್ಪ ಕೆರೆ ನೀರು ತುಂಬಿಸಲು 70 ಕೋಟಿ ಹಾಗೂ ಚಿಕ್ಕಮಂಚಾಲಿ ಹತ್ತಿರದಿಂದ ಮಂತ್ರಾಲಯಕ್ಕೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು 50 ಕೋಟಿ ರೂ ನೀಡಲಾಗಿದೆ. ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ, ಪೌಷ್ಟಿಕಾಂಶ ಹೆಚ್ಚಳಕ್ಕೆ ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಗಳ ಸ್ಥಾಪನೆಗೆ ಒಂದು ಕೋಟಿ, ಮಸ್ಕಿ ಲಿಂಗಸುಗೂರು ಏತ ನೀರಾವರಿಗೆ 200 ಕೋಟಿ ಹಾಗೂ ಡಾ| ನಂಜುಂಡಪ್ಪ ವದಿಯನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3010 ಕೋಟಿ ಮೀಸಲಿಟ್ಟಿರುವುದು ಜಿಲ್ಲೆಗೆ ಅನುಕೂಲ ಕಲ್ಪಿಸಬಹುದು. ಇನ್ನೂ ಪಶು ವೈದ್ಯಕೀಯ ಕಾಲೇಜ್ ಕೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ಕ್ಷೇತ್ರದಲ್ಲಿ ಅದರ ಬದಲಿಗೆ ರೈತ ಪ್ರಾತ್ಯಕ್ಷಿಕೆ ಕೇಂದ್ರ ಆರಂಭಿಸಲಾಗುತ್ತಿದೆ.
ಅನುದಾನದಲ್ಲಿಯೇ ಕೊಕ್ಕೆ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಬಾರಿ ಎರಡು ಸಾವಿರ ಕೋಟಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಈ ಬಾರಿಯೂ ಅದೇ 1500 ರೂ. ಘೋಷಿಸಿದ್ದಾರೆ. ಆದರೆ, ಆ ಅನುದಾನದಲ್ಲಿ 150 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಿಸುವ ಘೋಷಣೆ ಮಾಡಿದ್ದರಿಂದ ವಿಶೇಷ ಅನುದಾನಕ್ಕೆ ಅರ್ಥವಿಲ್ಲದಂತಾಗಿದೆ.
ಕಲಬುರಗಿಗೆ ಹೆಚ್ಚು: ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ರಾಯಚೂರು ಯಾದಗಿರಿಗೆ ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳು ಸಿಕ್ಕಿಲ್ಲ. ಬಹತೇಕ ಯೋಜನೆಗಳು ಕಲಬುರಗಿ ಪಾಲಾಗಿವೆ. ಇದರಿಂದ ಹೈ-ಕ ಎಂದರೆ ಕಲಬುರಗಿ ಮಾತ್ರ ಎನ್ನುವ ರೀತಿಯಾಗಿದೆ ಎಂಬ ಟೀಕೆಗಳು ಬಂದಿವೆ.
ಈಡೇರದ ಭರಸವೆಗಳು: ನವಲಿ ಬಳಿ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ವಿಶೇಷ ಅನುದಾನ ಸಿಗುವ ವಿಶ್ವಾಸವಿತ್ತು. 6500 ಕೋಟಿ ಯೋಜನೆ ಇದಾಗಿದ್ದು, ಟಿಬಿ ಡ್ಯಾಂನ ಹೂಳಿನ ಸಮಸ್ಯೆಗೆ ಪರ್ಯಾಯವಾಗಿತ್ತು. ಅದರ ಜತೆಗೆ ಎನ್‌ಆರ್‌ಬಿಸಿ ಕಾಲವೆಗಳ ಆಧುನೀಕರಣಕ್ಕೆ ವಿಶೇಷ ಅನುದಾನ ಬೇಕಿತ್ತು. ಒಪೆಕ್ ಸ್ವಾಯತ್ತತೆ ವಿಶೇಷ ಅನುದಾನ, ರಾಯಚೂರು ಪ್ರತ್ಯೇಕ ವಿವಿ ಅನುಷ್ಠಾನಕ್ಕೆ ಒತ್ತು ಸೇರಿ ಹಲವು ಅಂಶಗಳು ನಿರೀಕ್ಷೆಯಲ್ಲಿದ್ದವು.
ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಾವು ಕೇಳಿದ ಯೋಜನೆಗಳನ್ನು ಘೋಷಿಸುವ ಮೂಲಕ ಮುಖ್ಯಮಂತ್ರಿ ಅನುಕೂಲ ಮಾಡಿದ್ದಾರೆ. ಸಾಧಕ ಬಾಧಕ ಎರಡೂ ಇವೆ. ನನ್ನ ಕ್ಷೇತ್ರ ಒಳಗೊಂಡಂತೆ ಗ್ರಾಮೀಣ ಕ್ಷೇತ್ರಕ್ಕೆ ಒಂದಷ್ಟು ಯೋಜನೆ ಜಾರಿಯಾಗಿವೆ. ಸಮಾಧಾನಕರ ಬಜೆಟ್.
•ಡಾ| ಶಿವರಾಜ ಪಾಟೀಲ,ಬಿಜೆಪಿ ನಗರ ಶಾಸಕ
ದೇವದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ಸರಕಾರಿ ಶಾಲೆಗಳನ್ನು ಬಲಪಡಿಸಲು ಇನ್ನಿಷ್ಟು ಅನುದಾನ ಮೀಸಲಿಡಬೇಕಾಗಿತ್ತು. ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಳತೀರದು. ರಾಜ್ಯದಲ್ಲಿ 28 ಸಾವಿರ ಶಿಕ್ಷಕರ ಕೊರತೆ ಇದೆ. ಬಜೆಟ್‌ನಲ್ಲಿ ನೇಮಕಾತಿ ವಿಚಾರ ಮಾಡದೇ ಇರುವ ಕಾರಣ ವಿದ್ಯಾರ್ಥಿಗಳಿಗೆ ಬಜೆಟ್ ನಿರಾಸೆದಾಯಕವಾಗಿದೆ.
•ಶಬ್ಬೀರ್ ಜಾಲಹಳ್ಳಿ,ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ
ಮಾನ್ವಿ: ಬಜೆಟ್ ಉತ್ತಮವಾಗಿದೆ. ರೈತರಿಗೆ ಮತ್ತು ಕಾರ್ಮಿಕ ವರ್ಗಕ್ಕೆ ತುಂಬಾ ಅನುಕೂಲವಾಗಿದೆ. ಆದರೆ ವಿಶ್ವಕರ್ಮ ಸಮುದಾಯಕ್ಕೆ ಕೇವಲ 25 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಸಮುದಾಯಕ್ಕೆ ಇದು ಸಾಕಾಗುವುದಿಲ್ಲ. ಬಡ ಮತ್ತು ಕುಲಕಸಬನ್ನು ನಂಬಿರುವ ಜನಾಂಗಕ್ಕೆ ಹೆಚ್ಚಿನ ಅನುದಾನ ನೀಡಬೇಕಾಗಿತ್ತು.
•ಸತೀಶ ವಿಶ್ವಕರ್ಮ,ಮಾನ್ವಿ
ಸಿಎಂ ಕುಮಾರಸ್ವಾಮಿ ಅವರು ರೈತರು, ಕಾರ್ಮಿಕರು, ಮಹಿಳೆಯರು, ಗರ್ಭಿಣಿಯರಿಗೆ, ಮಕ್ಕಳ ಶಿಕ್ಷಣ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ತೋಟಗಾರಿಕೆ, ಆರೋಗ್ಯ, ಆಡಳಿತ ಸುಧಾರಣೆ, ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣೆನೆಗೆ ತೆಗೆದುಕೊಂಡು ಒಂದು ಪರಿಪೂರ್ಣ ಬಜೆಟ್ ಮಂಡಿಸಿದ್ದಾರೆ. ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ರೈತರಿಗೆ ಯಾವುದೇ ಗೊಂದಲವಾಗದ ರೀತಿಯಲ್ಲಿ ಜಾರಿಯಾಗಬೇಕು.
