ಬಿಜೆಪಿ ಸುಳ್ಳಿಗೆ ಖ್ಯಾತಿ: ಪರಮೇಶ್ವರ್
Team Udayavani, Jul 14, 2017, 3:12 PM IST
ಲಿಂಗಸುಗೂರು: ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರುವುದರಲ್ಲಿ ಬಿಜೆಪಿಯವರು ಮೊದಲಿಗರು ಎಂದು ಕೆಪಿಸಿಸಿ
ಅಧ್ಯಕ್ಷ ಡಾ| ಜಿ. ಪರಮೇಶ್ವರ ಟೀಕಿಸಿದರು.
ಪಟ್ಟಣದ ವಿಸಿಬಿ ಮಹಾವಿದ್ಯಾಲಯದ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡಲಸಂಗಮದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಶೇ.90 ರಷ್ಟು ಈಡೇರಿಸಿದ್ದೇವೆ. ಕಾಂಗ್ರೆಸ್ ನುಡಿದಂತೆ ನಡೆದುಕೊಳ್ಳುತ್ತಿದೆ. ನೀರಾವರಿ ಕ್ಷೇತ್ರಕ್ಕೆ 50 ಸಾವಿರ ಕೋಟಿ ರೂ. ನೀಡಿದ್ದೇವೆ. 1.87 ಲಕ್ಷ ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಲಾಗಿದೆ. ರಾಜ್ಯದ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಅಭಿವೃದ್ಧಿಯಾಗಬೇಕೆಂಬ ಮಹತ್ವದ ಗುರಿ ಇಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿದೆ. ಪರಿಶಿಷ್ಟರ ಅಭಿವೃದ್ಧಿಗಾಗಿ ಟಿಎಸ್‌ಪಿ ಹಾಗೂ ಎಸ್‌ಸಿಪಿ ಯೋಜನೆಗೆ 62 ಸಾವಿರ ಕೋಟಿ ರೂ. ನೀಡಲಾಗಿದೆ. ರಾಜ್ಯದಲ್ಲಿ ಮತ್ತೆ ಸ್ಥಿರ ಸರಕಾರ ಮತ್ತು ಸದೃಢ ಆಡಳಿತಕ್ಕಾಗಿ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದರು.
ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಮೂರು ವರ್ಷ ಕಳೆದರೂ ಪ್ರಧಾನಿ ಮೋದಿಯವರು
ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಅಭಿವೃದ್ಧಿಯ ಬದ್ಧತೆ ಇಲ್ಲದ ಬಿಜೆಪಿ ಮತ್ತೆ ಜನತೆಯ ಬಳಿ ಹೋಗುತ್ತಿದೆ. ಯಡಿಯೂರಪ್ಪ
ಅವರು ನಾಲ್ಕು ತಿಂಗಳಿಂದ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕೆ ಮಾಡುತ್ತಾ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದಲ್ಲಿ
ಟೀಕೆ ಬಿಟ್ಟು ಬಿಜೆಪಿ ಅಜೆಂಡಾ ಏನು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಸಚಿವ ಎಂ.ಬಿ.ಪಾಟೀಲ ಮಾತನಾಡಿ ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿದ್ದ ನಂದವಾಡಗಿ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಇನ್ನೂ 2.75 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಉಳಿದ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕಳೆದ ಬಿಜೆಪಿ ಸರಕಾರದ ಐದು ವರ್ಷದ ಅವಧಿಯಲ್ಲಿ ಕೇವಲ 18 ಸಾವಿರ ಕೋಟಿ ರೂ. ನೀರಾವರಿಗಾಗಿ ಖರ್ಚು ಮಾಡಿದೆ. ಕಾಂಗ್ರೆಸ್ ಸರಕಾರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಪ್ರತಿವರ್ಷ ನೀರಾವರಿ ಕ್ಷೇತ್ರಕ್ಕೆ 10 ಸಾವಿರ ಕೋಟಿಯಂತೆ ಈಗಾಗಲೇ 40 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ಸರಕಾರಕ್ಕಿಂತ ಮೂರುಪಟ್ಟು ಹಣ ನೀರಾವರಿಗೆ ಖರ್ಚು ಮಾಡಲಾಗಿದೆ. ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣಕ್ಕಾಗಿ 800 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಬಿಜೆಪಿ ಸಂಸ್ಕೃತಿ ಗೊತ್ತು: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ದೇಶ ಸಂಸ್ಕೃತಿ, ದೇಶ ಪ್ರೇಮದ
ಹೆಸರಿನಲ್ಲಿ ಬಿಜೆಪಿ ನಾಯಕರು ತಿರುಗಾಡುತ್ತಿದ್ದಾರೆ. ಆದರೆ ಪವಿತ್ರ ಸದನದಲ್ಲಿ ನೀಲಿಚಿತ್ರ ನೋಡಿ ಅವರು ತಮ್ಮ ಸಂಸ್ಕೃತಿ ತೋರಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇದು ಬಿಜೆಪಿಯ ನಿಜವಾದ ಸಂಸ್ಕೃತಿ. ಬಿಜೆಪಿಯವರು ಅತ್ಯಂತ ಕೀಳುಮಟ್ಟದ, ಕೆಳಮಟ್ಟದ ಪದಗಳನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೋಮುಗಲಭೆ ಸೃಷ್ಟಿಸಿ ರಾಜ್ಯದಲ್ಲಿ ಅಶಾಂತಿ ವಾತಾವರಣ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಜನತೆ ಮನದಲ್ಲಿ ಶಾಶ್ವತ ಉಳಿಯುವಂತಹ ಕೆಲಸ ಮಾಡುವುದು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ. ಜನರಿಗೋಸ್ಕರ ಕಾಂಗ್ರೆಸ್ ಪಕ್ಷವಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ಕೂರಿಸಲಿದ್ದಾರೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, 2013ರ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಲಭಿಸಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೆ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್‌ಗೆ ಒಲಿದು ಬರಲಿವೆ. ಈ ಸಮಾವೇಶ ಕಾಂಗ್ರೆಸ್ ಅ ಧಿಕಾರಕ್ಕೆ ಭದ್ರ ಬುನಾದಿಯಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜ, ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ, ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು, ಮಾಜಿ ಸಚಿವರಾದ ಅಮರೇಗೌಡ ಬಯ್ನಾಪುರ, ರಾಜಾ ಅಮರೇಶ್ವರ ನಾಯಕ, ಹಿರಿಯ ಮುಖಂಡ ಡಿ.ಎಸ್. ಹುಲಿಗೇರಿ, ಮಾಜಿ ಶಾಸಕರಾದ ರಾಜಾ ರಾಯಪ್ಪ ನಾಯಕ, ಹಸನಸಾಬ ದೋಟಿಹಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.