•ವಸಂತ ಜಾನೇಕಲ್
ಇದೊಂದು ಸಮತೋಲನ ಕಾಯ್ದುಕೊಳ್ಳುವ ಉದ್ದೇಶ ಹೊಂದಿದ ಬಜೆಟ್ ಆಗಿದೆ. 150 ತಾಲೂಕಿನಲ್ಲಿ ಬರ ಇವೆ ಎಂದು ಹೇಳ್ತಾರೆ. ಅದಕ್ಕಾಗಿ ಇನ್ನೂ ಹೆಚ್ಚಿನ ಅನುದಾನ ಮೀಸಲಿಡಬೇಕಾಗಿತ್ತು. ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದರೂ, ಈ ಅನುದಾನ ಸಮರ್ಪಕವಾಗಿ ಬಳಕೆ ಆಗುವ ಬಗ್ಗೆ ಅನುಮಾನವಿದೆ. ಅಂಗನವಾಡಿ ಕಾರ್ಯಕರ್ತರಿಗೆ ನವೆಂಬರ್‌ಗೆ ಅನ್ವಯವಾಗುವಂತೆ 500 ರೂ. ಹೆಚ್ಚಿಸಿರುವುದು ಸೇರಿದಂತೆ ಕೆಲವು ವಿಷಯಗಳಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ. ಮುಂದಿನ ಚುನಾವಣೆ ಮೇಲೆ ಕಣ್ಣಿಡಲಾಗಿದೆ.
•ಮಹೇಶ ನೀರಮಾನ್ವಿ
ಕಳೆದ ರಾಜ್ಯ ಬಜೆಟ್‌ನಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಅದು ಇಲ್ಲಿಯವರೆಗೂ ರೈತರಿಗೆ ತಲುಪಿಲ್ಲ. ಈ ಬಾರಿಯು ಸಾಲ ಮನ್ನಾ ಘೋಷಿಸಲಾಗಿದೆ. ಅದು ಕೇವಲ ಘೋಷಣೆಗೆ ಸೀಮಿತವಾಗದಿರಲಿ. ತೊಗರಿ ಕೇಂದ್ರ ಸ್ಥಾಪಿಸಿ ಬೆಂಬಲ ಬೆಲೆ ನೀಡಬೇಕು.
•ವಿರುಪಾಕ್ಷಗೌಡ ನಂದರೆಡ್ಡಿ,ರೈತ, ಸಿರವಾರ
ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಸಿರವಾರವನ್ನು ನೂತನ ತಾಲೂಕನ್ನಾಗಿ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೇ ಅಧಿಕಾರಿಗಳನ್ನು ನೇಮಿಸಿಲ್ಲ. ಈ ಸಲದ ಬಜೆಟ್‌ನಲ್ಲಿಯೂ ನೂತನ ತಾಲೂಕನ್ನು ಕಡೆಗಣಿಸಲಾಗಿದೆ.
•ಜೆ. ದೇವರಾಜಗೌಡ,ತಾಲೂಕು ಹೋರಾಟ ಸಮಿತಿ ಅಧ್ಯಕ್ಷ
ಬಜೆಟ್ ಕೇವಲ ರೈತರಿಗೆ, ಕಾರ್ಮಿಕರಿಗೆ, ಹಿರಿಯರಿಗೆ, ಮಹಿಳೆಯರಿಗೆ ಸೀಮಿತವಾಗಿದೆ. ವಿದ್ಯಾರ್ಥಿಗಳ ಏಳ್ಗೆಗೆ ಸಂಬಂಧಿಸಿದ ಯಾವ ಯೋಜನೆಗಳು ಇಲ್ಲ. ಕಳೆದ ಬಜೆಟ್‌ನಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಈಗಲೂ ಅದೇ ಮುಂದುವರಿದಿದೆ.
•ಮಧುಕುಮಾರ, ಕಾಲೇಜು ವಿದ್ಯಾರ್ಥಿ
ಸಿಎಂ ಎಚ್.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ನಾರಾಯಣಪುರ ಬಲದಂಡೆ ಕಾಲುವೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕಿತ್ತು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಾಗಿತ್ತು. ಹೊಸ ಹೊಸ ಯೋಜನೆಗಳ ನಿರೀಕ್ಷೆಯಲ್ಲಿದ್ದ ರೈತರಿಗೆ ಬಜೆಟ್ ನಿರಾಸೆ ಮೂಡಿಸಿದೆ.
•ಮಲ್ಲಯ್ಯ ಕಟ್ಟಮನಿ,ಕೆಆರ್‌ಎಸ್ ಸಂಘಟನೆ ಅಧ್ಯಕ್ಷ
ಮಸ್ಕಿ: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮದು ರೈತಪರ ಸರಕಾರ ಎನ್ನುತ್ತಾರೆ. ಆದರೆ ರೈತರಿಗಾಗಿ ಯಾವುದೇ ಬಹುದೊಡ್ಡ ನೀರಾವರಿ ಯೋಜನೆ ಪ್ರಕಟಿಸಿಲ್ಲ. ಈ ಭಾಗದ ಬಹುದೊಡ್ಡ ಬೇಡಿಕೆಯಾದ ನಾರಾಯಣಪುರ ಬಲದಂಡೆ 5ಎ ನಾಲಾ ಯೋಜನೆ ಜಾರಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ. ಇದು ರೈತರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ.
•ಶಿವಕುಮಾರ ವಟಗಲ್
ರಾಜ್ಯದಲ್ಲಿ ಲಕ್ಷಾಂತರ ನಿರುದ್ಯೋಗ ಯುವಕರಿದ್ದಾರೆ. ಅವರಿಗೆ ಸರಿಯಾದ ಕೆಲಸವಿಲ್ಲ. ಬಜೆಟ್‌ನಲ್ಲಿ ಕೋಟಿ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಬಗ್ಗೆ ಪ್ರಸ್ತಾಪವಿದೆ. ಆದರೆ ಇದು ಕಾಗದದಲ್ಲಿ ಮಾತ್ರ ಸಾಧ್ಯ. ಎಲ್ಲಿ ಯಾರಿಗೆ ಉದ್ಯೋಗ ನೀಡಿದ್ದಾರೆ? ಸಂಪೂರ್ಣ ಬೋಗಸ್ ಬಜೆಟ್.
•ಸಂದೀಪ ದಿನ್ನಿ, ಮಸ್ಕಿ
ಲಿಂಗಸುಗೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ರೈತ ಹಾಗೂ ಜನಪರವಾಗಿದೆ. ಆದರೆ ಹೆಚ್ಚಿನ ಯೋಜನೆ ಹಾಗೂ ಅನುದಾನವನ್ನು ತಮ್ಮ ಭಾಗಗಳಿಗೆ ನೀಡಿದ್ದಾರೆ. ನಮ್ಮ ಜಿಲ್ಲೆಗೆ ಹೆಚ್ಚಿನ ಯೋಜನೆ ನೀಡಬೇಕಾಗಿತ್ತು.
•ಮಂಜುನಾಥ ಪಾಟೀಲ,ಮಾಲೀಕರು ಬಸವ ಆಟೋಮೋಟಿವ್ ಲಿಂಗಸುಗೂರು
ಬಜೆಟ್‌ನಲ್ಲಿ ಉತ್ತಮ ಅಂಶಗಳಿವೆ. ಆದರೆ ರಾಯಚೂರಿಗೆ ವಿಮಾನ ನಿಲ್ದಾಣವಾಗಲಿ ಅಥವಾ ನಿರುದ್ಯೋಗ ಸಮಸ್ಯೆ ನಿವಾರಿಸಿ ಉದ್ಯೋಗ ಸೃಷ್ಟಿಸುವ ಯೋಜನೆ ನೀಡಿಲ್ಲ. ಉದ್ಯೋಗ ಸೃಷ್ಟಿಸುವ ಅಂಶ ಇದ್ದರೆ ನಿರುದ್ಯೋಗಿಗಳಿಗೆ ಅನುಕೂಲವಾಗುತ್ತಿತ್ತು. ಇದರಲ್ಲಿ ತಾರತಮ್ಯ ನೀತಿ ಎದ್ದು ಕಾಣುತ್ತಿದೆ.
•ಬಸವರಾಜ ಯಲಗಲದಿನ್ನಿ,ವರ್ತಕರು ಲಿಂಗಸುಗೂರು
ಇದೊಂದು ಅತ್ಯುತ್ತಮ ಬಜೆಟ್. ಇತಿಹಾಸದಲ್ಲಿಯೇ ಇಷ್ಟೊಂದು ಉತ್ತಮ ಅಂಶಗಳನ್ನು ಒಳಗೊಂಡ ಬಜೆಟ್ ಮಂಡನೆ ಆಗಿಲ್ಲ. ಮುಖ್ಯವಾಗಿ ರೈತರು, ಬಡವರಿಗೆ ಅನುಕೂಲವಾಗುವ ಸಾಕಷ್ಟು ಅಂಶಗಳು ಒಳಗೊಂಡಿದೆ. ಸಿಂಧನೂರಿಗೆ ಪಶು ವೈದ್ಯಕೀಯ ಕಾಲೇಜ್ ಕೇಳಲಾಗಿತ್ತು. ಬದಲಿಗೆ ರೈತ ಪ್ರಾತ್ಯಕ್ಷಿಕೆ ಕೇಂದ್ರ ನೀಡಲಾಗಿದೆ.
•ವೆಂಕಟರಾವ್ ನಾಡಗೌಡ,ಜಿಲ್ಲಾ ಉಸ್ತುವಾರಿ ಸಚಿವ
ನಾನು ಕೇಳಿದ ಎಲ್ಲ ಅಂಶಗಳನ್ನು ಬಜೆಟ್‌ನಲ್ಲಿ ಸೇರಿಸುವ ಮೂಲಕ ಮುಖ್ಯಮಂತ್ರಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ. ಇದೊಂದು ಉತ್ತಮ ಬಜೆಟ್. ನಾನು ನೋಡಿದ ಮಟ್ಟಿಗೆ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ವಿರಳ. ಆದರೆ, ಸಿಎಂ ಎಚ್.ಡಿ.ಕುಮಾರಸ್ವಾಮಿ ಆ ನಿಟ್ಟಿನಲ್ಲಿ ಉತ್ತಮವಾಗಿ ಬಜೆಟ್ ಮಂಡಿಸಿದ್ದಾರೆ.
•ದದ್ದಲ್ ಬಸನಗೌಡ, ಗ್ರಾಮೀಣ ಶಾಸಕ
ಒಟ್ಟಾರೆ ಬಜೆಟ್ ಗಮನಿಸಿದರೆ ಕೃಷಿಗೆ ಪೂರಕ ಅಂಶಗಳು ಕಂಡು ಬರುತ್ತವೆ. ಆದರೆ, ಜಿಲ್ಲೆಯ ಮಟ್ಟಿಗೆ ನಿರಾಸೆಯಾಗಿದೆ. ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ., ಹಗಲು ವೇಳೆ ಕೃಷಿಗೆ ವಿದ್ಯುತ್ ಸೇರಿ ವಿವಿಧ ಅಂಶಗಳು ಉತ್ತಮವಾಗಿದೆ. ಆದರೆ, ಸಾಲ ಮನ್ನಾವನ್ನು ಮತ್ತೆ ಮಾರ್ಚ್‌ವರೆಗೆ ಮುಂದೂಡಿರುವುದು ಸರಿಯಲ್ಲ. ಮಹತ್ವಾಕಾಂಕ್ಷೆ ಯೋಜನೆಗಳೇ ಘೋಷಣೆ ಆಗಲಿಲ್ಲ. ಜನಪ್ರತಿನಿಧಿಗಳು ಸಂಘಟಿತರಾಗಿ ಒತ್ತಡ ಹಾಕಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಇದೊಂದು ರೀತಿಯ ಚೌಚೌ ಬಾತ್ ಬಜೆಟ್ ಆಗಿದ್ದು, ಲೋಕಸಭೆ ಚುನಾವಣೆ ದೃಷ್ಟಿಕೋನವೂ ಅಡಗಿದೆ.
•ಚಾಮರಸ ಮಾಲಿಪಾಟೀಲ, ರಾಜ್ಯ ಗೌರವಾಧ್ಯಕ್ಷ ರೈತ ಸಂಘ ಹಾಗೂ ಹಸಿರು ಸೇನೆ
ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಎಂದರೆ ಕೇವಲ ಬೆಳಗಾವಿ, ವಿಜಯಪುರ ಎಂದು ತಿಳಿದಂತಿದೆ. ಎಲ್ಲ ಯೋಜನೆಗಳನ್ನು ಅಲ್ಲಿಗೆ ನೀಡಿದ್ದಾರೆ. ಹೈ-ಕ ಭಾಗ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಸಣ್ಣ ಪುಟ್ಟ ಯೋಜನೆಗಳಿಂದ ಜಿಲ್ಲೆಯ ಪ್ರಗತಿ ಸಾಧ್ಯವಿಲ್ಲ. ರಾಯಚೂರು ವಿವಿಗೆ ಬಿಡಿಗಾಸು ನೀಡದೆ ಹೊಸ ವಿವಿ ಸ್ಥಾಪಿಸಲು ಮುಂದಾಗಿದ್ದಾರೆ. ನಮ್ಮ ಜನಪ್ರತಿನಿಧಿಗಳ ವೈಫಲ್ಯ ಕಂಡು ಬರುತ್ತಿದೆ. ಎಚ್ಕೆಆರ್‌ಡಿಬಿಗೆ ನೀಡಿದ ಅನುದಾನ ಬೇರೆ ಯೋಜನೆಗೆ ಬಳಸುವುದು ಎಷ್ಟು ಸರಿ?
•ಡಾ| ರಜಾಕ್ ಉಸ್ತಾದ್, ರಾಜ್ಯ ಉಪಾಧ್ಯಕ್ಷ, ಹೈ-ಕ ಹೋರಾಟ ಸಮಿತಿ
ವಾಣಿಜ್ಯಕ ದೃಷ್ಟಿಕೋನದಿಂದ ನೋಡಿದಾಗ ಬಜೆಟ್ ಸಂಪೂರ್ಣ ನಿರಸದಾಯಕವಾಗಿದೆ. ಕೈಗಾರಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲ ಯೋಜನೆ ಜಾರಿ ಆಗಬೇಕಿತ್ತು. ಮುಖ್ಯವಾಗಿ ರಿಂಗ್ ರಸ್ತೆಗೆ ಅನುದಾನ, ಶಕ್ತಿನಗರ ರಾಯಚೂರು ಕಾರ್ಪೋರೇಶನ್ ನಗರ ಘೋಷಣೆ, ಉಡಾನ್ ಯೋಜನೆಗೆ ಏರ್‌ಸ್ಟಿಪ್ ನಿರ್ಮಾಣದಂಥ ಕೆಲಸ ಆಗಬೇಕಿತ್ತು. ಕಳೆದ ಮೂರು ವರ್ಷದಿಂದ ಪ್ರಸ್ತಾವನೆ ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ. ಕೈಗಾರಿಕೆಗಳ ಬೆಳವಣಿಗೆ ಯಾವುದೇ ಪೂರಕ ಅಂಶಗಳಿಲ್ಲ.
•ತ್ರಿವಿಕ್ರಮ ಜೋಶಿ, ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.